ನಾಸಿಕ್:

ಸಾರಿಗೆ ಬಸ್ ಹಾಗೂ ಆಟೋ ನಡುವೆ ನಡೆದ ಅಪಘಾತದಲ್ಲಿ 25 ಮಂದಿ ಮೃತಪಟ್ಟಿರುವ ಘಟನೆ ಮಹಾರಾಷ್ಟ್ರದ ನಾಸಿಕ್‌ನಲ್ಲಿ ಮಂಗಳವಾರ ಸಂಜೆ ಸಂಭವಿಸಿದೆ.
ಡಿಕ್ಕಿಯಾದ ಆಟೋ ಮತ್ತು ಬಸ್ ರಸ್ತೆ ಪಕ್ಕದಲ್ಲಿದ್ದ ಬಾವಿಗೆ ಉರುಳಿವೆ. ಮೊದಲು ಆಟೋ ಬಿದ್ದಿದ್ದು, ಬಳಿಕ ಬಸ್ ಅದರ ಮೇಲೆ ಉರುಳಿದೆ. ಅಪಘಾತಕ್ಕೀಡಾದ ಬಸ್ ಮಹಾರಾಷ್ಟ್ರ ರಸ್ತೆ ಸಾರಿಗೆ ನಿಗಮಕ್ಕೆ ಸೇರಿದ್ದು, ಬಸ್ ಟೈರ್ ಸ್ಫೋಟಗೊಂಡು ಚಾಲಕನ ನಿಯಂತ್ರಣ ತಪ್ಪಿ ಆಟೋಗೆ ಬಸ್ ಡಿಕ್ಕಿ ಹೊಡೆದಿದೆ. ಪರಿಣಾಮ ಎರಡೂ ವಾಹನಗಳು ರಸ್ತೆ ಬದಿಯಲ್ಲಿದ್ದ ಬಾವಿಗೆ ಬಿದ್ದಿವೆ.
ಸುದ್ದಿ ತಿಳಿಯುತ್ತಿದ್ದಂತೆ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ರಕ್ಷಣಾ ಕಾರ್ಯ ಕೈಗೊಂಡರು. ಬಾವಿಯಲ್ಲಿ ಸಿಲುಕಿದವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಟೋ ಮತ್ತು ಬಸ್ನ್ನು ಕ್ರೇನ್ ಸಹಾಯದಿಂದ ಹೊರತೆಗೆಯಲಾಗಿದೆ. ಪಂಪ್ಸೆಟ್ ಸಹಾಯದಿಂದ ಬಾವಿಯಲ್ಲಿ ನೀರು ಹೊರ ತೆಗೆದು ಮತ್ಯಾರಾದ್ರೂ ಸಿಲುಕಿದ್ದಾರಾ ಎಂಬುದನ್ನು ಪರೀಕ್ಷಿಸಲಾಗುತ್ತಿದೆ.
ಅಪಘಾತದಲ್ಲಿ ಸುಮಾರು 25 ಜನ ಸಾವನ್ನಪ್ಪಿದ್ದು, 35ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ.
ಮೃತಪಟ್ಟವರ ಕುಟುಂಬಸ್ಥರಿಗೆ ಮಹಾರಾಷ್ಟ್ರ ಸರ್ಕಾರ 10 ಲಕ್ಷ ರೂಪಾಯಿ ಪರಿಹಾರ ಘೋಷಿಸಿದೆ. ಜೊತೆಗೆ ಗಾಯಗೊಂಡವರ ಚಿಕಿತ್ಸಾ ವೆಚ್ಚವನ್ನು ಭರಿಸಲಾಗುತ್ತದೆ ಎಂದು ಭರವಸೆ ನೀಡಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








