ಹೈದರಾಬಾದ್:
ಡಿಸೆಂಬರ್ 7 ರಂದು ನಡೆಯಲಿರುವ ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿರುವ ಪ್ರಪ್ರಥಮ ತೃತೀಯ ಲಿಂಗಿ ಅಭ್ಯರ್ಥಿ ಚಂದ್ರಮುಖಿ ಮುವ್ವಲ ಕಾಣೆಯಾಗಿದ್ದಾರೆ.
ಇವರು ಸಿಪಿಐ(ಎಂ) ನೇತೃತ್ವದ ಬಹುಜನ ಲೆಫ್ಟ್ ಫ್ರಂಟ್(BLF) ಪಕ್ಷದಿಂದ ಟಿಕೆಟ್ ಪಡೆದಿದ್ದು, ಹೈದರಾಬಾದಿನ ಗೊಷ್ಮಹಲ್ ವಿಧಾನಸಭಾ ಕ್ಷೇತ್ರದಿಂದ ಚುನಾವಣಾ ಕಣಕ್ಕೆ ಇಳಿದಿದ್ದಾರೆ. ಹಿರಿಯ ಕಾಂಗ್ರೆಸ್ ನಾಯಕ ಮುಖೇಶ್ ಗೌಡ್ ಮತ್ತು ಬಿಜೆಪಿ ನಾಯಕ ಟಿ.ರಾಜಾ ಸಿಂಗ್ ವಿರುದ್ಧ ಸ್ಪರ್ಧಿಸಿದ್ದಾರೆ. ಚಂದ್ರಮುಖಿ ತೆಲಂಗಾಣದ ಮೊದಲ ತೃತೀಯ ಲಿಂಗಿ ಅಭ್ಯರ್ಥಿ ಎಂಬ ಹೆಗ್ಗಳಿಕೆಯನ್ನು ಹೊಂದಿದ್ದಾರೆ.
ಬಹುಜನ್ ಎಡ ರಂಗದ ಅಭ್ಯರ್ಥಿಯಾಗಿ ಗೋಶಾಮಹಲ್ ಕ್ಷೇತ್ರದಿಂದ ಸ್ಪರ್ಧಿಸಿರುವ ಅವರು ಸೋಮವಾರದಿಂದ ಚುನಾವಣಾ ಪ್ರಚಾರ ಆರಂಭಿಸಿದ್ದರು. ಅಂದು ಪ್ರಚಾರ ಮುಗಿಸಿ ಬಂಜಾರಾ ಹಿಲ್ಸ್‌ನ ನಿವಾಸಕ್ಕೆ ಹಿಂತಿರುಗಿದ್ದರು ಎಂದು ಅವರ ಸ್ನೇಹಿತರು ಹೇಳಿದ್ದಾರೆ.
ಪ್ರಚಾರ ಮಾಡಿದ ಮರುದಿನದಿಂದ ನಾಪತ್ತೆ:
ಮಂಗಳವಾರ ಮುಂಜಾನೆ 5.45ಕ್ಕೆ ಸ್ವೀಟಿ ಎಂಬ ಮತ್ತೊಬ್ಬ ಮಂಗಳಮುಖಿ ಅವರನ್ನು ಏಳಿಸಿದ್ದರು. ಆದರೆ ನಿದ್ರೆ ಬರುತ್ತಿದೆ ಎಂದು ಮುವ್ವಲ ಮತ್ತೆ ನಿದ್ರೆಗೆ ಜಾರಿದ್ದರು ಎಂದು ದೂರಿನಲ್ಲಿ ಉಲ್ಲೇಖೀಸಲಾಗಿದೆ. 8.17ಕ್ಕೆೆ ರಾಜೇಶ್ ಎಂಬುವರು ಮಾಡಿದ ಕರೆಯೇ ಅಂತಿಮ ಕರೆಯಾಗಿದ್ದು ನಂತರ ಅವರ ಮೊಬೈಲ್ ಸ್ವಿಚ್‌ಆಫ್ ಆಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಭಾವಿಗಳ ಕೈವಾಡ ಶಂಕೆ:
ತೆಲಂಗಾಣದ ಹಿಜ್ರಾ ಅಂತರಲಿಂಗಿತ್ವ ತೃತೀಯ ಲಿಂಗಿ ಸಮಿತಿಯ ಕಾರ್ಯಕರ್ತೆಯಾಗಿರುವ ಚಂದ್ರಮುಖಿ ಹಲವು ರ್ಯಾಲಿಗಳು ಹಾಗೂ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ತೃತೀಯ ಲಿಂಗಿಗಳ ಪರವಾಗಿ ಧ್ವನಿಯೆತ್ತಿದ್ದಾರೆ. ನಮ್ಮ ಸಮುದಾಯಕ್ಕೆ ಸಹಾಯ ಮಾಡಲೆಂದೇ ಅವರು ಚುನಾವಣೆಗೆ ಸ್ಪರ್ಧಿಸಿದ್ದರು. ಆದರೆ, ಪ್ರಭಾವಿಗಳು ನಮ್ಮ ಸಮುದಾಯದ ಮಹಿಳೆಯರು ರಾಜಕೀಯಕ್ಕೆ ಬಾರದಂತೆ ತಡೆಯುತ್ತಿದ್ದಾರೆ. ಅದಕ್ಕೆ ಈ ಘಟನೆಯೇ ಸಾಕ್ಷಿ ಎಂದು ಬೆಂಬಲಿಗರು ಆರೋಪಿಸಿದ್ದಾರೆ.
ಚಂದ್ರಮುಖಿ ಮೊಬೈಲ್ ಕೂಡ ನಾಟ್ರೀಚಬಲ್ ಆಗಿದ್ದು, ಅವರ ತಾಯಿ ತುಂಬ ಹತಾಶರಾಗಿದ್ದಾರೆ. ಅವರನ್ನು ಬೆದರಿಸಿ ಅಪಹರಿಸಿದ್ದಾರೆ ಎಂದು ಚಂದ್ರಮುಖಿ ಬೆಂಬಲಿಗರು ಆರೋಪಿಸಿ ಬಂಜಾರ ಹಿಲ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
