ಈರೋಡ್(ತಮಿಳುನಾಡು):
ಸುಮಾರು 18 ವರ್ಷಗಳ ಬಳಿಕ ನಟ ಡಾ. ರಾಜ್ ಕುಮಾರ್ ಅವರ ಕಿಡ್ನಾಪ್ ಪ್ರಕರಣದ ತೀರ್ಪು ಇಂದು(ಸೆ.25) ಪ್ರಕಟಗೊಂಡಿದೆ.
ಈ ಸಂಬಂಧ ವೀರಪ್ಪನ್ ಸೇರಿದಂತೆ 8 ಜನರ ವಿರುದ್ಧ ಆರೋಪಪಟ್ಟಿ ಹೊರಿಸಲಾಗಿತ್ತು. ಆದರೆ ವಿಚಾರಣೆ ವೇಳೆ ವೀರಪ್ಪನ್, ಸೇತುಕುಡಿ ಗೋವಿಂದನ್, ರಂಗಸಾಮಿ ಸಾವನ್ನಪ್ಪಿದ್ದರು.
ಪ್ರಕರಣದ ಆರೋಪಿಗಳ ಪೈಕಿ 5 ಮಂದಿ ಜೈಲಿನಲ್ಲಿದ್ದರು. ಇವರ ಮೇಲಿನ ಆರೋಪಗಳನ್ನು ಸಾಬೀತುಪಡಿಸಲು ಸೂಕ್ತ ಸಾಕ್ಷ್ಯಗಳು ಸಿಕ್ಕಿಲ್ಲ. ಆರೋಪಿಗಳು ವೀರಪ್ಪನ್ ಕಡೆಯವರೇ ಎಂದು ಸಾಬೀತುಪಡಿಸಲು ಯಾವುದೇ ಸಾಕ್ಷಿಗಳನ್ನೂ ಒದಗಿಸಿಲ್ಲ. ಅಲ್ಲದೇ ವಿಚಾರಣೆ ವೇಳೆ ಡಾ. ರಾಜ್ಕುಮಾರ್ ಅವರ ಕುಟುಂಬ ಕೋರ್ಟ್ಗೆ ಹಾಜಾರಾಗಲಿಲ್ಲ ಎಂದು ಕೋರ್ಟ್ ತಿಳಿಸಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈರೋಡ್ ಜಿಲ್ಲೆಯ ಗೋಪಿಚೆಟ್ಟಿಪಾಳ್ಯಂನ ನ್ಯಾಯಾಲಯ ತೀರ್ಪು ಪ್ರಕಟಿಸಿದ್ದು, ಎಲ್ಲಾ ಆರೋಪಿಗಳನ್ನು ದೋಷಮುಕ್ತಗೊಳಿಸಿದೆ.
2000 ಇಸವಿಯ ಜುಲೈ 30 ರಂದು, ಗಾಜನೂರಿನ ತೋಟದ ಮನೆಯಿಂದ ಡಾ.ರಾಜ್ ಅವರನ್ನು, ವೀರಪ್ಪನ್ ಮತ್ತವರ ತಂಡ ಅಪಹರಿಸಿತ್ತು. 3 ತಿಂಗಳ ಕಾಲ ರಾಜ್ ಅವರನ್ನು ಸತ್ಯಮಂಗಲಂ ಹಾಗೂ ಭವಾನಿ ಕಾಡಿನಲ್ಲಿ ಇರಿಸಿಕೊಳ್ಳಲಾಗಿತ್ತು. ಆ ಸಂದರ್ಭದಲ್ಲಿ ಕರ್ನಾಟಕ ಹಾಗೂ ತಮಿಳುನಾಡಿನಲ್ಲಿ ಆತಂಕದ ಪರಿಸ್ಥಿತಿ ಇತ್ತು. ತಮಿಳು ಮ್ಯಾಗಜೀನ್ ನಕ್ಕೀರನ್ನ ಪತ್ರಕರ್ತ ಆರ್ಆರ್ ಗೋಪಾಲ್ ನೇತೃತ್ವದಲ್ಲಿ 6 ಸುತ್ತುಗಳ ಮಾತುಕತೆಯ ಬಳಿಕ ಕೊನೆಗೂ 108 ದಿನಗಳ ಬಳಿಕ ರಾಜ್ಕುಮಾರ್ ಬಿಡುಗಡೆಯಾದ್ದರು.
ಡಾ. ರಾಜ್ ಅಪಹರಣದ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಅಭಿಮಾನಿಗಳು ಬೀದಿಗಿಳಿದು ಆಕ್ರೋಶ ವ್ಯಕ್ತಪಡಿಸಿದ್ದರು. ಇದು ಅಂದಿನ ತಮಿಳುನಾಡು ಸಿಎಂ ಕರುಣಾನಿಧಿ ಹಾಗೂ ಕರ್ನಾಟಕ ಸಿಎಂ ಎಸ್.ಎಂ ಕೃಷ್ಣ ಅವರ ನಿದ್ದೆಗೆಡಿಸಿತ್ತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
