ನವದೆಹಲಿ :
ರಾಜ್ಯಸಭೆ ವಿಪಕ್ಷ ನಾಯಕ ಸ್ಥಾನಕ್ಕೆ ಮಲ್ಲಿಕಾರ್ಜುನ ಖರ್ಗೆ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ರಾಜ್ಯಸಭಾ ಸಭಾಪತಿಗಳಿಗೆ ಕಾಂಗ್ರೆಸ್ ತಿಳಿಸಿದೆ.
ಗುಲಾಮ್ ನಬಿ ಆಜಾದ್ ಅವಧಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ತೆರವಾದ ರಾಜ್ಯಸಭಾ ಪ್ರತಿಪಕ್ಷ ಸ್ಥಾನವನ್ನು ಮಲ್ಲಿಕಾರ್ಜುನ ಖರ್ಗೆ ತುಂಬಲಿದ್ದಾರೆ ಎಂದು ಕಾಂಗ್ರೆಸ್ ಪಕ್ಷ ರಾಜ್ಯಸಭೆಗೆ ಈ ವಿಷಯ ತಿಳಿಸಿದೆ.
ಕಾಂಗ್ರೆಸ್ ಪಕ್ಷ 37 ಸದಸ್ಯರನ್ನು ಹೊಂದಿದ್ದು, ಈ ಪೈಕಿ ಎ.ಕೆ.ಆಂಟನಿ, ಪಿ.ಚಿದಂಬರಂ, ಆಸ್ಕರ್ ಫರ್ನಾಂಡಿಸ್, ದೀಪೇಂದರ್ ಸಿಂಗ್ ಹೂಡಾ, ಜೈರಾಂ ರಮೇಶ್, ದಿಗ್ವಿಜಯ್ ಸಿಂಗ್, ಮನಮೋಹನ್ ಸಿಂಗ್ , ಕೆ.ಸಿ. ವೇಣುಗೋಪಾಲ್ ಮುಂತಾದ ಹಿರಿಯ ನಾಯಕರಲ್ಲಿ ಯಾರನ್ನು ವಿಪಕ್ಷ ಸ್ಥಾನಕ್ಕೆ ಆಯ್ಕೆ ಮಾಡಲಾಗುತ್ತದೆ ಎಂಬ ಕುತೂಹಲ ಮೂಡಿತ್ತು. ಲೋಕಸಭಾ ವಿಪಕ್ಷ ನಾಯಕರಾಗಿ ಅನುಭವ ಹೊಂದಿರುವ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಈಗ ರಾಜ್ಯಸಭೆ ವಿಪಕ್ಷ ನಾಯಕರಾಗುವ ಅವಕಾಶ ಸಿಕ್ಕಿದೆ.
ಈಗಾಗಲೇ ಲೋಕಸಭೆಯಲ್ಲಿ ಪ್ರತಿಪಕ್ಷ ಸ್ಥಾನವನ್ನು ಸಮರ್ಥವಾಗಿ ನಿಭಾಯಿಸಿದ್ದ ಮಲ್ಲಿಕಾರ್ಜುನ ಖರ್ಗೆ ಇದೀಗ ರಾಜ್ಯಸಭೆಯಲ್ಲಿ ಪ್ರತಿಪಕ್ಷ ಸ್ಥಾನವನ್ನು ಭರ್ತಿ ಮಾಡಲಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಸೋಲುಂಡಿದ್ದ ಮಲ್ಲಿಕಾರ್ಜುನ ಖರ್ಗೆ ಮತ್ತು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಇತ್ತೀಚೆಗೆ ರಾಜ್ಯಸಭೆಗೆ ಆಯ್ಕೆಯಾಗಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ