ಮುಂಬೈ:
ಯಾರೇ ಸಿಎಂ ಆದರೂ ನಾವು ವಾಪಸ್ ಬರುವುದಿಲ್ಲ. ನಮ್ಮ ನಿರ್ಧಾರದಲ್ಲಿ ಯಾವ ಬದಲಾವಣೆ ಇಲ್ಲ ಎಂದು ಮೈತ್ರಿ ಸರ್ಕಾರದ ರೆಬೆಲ್ ಶಾಸಕರು ಸ್ಪಷ್ಟ ಸಂದೇಶ ರವಾನಿಸಿದ್ದಾರೆ.
ಅಜ್ಞಾತ ಸ್ಥಳದಿಂದ ವಿಡಿಯೋ ಸಂದೇಶ ಕಳುಹಿಸಿರುವ ಅತೃಪ್ತರು, ನಾವು ಯಾವುದೇ ಕಾರಣಕ್ಕೂ ಅಧಿವೇಶನಕ್ಕೆ ಬರುವುದಿಲ್ಲ. ಕಾಂಗ್ರೆಸ್ ಪಕ್ಷಕ್ಕೆ ಮುಖ್ಯಮಂತ್ರಿ ಹುದ್ದೆ ಆಫರ್ ಬಂದಿದೆ. ಯಾರೇ ಸಿಎಂ ಆದರೂ ನಾವು ವಾಪಸ್ ಬರುವುದಿಲ್ಲ. ನಮ್ಮ ನಿರ್ಧಾರದಲ್ಲಿ ಯಾವ ಬದಲಾವಣೆ ಇಲ್ಲ ಎಂದಿದ್ದಾರೆ.
ನಾವು ಎಲ್ಲ 13 ಅತೃಪ್ತ ಶಾಸಕರು ಜೀವಂತವಾಗಿದ್ದೇವೆ. ಆರೋಗ್ಯವಾಗಿದ್ದೇವೆ. ಒಗ್ಗಟ್ಟಾಗಿದ್ದೇವೆ. ಎಲ್ಲರೂ ಫ್ರೀಡಂ ಆಗಿದ್ದಾರೆ ಎಂದು ವಿಡಿಯೋ ಸಂದೇಶ ಕಳುಹಿಸುವ ಮೂಲಕ ಅತೃಪ್ತ ಶಾಸಕರು ಮತ್ತೆ ತಮ್ಮ ಒಗ್ಗಟ್ಟು ಪ್ರದರ್ಶನ ಮಾಡಿದ್ದಾರೆ.
ಜೆಡಿಎಸ್ ಮಾಜಿ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಮಾತನಾಡಿ, ರಾಜ್ಯದಲ್ಲಿ ರಾಕ್ಷಸ ರಾಜಕಾರಣ ನಡೆಯುತ್ತಿದೆ. ರಾಜ್ಯ ರಾಜಕಾರಣಕ್ಕೆ ಒಳ್ಳೆಯದಾಗಬೇಕು. ಮೈತ್ರಿ ನಾಯಕರಿಗೆ ಬುದ್ಧಿ ಕಲಿಸಬೇಕಿದೆ. ನಾವು ದುಡ್ಡು, ಅಧಿಕಾರಕ್ಕೆ ಮುಂಬೈಗೆ ಬಂದಿಲ್ಲ. ತತ್ವ, ಸಿದ್ಧಾಂತದ ಉಳಿವಿಗೆ ರಾಜೀನಾಮೆ ನೀಡಿದ್ದೇವೆ. ಹಣ, ಅಧಿಕಾರದ ಆಮಿಷಕ್ಕೆ ಬಲಿಯಾಗಿಲ್ಲ ಎಂದು ಹೇಳಿದರು.
ಮಾಜಿ ಸಿಎಂ ಸಿದ್ದರಾಮಯ್ಯ ಆಪ್ತ, ಶಾಸಕ ಭೈರತಿ ಬಸವರಾಜು ಮಾತನಾಡಿ, ಕಾಂಗ್ರೆಸ್ನ ಹಿರಿಯ ನಾಯಕರೊಬ್ಬರು ನಮ್ಮನ್ನು ಗನ್ಪಾಯಿಂಟ್ನಲ್ಲಿ ಇಡಲಾಗಿದೆ ಎಂದು ಸದನದಲ್ಲಿ ಹೇಳಿದ್ದಾರೆ. ಆದರೆ, ಗನ್ ಇಟ್ಟು ಹೆದರಿಸುವ ಸಂದರ್ಭ ಇಲ್ಲಿಲ್ಲ. ನಾವೆಲ್ಲರೂ ಫ್ರೀಡಂ ಆಗಿದ್ದೇವೆ ಎಂದು ಹೇಳಿದರು. ಇದೀಗ ನಮ್ಮನ್ನು ಬೆತ್ತಲು ಮಾಡಲು ಹೊರಟಿರುವ ನಮ್ಮ ನಾಯಕರೊಬ್ಬರು ಲೋಕಸಭೆ ಚುನಾವಣೆಯ ಬಳಿಕ ಒಂದು ಕ್ಷಣವೂ ಈ ಸರ್ಕಾರವನ್ನು ಉಳಿಸಬಾರದು ಎಂದು ಹೇಳಿದ್ದರು. ಅದರಂತೆ ನಡೆದುಕೊಂಡೆವು. ಯಾವುದೇ ಹಣ, ಅಧಿಕಾರದ ಆಸೆಗಾಗಿ ನಾವು ಯಾರೂ ಇಲ್ಲಿಗೆ ಬಂದಿಲ್ಲ ಎಂದು ಹೇಳಿದರು.
ಶುಕ್ರವಾರದ ಕಲಾಪದಲ್ಲಿ ಶಾಸಕರೊಬ್ಬರು ರಾಜೀನಾಮೆ ಕೊಟ್ಟು ಹೋಗಿರುವ ಶಾಸಕರು ಸತ್ತಿದ್ದಾರೋ, ಬದುಕಿದ್ದಾರೋ ಗೊತ್ತಿಲ್ಲ. ಕನಿಷ್ಠ ಅವರನ್ನು ತೋರಿಸುವ ವ್ಯವಸ್ಥೆಯನ್ನಾದರೂ ಮಾಡಬೇಕು ಎಂದು ಸ್ಪೀಕರ್ಗೆ ಮನವಿ ಮಾಡಿಕೊಂಡಿದ್ದ ಹಿನ್ನೆಲೆಯಲ್ಲಿ ಸೋಮಶೇಖರ್ ಈ ಸ್ಪಷ್ಟನೆ ನೀಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ