ಚಿತ್ರದುರ್ಗ:
ಶಕ್ತಿ ಹಾಗೂ ಸಮಯ ವ್ಯರ್ಥವಾಗುತ್ತದೆ ಎನ್ನುವ ಕಾರಣಕ್ಕಾಗಿ ಉನ್ನತ ಶಿಕ್ಷಣದಲ್ಲಿ ಕ್ರೀಡೆಗೆ ಪ್ರೋತ್ಸಾಹ ಸಿಗುತ್ತಿಲ್ಲದಿರುವುದು ನೋವಿನ ಸಂಗತಿ ಎಂದು ಕುವೆಂಪು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಜೋಗನ್ ಶಂಕರ್ ಅಸಮಾಧಾನ ವ್ಯಕ್ತಪಡಿಸಿದರು.
ಸರಸ್ವತಿ ಕಾನೂನು ಕಾಲೇಜು ಹಾಗೂ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾನಿಲಯ ಹುಬ್ಬಳ್ಳಿ ಇವರುಗಳ
ಸಹಯೋಗದೊಂದಿಗೆ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾನಿಲಯದ ಅಂತರ್ ಕಾಲೇಜುಗಳ ಪುರುಷರ ಫುಟ್‍ಬಾಲ್ ಪಂದ್ಯಾವಳಿ ಮತ್ತು ವಿಶ್ವವಿದ್ಯಾನಿಲಯ ತಂಡದ ಆಯ್ಕೆಯನ್ನು ಸರಸ್ವತಿ ಕಾನೂನು ಕಾಲೇಜು ಸಭಾಂಗಣದಲ್ಲಿ ಸೋಮವಾರ ಉದ್ಘಾಟಿಸಿ ಮಾತನಾಡಿದರು.
ನೂರು ಕಾನೂನು ಕಾಲೇಜುಗಳಿಂದ ಕೇವಲ 12 ತಂಡಗಳು ಭಾಗವಹಿಸಿರುವುದನ್ನು ನೋಡಿದರೆ ಉನ್ನತ ಶಿಕ್ಷಣದಲ್ಲಿ ಕ್ರೀಡೆಗೆ ಪ್ರೋತ್ಸಾಹ ಸಿಗುತ್ತಿಲ್ಲ ಎನ್ನುವುದು ಗೊತ್ತಾಗುತ್ತದೆ. ಹಾಗಾಗಿ ಕ್ರೀಡಾಪಟುಗಳಿಗೆ ತರಬೇತಿ ನೀಡುವ ಕೆಲಸವನ್ನು ನಮ್ಮ ವಿಶ್ವವಿದ್ಯಾನಿಲಯದಿಂದ ಮಾಡಲಾಗುತ್ತಿದೆ. ಪಠ್ಯದ ಜೊತೆಗೆ ಆಟಗಳಲ್ಲಿ ಭಾಗವಹಿಸುವವರು ಅಕಾಡೆಮಿಯಲ್ಲಿ ಸಾಧನೆ ಮಾಡುತ್ತಾರೆ ಎಂಬುದು ಸಂಶೋಧನೆಯಿಂದ ಗೊತ್ತಾಗಿದೆ. ಕ್ರೀಡೆಯಿಂದ ಮಾನಸಿಕ ಹಾಗೂ ದೈಹಿಕವಾಗಿ ಆರೋಗ್ಯವಂತರಾಗಿರಬಹುದು. ಸ್ವಾಭಿಮಾನ ಹೆಚ್ಚಿಸಿ ಒತ್ತಡವನ್ನು ಕಡಿಮೆ ಮಾಡುವ ಶಕ್ತಿ ಕ್ರೀಡೆಗಿದೆ ಎಂದು ಹೇಳಿದರು.
ಕ್ರೀಡೆಯಿಂದ ಆರೋಗ್ಯವಂತರಾಗಿರುವುದಲ್ಲದೆ ಧೀರ್ಘಾಯುಷಿಗಳಾಗಬಹುದು. ಆಟದಲ್ಲಿ ಬೇರೆ ಬೇರೆ ಊರುಗಳ ಕ್ರೀಡಾಪಟುಗಳು ಭಾಗವಹಿಸುವುದರಿಂದ ಒಬ್ಬರಿಗೊಬ್ಬರ ಪರಿಚಯವಾಗಿ ಸ್ನೇಹ, ಸೌಹಾರ್ಧ ವೃದ್ದಿಯಾಗಲಿದೆ. ಕೆಲವರು ದೇಹದಲ್ಲಿರುವ ಕೊಬ್ಬನ್ನು ಕರಗಿಸಲು ವ್ಯಾಯಾಮ ಮಾಡುತ್ತಾರೆ. ಕ್ರೀಡೆಯಿಂದಲೂ ದೇಹದಲ್ಲಿರುವ ಕೊಬ್ಬಿನಂಶ ಕರಗಿ ಬೊಜ್ಜು ನಿವಾರಣೆಯಾಗಲಿದೆ ಎಂದು ಕ್ರೀಡೆಯ ಮಹತ್ವ ತಿಳಿಸಿದರು.
ಕೆಲವು ಶಿಕ್ಷಕರುಗಳಿಗೆ ಪಾಠ ಹೇಳುವ ಮೂಡಿಲ್ಲ. ಇನ್ನು ವಿದ್ಯಾರ್ಥಿಗಳು ಪಾಠ ಕೇಳುವ ಮೂಡಿಲ್ಲ ಎನ್ನುವಂತಾಗಿದೆ. ಎಲ್ಲದಕ್ಕೂ ಕ್ರೀಡೆಯಲ್ಲಿ ಪರಿಹಾರವಿದೆ. ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕೆ ಕ್ರೀಡೆ ಸಹಕಾರಿಯಾಗಲಿದೆ ಎಂದರು.
ಸರಸ್ವತಿ ಕಾನೂನು ಕಾಲೇಜು ಅಧ್ಯಕ್ಷರು ಹಾಗೂ ರಾಜ್ಯಸಭೆ ಮಾಜಿ ಸದಸ್ಯರಾದ ಹೆಚ್.ಹನುಮಂತಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ ಅಂತರ ಕಾಲೇಜುಗಳ ಪುರುಷರ ಫುಟ್‍ಬಾಲ್ ಪಂದ್ಯಾವಳಿಯಲ್ಲಿ ಹನ್ನೆರಡು ತಂಡಗಳು ಆಗಮಿಸಿರುವುನ್ನು ಗಮನಿಸಿದರೆ ಕಾನೂನು ವಿಶ್ವವಿದ್ಯಾನಿಲಯ ಕ್ರೀಡೆಗೆ ಗಮನ ಕೊಡುತ್ತಿಲ್ಲ ಎನ್ನುವುದು ತಿಳಿಯುತ್ತದೆ. ಕಂಪ್ಯೂಟರ್, ಮೊಬೈಲ್, ವಾಟ್ಸ್‍ಪ್, ಫೇಸ್‍ಬುಕ್‍ನಲ್ಲಿ ತೊಡಗಿರುವ ಯುವಕರು ತಪ್ಪು ದಾರಿ ಹಿಡಿಯುತ್ತಿರುವುದು ಅತ್ಯಂತ ನೋವಿನ ಸಂಗತಿ. ಓದುವುದಷ್ಟೆ ಅಲ್ಲ. ವಿದ್ಯಾರ್ಥಿಗಳು ಕ್ರೀಡೆಯಲ್ಲಿಯೂ ತೊಡಗಿಕೊಂಡಾಗ ಸನ್ನಡತೆಯನ್ನು ರೂಢಿಸಿಕೊಳ್ಳಬಹುದು ಎಂದು ತಿಳಿಸಿದರು.
ಪದವಿ ಪಡೆಯುವುದಕ್ಕಿಂತಲೂ ಮುಖ್ಯವಾಗಿ ಮಕ್ಕಳಿಗೆ ನೈತಿಕ ಶಿಕ್ಷಣ ಬೇಕಾಗಿದೆ. ಕ್ರೀಡೆಯಲ್ಲಿ ಎಲ್ಲರೂ ಗೆಲ್ಲಲೇಬೇಕೆಂಬ ಆಸೆಯಿಂದ ಭಾಗವಹಿಸುತ್ತಾರೆ. ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸಿ ಕ್ರೀಡೆಯನ್ನು ಸ್ನೇಯಮಯವಾಗಿ ತೆಗೆದುಕೊಳ್ಳಿ ಎಂದು ಕಾನೂನು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಸರಸ್ವತಿ ಕಾನೂನು ಕಾಲೇಜಿನ ಪ್ರಾಚಾರ್ಯರಾದ ಪ್ರೊ.ಎಂ.ಎಸ್.ಸುಧಾದೇವಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾನೂನು ಕಾಲೇಜಿನ ಆಡಳಿತ ಮಂಡಳಿ ಸದಸ್ಯರುಗಳಾದ ನೋಟರಿ ಚಲ್ಮೇಶ್, ಚಂದ್ರಶೇಖರ್ ವೇದಿಕೆಯಲ್ಲಿದ್ದರು.
ಮಂಜುಶ್ರಿ ಪ್ರಾರ್ಥಿಸಿದರು. ಎನ್.ಡಿ.ಗೌಡ ಸ್ವಾಗತಿಸಿದರು. ದೈಹಿಕ ಶಿಕ್ಷಕ ಮುರುಗೇಶ್ ನಿರೂಪಿಸಿ ವಂದಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
