ತುಮಕೂರು:

ಸರ್ಕಾರಿ ಯೋಜನೆಗಳು ಹೇಗೆಲ್ಲಾ ವೈಫಲ್ಯ ಕಾಣುತ್ತವೆ ಎಂಬುದಕ್ಕೆ ತುಮಕೂರು ಹೊರವಲಯದಲ್ಲಿ ನಿರ್ಮಾಣಗೊಂಡಿರುವ ದಿಬ್ಬೂರು ವಸತಿ ಸಮುಚ್ಛಯವೇ ಒಂದು ತಾಜಾ ಉದಾಹರಣೆ.
ಸುಂದರವಾಗಿ, ಅಂದವಾಗಿ ಕಾಣುವ ಆ ಮನೆಗಳು ಉದ್ಘಾಟನೆಯಾಗಿ ಇನ್ನೂ ಒಂದು ವರ್ಷ ತುಂಬಿಲ್ಲ. ಆಗಲೇ ಇಲ್ಲಿ ರೋದನೆಗಳು ಶುರುವಾಗಿವೆ. ಈ ವಸತಿಗಳು ಉದ್ಘಾಟನೆಯಾಗುವ ಕಾಲಕ್ಕೆ ಅದನ್ನು ನೋಡಿದವರೆಲ್ಲ ಬಾಯಿಮೇಲೆ ಬೆರಳಿಟ್ಟುಕೊಂಡವರೇ ಹೆಚ್ಚು. ನನಗೂ ಇಲ್ಲೊಂದು ಮನೆ ಸಿಗಬಾರದಿತ್ತೆ? ಎಂದು ಕೆಲವರು ಹಲುಬಿದರು. ಅಷ್ಟರ ಮಟ್ಟಿಗೆ ಆ ಮನೆಗಳು ಸುಂದರವಾಗಿ ಕಾಣುತ್ತಿದ್ದವು. ಈಗ ನೋಡಿದರೆ ಆಗಿನ ಅಂದ, ಚಂದ ಎಲ್ಲವೂ ಮರೆಯಾಗುತ್ತಿದೆ. ವಸತಿ ನಿಲಯದೊಳಗೆ ಹೊಕ್ಕರೆ ಹಲವು ಅವ್ಯವಸ್ಥೆಗಳು ಗೋಚರಿಸುತ್ತವೆ. ಸರ್ಕಾರ ನಿರ್ಮಾಣ ಮಾಡಿದ ಮನೆಗಳು ಇವೇನಾ ಎನ್ನುವಂತಹ ಪ್ರಶ್ನೆ ಏಳುತ್ತವೆ.
ತುಮಕೂರು ನಗರದಲ್ಲಿ ಸಾಧ್ಯವಾದಷ್ಟು ಕೊಳಗೇರಿ ಮುಕ್ತ ನಗರವನ್ನಾಗಿಸುವ ಹಾಗೂ ಇತರೆ ಕಡು ಬಡವರಿಗೆ ಆಶ್ರಯ ಕಲ್ಪಿಸುವ ಉದ್ದೇಶದಿಂದ ದಿಬ್ಬೂರು ಬಳಿ 1200 ಮನೆಗಳನ್ನು ನಿರ್ಮಿಸಲಾಯಿತು. 1200 ಮನೆಗಳ ಪೈಕಿ 600 ಮನೆಗಳನ್ನು ಕೊಳಗೇರಿ ನಿವಾಸಿಗಳಿಗಾಗಿಯೇ ಮೀಸಲಿರಿಸಲಾಯಿತು. ಉಳಿದ 600 ಮನೆಗಳನ್ನು ನಗರದಲ್ಲಿ ನಗರ ಪ್ರದೇಶದ ವಸತಿರಹಿತ ಬಡವರಿಗಾಗಿ ಮೀಸಲಿರಿಸಲಾಯಿತು. ಅದರಂತೆಯೇ ಮನೆಯ ಹಂಚಿಕೆ ಪ್ರಕ್ರಿಯೆಗಳು ನಡೆದವು.
ಇಷ್ಟೆಲ್ಲಾ ಆದರೂ ತುಮಕೂರು ನಗರ ಮಾತ್ರ ಕೊಳಗೇರಿ ಮುಕ್ತವಾಗಿಲ್ಲ. ಹಿಂದೆ ಯಾವ ಸ್ಥಿತಿ ಇತ್ತೋ ಅದೇ ಸ್ಥಿತಿ ಈಗಲೂ ಇದೆ. ಹಾಗಾದರೆ ಫಲಾನುಭವಿಗಳು ಯಾರು ಎಂಬ ಪ್ರಶ್ನೆ ಗಾಢವಾಗಿ ಕಾಣುತ್ತಿದೆ.
ದಿಬ್ಬೂರು ಸಮೀಪವೇ ಇರುವ ದೇವರಾಜ ಅರಸು ಬಡಾವಣೆಯಲ್ಲಿ ರಾಜೀವ್ ಆವಾಸ್ ಯೋಜನೆ ಅಡಿ ಈ ಮನೆಗಳು ನಿರ್ಮಾಣವಾಗಿವೆ. ಒಟ್ಟು 1200 ಮನೆಗಳ ಪೈಕಿ ಇನ್ನೂ ಕೆಲವು ಮನೆಗಳ ಹಂಚಿಕೆ ಪ್ರಕ್ರಿಯೆ ಬಾಕಿ ಇದೆ.
ಹೋಗಲು ಹಿಂಜರಿಕೆ:

ಕೆಲವು ಫಲಾನುಭವಿಗಳು ಆ ಮನೆಯೊಳಗೆ ಸೇರಿಕೊಂಡಿದ್ದಾರೆ. ಮತ್ತೆ ಕೆಲವರು ಅಲ್ಲಿಗೆ ಹೋಗಲು ಹಿಂದೆ ಮುಂದೆ ನೋಡುತ್ತಿದ್ದಾರೆ. ಇನ್ನು ಕೆಲವರು ಬಾಡಿಗೆ ಕೊಟ್ಟಿದ್ದಾರೆ. ಮತ್ತೆ ಕೆಲವು ಫಲಾನುಭವಿಗಳು ತಮ್ಮ ಮನೆಗಳಿಗೆ ಬೀಗ ಜಡಿದುಕೊಂಡು ತಮ್ಮ ಮೂಲ ವಾಸಸ್ಥಳದಲ್ಲಿಯೇ ಉಳಿದಿದ್ದಾರೆ. ಇನ್ನು ಕೆಲವರು ಅಲ್ಲಿಗೆ ತೆರಳುವ ಸಿದ್ಧತೆಯಲ್ಲಿದ್ದಾರೆ. (ಅನಿವಾರ್ಯ ಎಂಬಂತೆ).
ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ಈ ಮನೆಗಳನ್ನು ನಿರ್ಮಿಸಲಾಗಿದೆ. ಮನೆ ನಿರ್ಮಾಣದಲ್ಲಿ ಕಳಪೆ ಕಾಮಗಾರಿ ಕಣ್ಣಿಗೆ ರಾಚುತ್ತದೆ. ಯಾರನ್ನು ಬಯ್ಯುವುದು, ಯಾರನ್ನು ಪ್ರಶ್ನಿಸುವುದು….. ಸರ್ಕಾರದ ಇಂತಹ ಜನಪರ ಯೋಜನೆಗಳು ಯಾತಕ್ಕಾಗಿ ಎಂಬ ಪ್ರಶ್ನೆ ಏಳುತ್ತವೆ. ಸರ್ಕಾರದ ಕೋಟ್ಯಂತರ ರೂ.ಗಳ ಬೊಕ್ಕಸದ ಹಣ ಬರಿದಾಯಿತು. ಉಪಯೋಗ ಎಷ್ಟು ಮತ್ತು ಯಾರಿಗೆ ಎಂಬ ಪ್ರಶ್ನೆಗಳು ಈಗ ಹರಿದಾಡುತ್ತಿವೆ.
ಹೋರಾಟಗಳು ಲೆಕ್ಕವಿಲ್ಲ :
ದಿಬ್ಬೂರು ವಸತಿ ಯೋಜನೆ ಅಡಿಯಲ್ಲಿ ಮನೆ ದೊರಕಿಸಿಕೊಳ್ಳಲು ಬಹಳ ಹೋರಾಟಗಳೇ ನಡೆದವು. ಅತ್ಯಂತ ಬಡವರಿಗೆ ಅದರಲ್ಲೂ ವಿಶೇಷವಾಗಿ ಕೊಳಗೇರಿ ನಿವಾಸಿಗಳಿಗೆ ಆದ್ಯತೆ ಮೇರೆಗೆ ಈ ಮನೆಗಳನ್ನು ಹಂಚುವ ಪ್ರಕ್ರಿಯೆ ನಡೆಯಿತು. ಈ ಸಂದರ್ಭದಲ್ಲಿ ಹೋರಾಟಗಾರರು, ಕಾರ್ಪೊರೇಟರ್‍ಗಳು, ಮಧ್ಯವರ್ತಿಗಳು ಹುಟ್ಟಿಕೊಂಡರು. ಪುಕ್ಸಟ್ಟೆ ಮನೆ ನನಗೂ ಇರಲಿ ಎಂಬಂತೆ ಕೆಲವರು ಹೋರಾಟಗಾರರು ಹಾಗೂ ಕಾರ್ಪೊರೇಟರ್‍ಗಳ ಹಿಂದೆ ಬಿದ್ದರು. ಅದಕ್ಕೆ ಸಂಬಂಧಿಸಿದ ಅರ್ಹತೆ ತೋರ್ಪಡಿಸುವ ಕಾಗದ ಪತ್ರಗಳನ್ನು ಹೊಂದಿಸಿಕೊಂಡರು. ಇವೆಲ್ಲವನ್ನು ಸಲ್ಲಿಸಿರುವ ನೈಜ ಫಲಾನುಭವಿಗಳಲ್ಲಿ ಅದೆಷ್ಟು ಮಂದಿಗೆ ವಸತಿ ಭಾಗ್ಯ ದಕ್ಕಿದೆ ಎಂಬುದು ಮಾತ್ರ ಅಸ್ಪಷ್ಟ. ಇದರಲ್ಲಿ ಹೋರಾಟಗಾರರು ತಮ್ಮ ಹೋರಾಟಕ್ಕೆ ಮಾತ್ರವೇ ಸೀಮಿತವಾದಂತೆ ಕಂಡುಬಂದರು. ಕೆಲವರು ಇವರೂ ಸಹ ಫಲಾನುಭವಿಗಳು ಅಂದದ್ದೂ ಉಂಟು.
ದಿಬ್ಬೂರು ವಸತಿ ಸಮುಚ್ಛಯದಲ್ಲಿ ಮನೆ ದೊರಕಿಸಿಕೊಂಡ ಫಲಾನುಭವಿಗಳು ಈವರೆಗೆ ಇದ್ದ ಜಾಗವನ್ನು ಬಿಟ್ಟು ಆ ಮನೆಗಳಿಗೆ ಹೋಗಿ ಸೇರಿಕೊಳ್ಳಬೇಕು. ಆದರೆ ಬಹುತೇಕ ಫಲಾನುಭವಿಗಳು ಮೂಲ ಜಾಗವನ್ನು ಬಿಟ್ಟುಕೊಟ್ಟಂತೆ ಕಾಣುತ್ತಿಲ್ಲ. ಆ ಜಾಗವನ್ನೂ ಉಳಿಸಿಕೊಳ್ಳುವ ಹುನ್ನಾರ ನಡೆದಿದೆ. ಇದು ಫಲಾನುಭವಿಗಳ ದುರಾಸೆ ಅಲ್ಲವೆ ಎಂಬುದು ಇತ್ತೀಚೆಗೆ ಏಳುತ್ತಿರುವ ಪ್ರಶ್ನೆ.
ಒಂದು ವಸತಿ ನಿರ್ಮಾಣಕ್ಕಾಗಿ ಎಷ್ಟು ವೆಚ್ಚ ಮಾಡಲಾಗಿದೆ ಎಂಬುದರ ಅರಿವು ಫಲಾನುಭವಿಗಳಿಗೆ ಇದ್ದಂತೆ ಕಾಣುತ್ತಿಲ್ಲ. ಈ ಬಗ್ಗೆ ಯೋಚನೆ ಕೂಡ ಮಾಡುವುದಿಲ್ಲ. ನನಗೆ ಮನೆ ಸಿಕ್ಕಿದೆ ಅಷ್ಟೇ ಎಂಬ ತೃಪ್ತಿ. ತಾನೇ ಒಂದು ಮನೆ ನಿರ್ಮಾಣ ಮಾಡಿಕೊಳ್ಳುವುದಕ್ಕೂ, ಸರ್ಕಾರವೇ ನಿರ್ಮಾಣ ಮಾಡಿಕೊಡುವುದಕ್ಕೂ ವ್ಯತ್ಯಾಸ ಇರುವುದೇ ಇಲ್ಲಿ. ಹೋಟೆಲ್‍ನಿಂದ ತಿಂಡಿ ಪೊಟ್ಟಣ ಕಟ್ಟಿಸಿಕೊಂಡು ತಂದು ಪೊಟ್ಟಣವನ್ನು ಬಿಸಾಕಿದಂತೆ ಈಗಿನ ಪರಿಸ್ಥಿತಿ ಇದೆ.
ತಮ್ಮ ಪಾಲಿನ ಹಣ ಕಟ್ಟಲಿಕ್ಕೂ ಅಸಾಧ್ಯ ಎಂಬ ಕೂಗು ಕೇಳಿಬಂದಾಗ, ನಿಮ್ನ ವರ್ಗಗಳಿಗೆ ನಗರ ಪಾಲಿಕೆಯಿಂದಲೇ ಇಂತಿಷ್ಟು ಅನುದಾನದ ಹಣ ನೀಡಿಕೆಯ ತೀರ್ಮಾನವಾಯಿತು. ಬಹುಪಾಲು ಹಣ ಸರ್ಕಾರದ್ದು. ( ನಗರಪಾಲಿಕೆಯದ್ದು ಸೇರಿ ). ಹೀಗಿರುವಾಗ ಇದು ನನ್ನ ಮನೆ, ಸುಸಜ್ಜಿತವಾಗಿ, ಸುಭದ್ರವಾಗಿ ಇಟ್ಟುಕೊಳ್ಳಬೇಕು ಎಂಬ ಭಾವನೆ ಏಕೆ ಬರುತ್ತಿಲ್ಲ? ಪುಕ್ಕಟೆ ಮನೆ ಹೇಗಾದರೂ ಇರಲಿ ಎಂಬ ಮನೋಭಾವವೇ ? ಇಲ್ಲಿ ನಿರ್ಮಾಣವಾಗಿರುವ ಮನೆಗಳು ಸರಿಯಿಲ್ಲ ಎಂದು ಯಾಕೆ ಯಾರೂ ಹೋರಾಟ ಮಾಡುತ್ತಿಲ್ಲ ? ಕೆಲವೇ ಒಂದಿಷ್ಟು ವಂತಿಕೆಯನ್ನು ಹೊರತುಪಡಿಸಿದರೆ ಬಹುಪಾಲು ಉಚಿತವಾಗಿಯೇ ಹಂಚಿಕೆಯಾಗಿರುವ ಈ ಮನೆಗಳು ಅದೆಷ್ಟು ವರ್ಷಗಳ ಕಾಲ ಸುಭದ್ರವಾಗಿರುತ್ತವೆ ಎಂಬುದನ್ನು ಅಲ್ಲಿ ನಿರ್ಮಾಣವಾಗಿರುವ ಮನೆಗಳನ್ನು ಹತ್ತಿರದಿಂದ ನೋಡಿದವರಿಗೆ ಅರಿವಾಗುತ್ತದೆ.
ಮೇಲ್ವಿಚಾರಣೆ – ತಪಾಸಣೆ ಏನೂ ಇಲ್ಲ ?
ಈ ವಸತಿ ಯೋಜನೆಯ ಕಟ್ಟಡ ನಿರ್ಮಾಣ ನಿರ್ವಹಣೆಯನ್ನು ಕರ್ನಾಟಕ ಕೊಳಗೇರಿ ಮಂಡಳಿಗೆ ವಹಿಸಲಾಗಿತ್ತು. ಆರಂಭದಿಂದ ಹಿಡಿದು ಈ ತನಕ ಇಲ್ಲಿನ ಮೇಲ್ವಿಚಾರಣೆ ಮತ್ತು ತಪಾಸಣೆ ಹೇಗೆ ನಡೆಯಿತು ಎಂಬ ಯಾವುದೇ ವಿವರಗಳಿಲ್ಲ. ಹಂತ ಹಂತದ ತಪಾಸಣೆಗಳು ನಡೆಯಬೇಕು. ಇದಕ್ಕಾಗಿಯೇ ಕೆಲವು ಎಂಜಿನಿಯರ್‍ಗಳು ಇರುತ್ತಾರೆ. ಆದರೆ ಅಲ್ಲಿನ ಕಟ್ಟಡಗಳನ್ನು ಗಮನಿಸಿದಾಗ ನಿಜವಾಗಿಯೂ ಇಲ್ಲಿ ಮೇಲ್ವಿಚಾರಣೆ ನಡೆದಿದೆಯೇ ? ಎಂಜಿನಿಯರ್‍ಗಳು ಪರಿಶೀಲಿಸಿದ್ದಾರೆಯೇ ಎಂಬ ಅನುಮಾನ ಎಂತಹ ದಡ್ಡನಿಗೂ ಭಾಸವಾಗುತ್ತದೆ. ಇದೊಂದು ಕಳಪೆ ಕಾಮಗಾರಿ ಎಂಬುದು ಮೇಲ್ನೋಟಕ್ಕೆ ಸ್ಪಷ್ಟವಾಗಿ ಕಾಣುತ್ತದೆ.
ಕಟ್ಟಡ ನಿರ್ಮಾಣದಲ್ಲಿ ಬಳಸಲಾಗಿರುವ ಸಲಕರಣೆಗಳು ಗುಣಮಟ್ಟದಿಂದ ಕೂಡಿಲ್ಲ. ಮನೆಯ ವಿವಿಧ ಭಾಗಗಳಲ್ಲಿ ಅಳವಡಿಸಲಾಗಿರುವ ಗೃಹೋಪಯೋಗಿ ವಸ್ತುಗಳು, ಐಟಮ್‍ಗಳು ಎಷ್ಟು ಕಳಪೆಯಾಗಿವೆ ಎಂಬುದನ್ನು ಈಗಲೇ ಪತ್ತೆ ಹಚ್ಚಬಹುದು. ಕಟ್ಟಡದ ಮೇಲಿನ ಹಂತಸ್ತುಗಳಿಂದ ಕೆಳಭಾಗದ ಹಂತಸ್ತುಗಳಿಗೆ ನೀರು ಸೋರಿಕೆಯಾಗುತ್ತಿರುವುದು ಇದಕ್ಕೊಂದು ಸಣ್ಣ ಉದಾಹರಣೆ. ಇಂತಹ ಅಯೋಗ್ಯ ಯೋಜನೆಯನ್ನು ಕಾರ್ಯಗೊಳಿಸಲು ಸರ್ಕಾರಗಳಿಗೆ ನಾಚಿಕೆಯಾಗಬೇಕು.
ನಿರ್ಮಾಣಗೊಂಡ ಕೆಲವೇ ತಿಂಗಳಲ್ಲಿ ಮನೆಗಳು ಅವ್ಯವಸ್ಥೆಯ ಗೂಡಾಗುತ್ತಿವೆ ಎಂಬ ಪ್ರಕ್ರಿಯೆಗಳನ್ನು ಗಮನಿಸಿದಾಗ ಮೇಲ್ಮಟ್ಟದಿಂದ ಕೆಳಮಟ್ಟದವರೆಗೆ ಪರಿಶೀಲನೆ ನಡೆಸಿ ಇದಕ್ಕೆ ಕಾರಣರಾದವರನ್ನು ಶಿಕ್ಷೆಗೊಳಪಡಿಸುವ ತಾಕತ್ತು ಸರ್ಕಾರಗಳಿಗಿದೆಯೇ? ಮನೆಗಳನ್ನು ದೊರಕಿಸಿಕೊಳ್ಳುವ ಸಂದರ್ಭದಲ್ಲಿ ಇದರ ಭಾಗೀದಾರರ ಮನೆಯ ಮುಂದೆ ಫಲಾನುಭವಿಗಳು ಹೋಗಿ ನಿಂತುಕೊಳ್ಳುತ್ತಿದ್ದ ಸಂದರ್ಭದ ರೀತಿಯಲ್ಲಿಯೇ ಈಗ ಕಳಪೆ ಕಾಮಗಾರಿ ನಿರ್ಮಾಣದ ವಿರುದ್ಧ ಹೋರಾಡುತ್ತಾರೆಯೇ ? ಇವರಿಗೆ ಚಳವಳಿ ಮಾಡುವ ಪ್ರೋತ್ಸಾಹ ನೀಡಿದ ಹೋರಾಟಗಾರರು ಮನೆ ನಿರ್ಮಾಣಕ್ಕೆ ಹೋರಾಟ ಮಾಡಿದಂತೆ, ಕಳಪೆ ನಿರ್ಮಾಣದ ವಿರುದ್ಧ ಹೋರಾಟಕ್ಕೆ ಇಳಿಯುತ್ತಾರೆಯೇ ಎಂಬ ಅನುಮಾನಗಳು ಹುಟ್ಟಿಕೊಳ್ಳುತ್ತವೆ. ಪ್ರ್ರಾಮಾಣಿಕತೆ, ಬದ್ಧತೆ, ಭವಿಷ್ಯ, ನಿಜವಾದ ಫಲಾನುಭವಿಗಳ ಮೇಲಿನ ಅನುಕಂಪ ಇದಾವುದು ಇಲ್ಲದ, ಜನಪರ ಎಂದು ಹೇಳಿಕೊಳ್ಳುವ ಇಂತಹ ಯೋಜನೆಗಳು ಬೇಕೆ ಎನ್ನುವ ಪ್ರಶ್ನೆಗಳು ಈಗ ಏಳುವುದು ಸಾಮಾನ್ಯ.
ನಕಲಿ ಫಲಾನುಭವಿಗಳು :
ಇದರಲ್ಲಿ ನಿಜವಾದ ಫಲಾನುಭವಿಗಳು ಯಾರು? ನಕಲಿ ಫಲಾನುಭವಿಗಳು ಯಾರು ಎಂಬ ಜಿಜ್ಞಾಸೆ ಎದುರಾಗಿದೆ. ಫಲಾನುಭವಿಗಳ ಪಟ್ಟಿ ಹಿಡಿದು ಹೊರಟರೆ ಬಹಳಷ್ಟು ಮಂದಿ ಅಲ್ಲಿ ವಾಸವಾಗಿಯೇ ಇಲ್ಲ. ಅವರ ಹೆಸರಿನ ಮನೆಯಲ್ಲಿ ಮತ್ಯಾರೋ ವಾಸ ಮಾಡುತ್ತಿದ್ದಾರೆ. ಅವರಲ್ಲಿ ಕೆಲವರು ಬಾಡಿಗೆದಾರರು ಇದ್ದಾರೆ. ಇದನ್ನೆಲ್ಲ ಗಮನಿಸಿದರೆ ನಕಲಿ ಫಲಾನುಭವಿಗಳು ಎನ್ನಬಹುದೇ ? ಮನೆ ಹಂಚಿಕೆಯ ಆರಂಭದಿಂದ ನಡೆದ ಪ್ರಹಸನಗಳನ್ನು ಗಮನಿಸಿದರೆ ಇದರಲ್ಲಿ ಏನೆಲ್ಲಾ ನಡೆದಿರಬಹುದು ಎಂಬ ಗುಮಾನಿಗಳು ಎದುರಾಗುತ್ತವೆ. ಈ ಬಹುಮಹಡಿ ಮನೆಗಳ ನಿರ್ಮಾಣ ಮುಗಿದು ಎರಡು ವರ್ಷಗಳಾದರೂ ಇನ್ನೂ ಸಂಪೂರ್ಣವಾಗಿ ಮನೆಗಳ ಹಂಚಿಕೆಯೇ ಆಗಿಲ್ಲ ಎಂದಾದರೆ ಇದರ ಹಿಂದಿರುವ ಮರ್ಮವಾದರೂ ಏನು? ಈ ಯಕ್ಷ ಪ್ರಶ್ನೆಗೆ ನಕಲಿ ಫಲಾನುಭವಿಗಳು ಕಾರಣ ಎನ್ನಬಹುದು.
ಕಾರ್ಪೊರೇಟರ್‍ಗಳು, ಮಧ್ಯವರ್ತಿಗಳು ಅಥವಾ ಸಹಚರರು ಕೊಟ್ಟ ಹೆಸರುಗಳು ಅನುಮೋದನೆಗೊಂಡು ಅಂತಹವರಿಗೆ ಮನೆಭಾಗ್ಯ ದೊರಕಿದೆ. ಈ ಬಗ್ಗೆ ಮಾಧ್ಯಮಗಳಲ್ಲೂ ಪ್ರಕಟವಾಗಿ ಸಾಕಷ್ಟು ವಿವಾದಗಳು, ಚರ್ಚೆಗಳು ಹುಟ್ಟಿಕೊಂಡಿದ್ದವು.
ಮನೆಗಳ ಹಂಚಿಕೆ ಪ್ರಕ್ರಿಯೆ ಆರಂಭವಾಗುತ್ತಿದ್ದಂತೆ ಕೆಲವು ಮಧ್ಯವರ್ತಿಗಳು ದಿಢೀರನೇ ಹುಟ್ಟಿಕೊಂಡರು. ಇವರ ಹಿಂದೆ ಯಾರ್ಯಾರು ಇದ್ದರೋ ಅವರಿಗಷ್ಟೇ ಗೊತ್ತು. ಆದರೂ ಕೆಲವರು ಮಾತ್ರ ಮನೆಗಳನ್ನು ಕೊಡಿಸುವ ಹೆಸರಿನಲ್ಲಿ ಕಾಸು ಮಾಡಿಕೊಂಡರು. ಈ ಸಂದರ್ಭದಲ್ಲಿ ಅಧಿಕಾರಿಗಳಂತೂ ಇಕ್ಕಟ್ಟಿಗೆ ಸಿಲುಕಿಬಿಟ್ಟರು. ಒಂದು ಕಡೆ ಕಾರ್ಪೊರೇಟರ್‍ಗಳು, ಜನಪ್ರತಿನಿಧಿಗಳು, ಹೋರಾಟಗಾರರು ಇವರೆಲ್ಲರ ಒತ್ತಡ ಮತ್ತು ಹೋರಾಟಗಳಿಂದಾಗಿ ಯಾರಿಗೆ ಮನೆ ಹಂಚಬೇಕು? ಹೇಗೆ ಹಂಚಬೇಕು? ಎಂಬ ಸಂಧಿಗ್ದತೆಯಲ್ಲಿ ಅಧಿಕಾರಿಗಳು ತೊಡಲಾಡಿದ್ದಂತು ನಿಜ..!

ಈ ವಸತಿ ಯೋಜನೆಯ ಕಟ್ಟಡ ನಿರ್ಮಾಣ ನಿರ್ವಹಣೆಯನ್ನು ಕರ್ನಾಟಕ ಕೊಳಗೇರಿ ಮಂಡಳಿಗೆ ವಹಿಸಲಾಗಿತ್ತು. ಆರಂಭದಿಂದ ಹಿಡಿದು ಈ ತನಕ ಇಲ್ಲಿನ ಮೇಲ್ವಿಚಾರಣೆ ಮತ್ತು ತಪಾಸಣೆ ಹೇಗೆ ನಡೆಯಿತು ಎಂಬ ಯಾವುದೇ ವಿವರಗಳಿಲ್ಲ. ಹಂತ ಹಂತದ ತಪಾಸಣೆಗಳು ನಡೆಯಬೇಕು. ಇದಕ್ಕಾಗಿಯೇ ಕೆಲವು ಎಂಜಿನಿಯರ್‍ಗಳು ಇರುತ್ತಾರೆ. ಆದರೆ ಅಲ್ಲಿನ ಕಟ್ಟಡಗಳನ್ನು ಗಮನಿಸಿದಾಗ ನಿಜವಾಗಿಯೂ ಇಲ್ಲಿ ಮೇಲ್ವಿಚಾರಣೆ ನಡೆದಿದೆಯೇ ? ಎಂಜಿನಿಯರ್‍ಗಳು ಪರಿಶೀಲಿಸಿದ್ದಾರೆಯೇ ಎಂಬ ಅನುಮಾನ ಎಂತಹ ದಡ್ಡನಿಗೂ ಭಾಸವಾಗುತ್ತದೆ. ಇದೊಂದು ಕಳಪೆ ಕಾಮಗಾರಿ ಎಂಬುದು ಸ್ಪಷ್ಟವಾಗಿ ಕಾಣುತ್ತದೆ.
ಕಟ್ಟಡ ನಿರ್ಮಾಣದಲ್ಲಿ ಬಳಸಲಾಗಿರುವ ಸಲಕರಣೆಗಳು ಗುಣಮಟ್ಟದಿಂದ ಕೂಡಿಲ್ಲ. ಮನೆಯ ವಿವಿಧ ಭಾಗಗಳಲ್ಲಿ ಅಳವಡಿಸಲಾಗಿರುವ ಗೃಹೋಪಯೋಗಿ ವಸ್ತುಗಳು, ಐಟಮ್‍ಗಳು ಎಷ್ಟು ಕಳಪೆಯಾಗಿವೆ ಎಂಬುದನ್ನು ಈಗಲೇ ಪತ್ತೆ ಹಚ್ಚಬಹುದು. ಕಟ್ಟಡದ ಮೇಲಿನ ಹಂತಸ್ತುಗಳಿಂದ ಕೆಳಭಾಗದ ಹಂತಸ್ತುಗಳಿಗೆ ನೀರು ಸೋರಿಕೆಯಾಗುತ್ತಿರುವುದು ಇದಕ್ಕೊಂದು ಸಣ್ಣ ಉದಾಹರಣೆ. ಇಂತಹ ಅಯೋಗ್ಯ ಯೋಜನೆಯನ್ನು ಕಾರ್ಯಗೊಳಿಸಲು ಸರ್ಕಾರಗಳಿಗೆ ನಾಚಿಕೆಯಾಗಬೇಕು.
ನಿರ್ಮಾಣಗೊಂಡ ಕೆಲವೇ ತಿಂಗಳಲ್ಲಿ ಮನೆಗಳು ಅವ್ಯವಸ್ಥೆಯ ಗೂಡಾಗುತ್ತಿರುವ ಪ್ರಕ್ರಿಯೆಗಳನ್ನು ಗಮನಿಸಿದಾಗ ಮೇಲ್ಮಟ್ಟದಿಂದ ಕೆಳಮಟ್ಟದವರೆಗೆ ಪರಿಶೀಲನೆ ನಡೆಸಿ ಇದಕ್ಕೆ ಕಾರಣರಾದವರನ್ನು ಶಿಕ್ಷೆಗೊಳಪಡಿಸುವ ತಾಕತ್ತು ಸರ್ಕಾರಗಳಿಗಿದೆಯೇ? ಮನೆಗಳನ್ನು ದೊರಕಿಸಿಕೊಳ್ಳುವ ಸಂದರ್ಭದಲ್ಲಿ ಇದರ ಭಾಗೀದಾರರ ಮನೆಯ ಮುಂದೆ ಫಲಾನುಭವಿಗಳು ಹೋಗಿ ನಿಂತುಕೊಳ್ಳುತ್ತಿದ್ದ ಸಂದರ್ಭದ ರೀತಿಯಲ್ಲಿಯೇ ಈಗ ಕಳಪೆ ಕಾಮಗಾರಿ ನಿರ್ಮಾಣದ ವಿರುದ್ಧ ಹೋರಾಡುತ್ತಾರೆಯೇ ? ಇವರಿಗೆ ಚಳವಳಿ ಮಾಡುವ ಪ್ರೋತ್ಸಾಹ ನೀಡಿದ ಹೋರಾಟಗಾರರು ಮನೆ ನಿರ್ಮಾಣಕ್ಕೆ ಹೋರಾಟ ಮಾಡಿದಂತೆ, ಕಳಪೆ ನಿರ್ಮಾಣದ ವಿರುದ್ಧ ಹೋರಾಟಕ್ಕೆ ಇಳಿಯುತ್ತಾರೆಯೇ ಎಂಬ ಅನುಮಾನಗಳು ಹುಟ್ಟಿಕೊಳ್ಳುತ್ತವೆ. ಪ್ರ್ರಾಮಾಣಿಕತೆ, ಬದ್ಧತೆ, ಭವಿಷ್ಯ, ನಿಜವಾದ ಫಲಾನುಭವಿಗಳ ಮೇಲಿನ ಅನುಕಂಪ ಇದಾವುದು ಇಲ್ಲದ, ಜನಪರ ಎಂದು ಹೇಳಿಕೊಳ್ಳುವ ಇಂತಹ ಯೋಜನೆಗಳು ಬೇಕೆ ಎನ್ನುವ ಪ್ರಶ್ನೆಗಳು ಈಗ ಏಳುತ್ತಿವೆ.
ನಕಲಿ ಫಲಾನುಭವಿಗಳು :
ಇದರಲ್ಲಿ ನಿಜವಾದ ಫಲಾನುಭವಿಗಳು ಯಾರು? ನಕಲಿ ಫಲಾನುಭವಿಗಳು ಯಾರು ಎಂಬ ಜಿಜ್ಞಾಸೆ ಎದುರಾಗಿದೆ. ಫಲಾನುಭವಿಗಳ ಪಟ್ಟಿ ಹಿಡಿದು ಹೊರಟರೆ ಬಹಳಷ್ಟು ಮಂದಿ ಅಲ್ಲಿ ವಾಸವಾಗಿಯೇ ಇಲ್ಲ. ಅವರ ಹೆಸರಿನ ಮನೆಯಲ್ಲಿ ಮತ್ಯಾರೋ ವಾಸ ಮಾಡುತ್ತಿದ್ದಾರೆ. ಅವರಲ್ಲಿ ಕೆಲವರು ಬಾಡಿಗೆದಾರರು ಇದ್ದಾರೆ. ಇದನ್ನೆಲ್ಲ ಗಮನಿಸಿದರೆ ಇಲ್ಲಿ ಸಾಕಷ್ಟು ಸಂಖ್ಯೆಯ ನಕಲಿ ಫಲಾನುಭವಿಗಳು ಇದ್ದಾರೆ ಎನ್ನಬಹುದೇ ? ಮನೆ ಹಂಚಿಕೆಯ ಆರಂಭದಿಂದ ನಡೆದ ಪ್ರಹಸನಗಳನ್ನು ಗಮನಿಸಿದರೆ ಇದರಲ್ಲಿ ಏನೆಲ್ಲಾ ನಡೆದಿರಬಹುದು ಎಂಬ ಗುಮಾನಿಗಳು ಎದುರಾಗುತ್ತವೆ. ಈ ಬಹುಮಹಡಿ ಮನೆಗಳ ನಿರ್ಮಾಣ ಮುಗಿದು ಎರಡು ವರ್ಷಗಳಾದರೂ ಇನ್ನೂ ಸಂಪೂರ್ಣವಾಗಿ ಮನೆಗಳ ಹಂಚಿಕೆಯೇ ಆಗಿಲ್ಲ ಎಂದಾದರೆ ಇದರ ಹಿಂದಿರುವ ಮರ್ಮವಾದರೂ ಏನು? ಈ ಯಕ್ಷ ಪ್ರಶ್ನೆಗೆ ನಕಲಿ ಫಲಾನುಭವಿಗಳು ಕಾರಣ ಎನ್ನಬಹುದೇ?
ಕಾರ್ಪೊರೇಟರ್‍ಗಳು, ಮಧ್ಯವರ್ತಿಗಳು ಅಥವಾ ಸಹಚರರು ಕೊಟ್ಟ ಹೆಸರುಗಳು ಅನುಮೋದನೆಗೊಂಡು ಅಂತಹವರಿಗೆ ಮನೆಭಾಗ್ಯ ದೊರಕಿದೆ. ಈ ಬಗ್ಗೆ ಆಗ ಮಾಧ್ಯಮಗಳಲ್ಲೂ ಪ್ರಕಟವಾಗಿ ಸಾಕಷ್ಟು ವಿವಾದಗಳು, ಚರ್ಚೆಗಳು ಹುಟ್ಟಿಕೊಂಡಿದ್ದವು.
ಮನೆಗಳ ಹಂಚಿಕೆ ಪ್ರಕ್ರಿಯೆ ಆರಂಭವಾಗುತ್ತಿದ್ದಂತೆ ಕೆಲವು ಮಧ್ಯವರ್ತಿಗಳು ದಿಢೀರನೇ ಹುಟ್ಟಿಕೊಂಡರು. ಇವರ ಹಿಂದೆ ಯಾರ್ಯಾರು ಇದ್ದರೋ ಅವರಿಗಷ್ಟೇ ಗೊತ್ತು. ಆದರೂ ಕೆಲವರು ಮಾತ್ರ ಮನೆಗಳನ್ನು ಕೊಡಿಸುವ ಹೆಸರಿನಲ್ಲಿ ಕಾಸು ಮಾಡಿಕೊಂಡರು. ಈ ಸಂದರ್ಭದಲ್ಲಿ ಅಧಿಕಾರಿಗಳಂತೂ ಇಕ್ಕಟ್ಟಿಗೆ ಸಿಲುಕಿಬಿಟ್ಟರು. ಒಂದು ಕಡೆ ಕಾರ್ಪೊರೇಟರ್‍ಗಳು, ಜನಪ್ರತಿನಿಧಿಗಳು, ಹೋರಾಟಗಾರರು ಇವರೆಲ್ಲರ ಒತ್ತಡ ಮತ್ತು ಹೋರಾಟಗಳಿಂದಾಗಿ ಯಾರಿಗೆ ಮನೆ ಹಂಚಬೇಕು? ಹೇಗೆ ಹಂಚಬೇಕು? ಎಂಬ ಸಂಧಿಗ್ದತೆಯಲ್ಲಿ ಅಧಿಕಾರಿಗಳು ತೊಡಲಾಡಿದ್ದಂತೂ ನಿಜ..!
ದಿಬ್ಬೂರಿನಲ್ಲಿ ಮನೆಗಳು ನಿರ್ಮಾಣವಾಗುತ್ತಿವೆ, ಅವುಗಳ ಹಂಚಿಕೆ ಕಾರ್ಯ ನಡೆಯುತ್ತಿದೆ ಎಂಬ ವದಂತಿಗಳು ಹರಡಿದ್ದೇ ತಡ ಸಾಕಷ್ಟು ಸಂಖ್ಯೆಯ ಫಲಾನುಭವಿಗಳು ಮನೆ ಪಡೆಯಲು ಮುಂದಾದರು. ನಿಜವಾದ ಫಲಾನುಭವಿಗಳ ಜೊತೆ ಅನರ್ಹರೂ ಸೇರಿಕೊಂಡರು. ಯಾರಿಂದ ಹೇಗೆ ಹೇಳಿಸಬೇಕು ಎಂಬ ಚಾಕಚಕ್ಯತೆ ಶುರುವಾಗಿದ್ದೇ ಆಗ. ಇವರ ಹಿಂದೆ ಅದೆಷ್ಟು ಮಂದಿ ಸೇರಿಕೊಂಡರೋ, ಯಾರ್ಯಾರು ಭರವಸೆಗಳನ್ನು ನೀಡಿದರೋ ಅಂತೂ ಒಂದಷ್ಟು ದಿನಗಳ ಕಾಲ ಕೆಲವರು ಮನೆಗೋಸ್ಕರವಾಗಿ ತ್ರಾಸವನ್ನಂತೂ ಪಟ್ಟರು. ಈಗ ಮನೆಗಳು ನಿರ್ಮಾಣವಾಗಿ ಅದರೊಳಗೆ ಹೋಗಿ ಸೇರಿಕೊಂಡಿದ್ದರೂ ಸಮಸ್ಯೆಗಳು ಮಾತ್ರ ನಿಂತಿಲ್ಲ. ಅಲ್ಲಿನ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕಾದ ದಾರಿ ಮಾರ್ಗಗಳೇ ತಿಳಿದಿಲ್ಲ. ಹೇಗೆ ಮತ್ತು ಯಾರ ಬಳಿ ನಿವೇದಿಸಿಕೊಳ್ಳಬೇಕು ಎಂಬ ಗೊಂದಲವೂ ಈಗ ಎದುರಾಗಿದೆ.
ತುಮಕೂರು ನಗರ ಹೊರವಲಯದ ದಿಬ್ಬೂರಿನಲ್ಲಿ ರಾಜೀವ್ ಆವಾಸ್ ಯೋಜನೆಯಡಿ ನಿರ್ಮಿಸಿರುವ 1,200 ಮನೆಗಳ ಹಂಚಿಕೆಯ ಪ್ರಕ್ರಿಯೆಯೇ ಇನ್ನೂ ಸಂಪೂರ್ಣವಾಗಿಲ್ಲವಾದರೂ ಅಲ್ಲಿರುವ ಸಂಕೀರ್ಣದಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ ಎದ್ದು ಕಾಣುತ್ತಿದೆ. ಒಂದು ಕಡೆ ಮೂಲಭೂತ ಸೌಕರ್ಯಗಳಿಗಾಗಿ ಕೆಲವರು ಒತ್ತಾಯಿಸುತ್ತಿದ್ದರೆ ಮತ್ತೊಂದು ಕಡೆ ಅಲ್ಲಿನ ನೈರ್ಮಲ್ಯ ಪರಿಸ್ಥಿತಿ ಅತ್ಯಂತ ಶೋಚನೀಯ ಎನಿಸುತ್ತದೆ.
100 ಸಮುಚ್ಛಯಗಳು ಈ ವಸತಿ ಬಡಾವಣೆಯಲ್ಲಿ ಇದ್ದು ಸುಮಾರು 5000ಜನ ವಾಸ ಮಾಡುವ ಬಡಾವಣೆಯಾಗಿದೆ. ಇದಕ್ಕೆ ಟಿ.ದೇವರಾಜು ಅರಸು ಬಡಾವಣೆ ಎಂದು ನಾಮಕರಣ ಕೂಡ ಮಾಡಿದ್ದಾರೆ. ಒಂದೊಂದು ಸಮುಚ್ಛಯದ ನೆಲಮಹಡಿಯಲ್ಲಿ ನಾಲ್ಕು ಮನೆ, ಮೊದಲನೇ ಮಹಡಿಯಲ್ಲಿ ನಾಲ್ಕು ಮನೆ ಮತ್ತು ಎರಡನೇ ಮಹಡಿಯಲ್ಲಿ ನಾಲ್ಕು ಮನೆಗಳನ್ನು ನಿರ್ಮಾಣ ಮಾಡಲಾಗಿದೆ. ಒಂದು ಸಮುಚ್ಛಯದಲ್ಲಿ 12ಮನೆಗಳು ಇದ್ದು ಶೇ.90% ರಷ್ಟು ಮನೆಗಳಲ್ಲಿ ಜನ ವಾಸ ಮಾಡುತ್ತಿದ್ದಾರೆ. ಇನ್ನೂ ಕೆಲವು ಮನೆಗಳು ಖಾಲಿ ಇದ್ದು, ಅವುಗಳ ಹಂಚಿಕೆ ಕಾರ್ಯ ಇನ್ನೂ ನಡೆಯುತ್ತಿದೆ.
ಕೆಲವು ಮನೆಗಳಿಗೆ ನಿವಾಸಿಗಳು ಇನ್ನೂ ಹೋಗದೆ ಕಸ ಧೂಳು ತುಂಬಿಕೊಂಡಿವೆ. ಇಲ್ಲಿ ನಿರ್ಮಾಣ ಮಾಡಿರುವುದು ನೂತನ ಮನೆಗಳಾದರೂ ನೋಡುವುದಕ್ಕೆ ಮಾತ್ರ ಹಳೆಯ ಮನೆಗಳಿಗೆ ಬಣ್ಣ ಬಳಿದಂತಿದೆ.
72.52 ಕೋಟಿ ವೆಚ್ಚದಲ್ಲಿ ನಿರ್ಮಾಣ:

ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ರಾಜೀವ್ ಆವಾಜ್ ಯೋಜನೆಯಡಿಯಲ್ಲಿ ಮನೆಗಳನ್ನು ನಿರ್ಮಾಣ ಮಾಡಲಾಗಿತ್ತು. ದಿಬ್ಬೂರು ಪ್ರದೇಶದಲ್ಲಿ ಒಂದೇ ಸೂರಿನಡಿ 1200 ಮನೆಗಳು ಇರುವ ಸಮುಚ್ಛಯವನ್ನು 72.52 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿತ್ತು. ಇದರ ಉದ್ಘಾಟನೆಗೆ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೂಡ ಆಗಮಿಸಿದ್ದರು.
ಮನೆಗಳ ಉದ್ಘಾಟನೆ ಮಾಡಿದ ನಂತರ ಅಮಾನಿಕೆರೆಯ ಗಾಜಿನಮನೆಯಲ್ಲಿ ಆಯೋಜಿಸಿದ್ದ ವೇದಿಕೆ ಕಾರ್ಯಕ್ರಮದಲ್ಲಿ ಈ ಮನೆಗಳ ಬಗ್ಗೆ ಮುಖ್ಯಮಂತ್ರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದರು. ದೇಶದಲ್ಲಿಯೇ ಎಲ್ಲೂ ನಿರ್ಮಾಣ ಮಾಡಿರದ 1200 ಮನೆಗಳ ಸಮುಚ್ಛಗಳನ್ನು ಒಂದೇ ಕಡೆ ನಿರ್ಮಾಣ ಮಾಡುವಲ್ಲಿ ಶಾಸಕರ ಪಾತ್ರ ಬಹಳ ದೊಡ್ಡದು. ಇದನ್ನು ಕೊಳಗೇರಿ ನಿವಾಸಿಗಳು, ಬಡಜನರು ಉಪಯೋಗಿಸಿಕೊಳ್ಳಬೇಕು ಎಂದಿದ್ದರು.
ಕಳೆದ ವರ್ಷ ಆಗಸ್ಟ್‍ನಲ್ಲಿ ಉದ್ಘಾಟನೆಯಾದ ದಿಬ್ಬೂರು ಸಮುಚ್ಛಯದಲ್ಲಿ ಮನೆಗಳ ವಿತರಣೆ ಮಾಡಲು ಹಲವು ಕಿರಿಕಿರಿಗಳು ನಡೆದಿದ್ದವು. ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡುವುದರಲ್ಲಿ ತಾರತಮ್ಯ ನಡೆದಿತ್ತು ಎಂಬ ಆರೋಪಗಳು ಕೇಳಿ ಬಂದಿದ್ದವು. ಅಂದಿನ ಜಿಲ್ಲಾಧಿಕಾರಿ ಕೆ.ಪಿ.ಮೋಹನ್‍ರಾಜ್‍ರ ಅಧ್ಯಕ್ಷತೆಯಲ್ಲಿ 2018ರ ಮಾರ್ಚ್ 16ರಂದು ನಡೆದ ಸಭೆಯಲ್ಲಿ ತೀರ್ಮಾನಿಸಿದಂತೆ ತುಮಕೂರು ನಗರದ ಮಂಡಿಪೇಟೆ ಕೊಳಚೆ ಪ್ರದೇಶದಲ್ಲಿ ವಾಸವಿರುವ 13 ಜನರು, ನಗರದ ಅಂಗವಿಕಲ ಫಲಾನುಭವಿಗಳೆಂದು 13 ಜನರು, ಮೂಲ ಡಿ.ಪಿ.ಆರ್.ನಲ್ಲಿ ಗುರುತಿಸಿರುವ ಫಲಾನುಭವಿಗಳೆಂದು ನಾಲ್ವರು, ಬಾಡಿಗೆ ಮನೆಯಲ್ಲಿ ವಾಸವಿರುವವರೆಂದು 270 ಜನರು ಸೇರಿದಂತೆ ಒಟ್ಟು 309 ಫಲಾನುಭವಿಗಳ ಪಟ್ಟಿಗೆ ಅನುಮೋದನೆ ನೀಡಲಾಗಿತ್ತು.
ಮನೆಯೊಂದರ ನಿರ್ಮಾಣದ ವೆಚ್ಚ:
ದಿಬ್ಬೂರಿನಲ್ಲಿ ನಿರ್ಮಾಣ ಮಾಡಲಾದ ಪ್ರತಿ ಮನೆಯ ನಿರ್ಮಾಣಕ್ಕೆ ಸುಮಾರು 4 ಲಕ್ಷ 86 ಸಾವಿರ ರೂಪಾಯಿ ವೆಚ್ಚವಾಗಿದೆಯೆಂದು ಅಂದಾಜಿಸಲಾಗಿದೆ. ಈ ವೆಚ್ಚದಲ್ಲಿ ಫಲಾನುಭವಿಯು ಶೇ.12 ರಷ್ಟು ಮೊತ್ತವನ್ನು ಅಂದರೆ 58,320 ರೂಪಾಯಿಗಳನ್ನು ಭರಿಸಬೇಕೆಂಬುದು ಈ ಹಿಂದಿನ ನಿಯಮಾವಳಿಯಾಗಿತ್ತು. ಆದರೆ ಪ್ರಸ್ತುತ ಕೇಂದ್ರ ಸರ್ಕಾರ ಫಲಾನುಭವಿ ಪಾಲಿನ ಮೊತ್ತವನ್ನು ಶೇ. 25 ಕ್ಕೆ ಏರಿಸಿರುವುದರಿಂದ ಫಲಾನುಭವಿಗಳು 1,21,500 ರೂಪಾಯಿಗಳನ್ನು ಭರಿಸಿದ್ದಾರೆ ಎಂಬ ಮಾಹಿತಿಯಿದೆ.
ಎಲ್ಲಾ ಜಾತಿಯ ಫಲಾನುಭವಿಗಳಿದ್ದರು:
ಮುಸ್ಲಿಮರು, ಕ್ರೈಸ್ತರು, ತಿಗಳರು, ಪರಿಶಿಷ್ಟ ಜಾತಿಯವರು, ಪರಿಶಿಷ್ಟ ವರ್ಗದವರು, ಕುರುಬರು, ಬ್ರಾಹ್ಮಣರು, ನಾಯಕರು, ವಿಶ್ವಕರ್ಮರು, ಬಣಜಿಗರು, ಕುಂಬಾರರು, ಮಡಿವಾಳರು, ನಾಯ್ಡು, ಬಲಿಜರು, ರಜಪೂತರು, ಅರಸು, ಲಿಂಗಾಯಿತರು, ಬೆಸ್ತರು, ಒಕ್ಕಲಿಗರು, ಜೈನರು, ಗಾಣಿಗರು, ತೊಗಟ, ಭಜಂತ್ರಿ -ಹೀಗೆ ಎಲ್ಲ ಜಾತಿ, ಧರ್ಮದ ಫಲಾನುಭವಿಗಳೂ ಈ ಪಟ್ಟಿಯಲ್ಲಿದ್ದರು. ಇಷ್ಟೂ ಜನರ ಉದ್ಯೋಗವನ್ನು ಕೂಲಿ ಎಂದು ತೋರಿಸಲಾಗಿತ್ತು. ಇವರಲ್ಲಿ ಕೆಲವರ ವರಮಾನವನ್ನು 10,600 ರೂ. ಎಂದೂ, ಮತ್ತೆ ಉಳಿದವರ ವರಮಾನವನ್ನು 11,000 ರೂ.ಗಳೆಂದೂ ಈ ಪಟ್ಟಿಯಲ್ಲಿ ನಮೂದಿಸಲಾಗಿತ್ತು.
ಅನರ್ಹರಿದ್ದಲ್ಲಿ ಮುಟ್ಟುಗೋಲು ಆದೇಶ:
“ಫಲಾನುಭವಿಗಳು ವಸತಿ/ನಿವೇಶನ ರಹಿತರಾಗಿ ಬಾಡಿಗೆ ಮನೆಯ ವಾಸಿಯಾಗಿದ್ದು, ಯಾವುದೇ ಸುಳ್ಳು ಮಾಹಿತಿ ನೀಡಿ ಮನೆಯನ್ನು ಪಡೆದು ಅನರ್ಹರೆಂದು ಕಂಡುಬಂದಲ್ಲಿ ಅವರು ಪಾವತಿಸಿರುವ ಫಲಾನುಭವಿಯ ವಂತಿಕೆಯ ಮೊತ್ತವನ್ನು ಮುಟ್ಟುಗೋಲು ಹಾಕಿಕೊಂಡು ಯಾವುದೇ ಸಂದರ್ಭದಲ್ಲಿ ಮನೆಯನ್ನು ವಾಪಸ್ಸು ಪಡೆಯಬಹುದು. ಈ ಬಗ್ಗೆ ಮನೆ ಹಂಚಿಕೆ ಸಂದರ್ಭದಲ್ಲಿ ಫಲಾನುಭವಿಗಳಿಂದ ಅನರ್ಹರೆಂದು ಮನೆಯನ್ನು ವಾಪಸ್ಸು ಪಡೆಯುವ ಕುರಿತು ಕರಾರು ಪತ್ರ ಪಡೆಯುವ ಷರತ್ತುಗಳಿಗೆ ಒಳಪಡಿಸಿ ಫಲಾನುಭವಿಗಳನ್ನು ಅನುಮೋದಿಸಿ ಸೂಕ್ತ ಕ್ರಮ ಕೈಗೊಂಡು ಮನೆ ಹಂಚಿಕೆ ಪತ್ರಗಳನ್ನು ತುರ್ತಾಗಿ ವಿತರಿಸಲು” ಜಿಲ್ಲಾಧಿಕಾರಿಗಳು ಸೂಚಿಸಿದ್ದರು.
ಹಂತಹಂತದಲ್ಲಿ ಮನೆಗಳ ಹಂಚಿಕೆ :
ನಗರದ ಅಮಾನಿಕೆರೆಯ ಅಭಿವೃದ್ಧಿಗೆ ಮೊದಲು ಶಿರಾಗೇಟ್‍ಬಳಿ ಕೆರೆಯ ಅಂಗಳದಲ್ಲೇ ವಾಸವಿದ್ದ 70 ಕುಟುಂಬಗಳಿಗೆ ಮೊದಲ ಹಂತದಲ್ಲಿ ಮನೆಗಳನ್ನು ಹಂಚಿಕೆ ಮಾಡಲಾಗಿತ್ತು. ಎರಡನೇ ಹಂತದಲ್ಲಿ 197 ಫಲಾನುಭವಿಗಳ ಪಟ್ಟಿಯನ್ನು ಅನುಮೋದಿಸಲಾಗಿತ್ತು. ನಂತರ 309 ಫಲಾನುಭವಿಗಳ ಪಟ್ಟಿಯನ್ನು ಅನುಮೋದಿಸಲಾಯಿತು. ಹಲವು ಹೋರಾಟಗಳ ನಂತರ ಕೊನೆಗೆ ಸರಿ ಸಮಾರು 1150 ಮನೆಗಳವರೆಗೆ ಹಂಚಿಕೆ ಮಾಡಲಾಯಿತು.
ಪ್ರಸ್ತುತ ದಿಬ್ಬೂರು ವಸತಿ ಬಡಾವಣೆಯನ್ನು ಒಮ್ಮೆ ವೀಕ್ಷಿಸಿದರೆ ಹಲವು ನ್ಯೂನತೆಗಳು, ಅವ್ಯವಸ್ಥೆಗಳು, ಮೂಲಭೂತ ಸಮಸ್ಯೆಗಳು ಎದುರಾಗುತ್ತವೆ.

ಒಳಚರಂಡಿ ವ್ಯವಸ್ಥೆಯ ದುಸ್ಥಿತಿ:
ವಸತಿ ಸಮುಚ್ಛಯಕ್ಕೆ ಪ್ರವೇಶಿಸುತ್ತಿದ್ದಂತೆ ಅಕ್ಕ ಪಕ್ಕದಲ್ಲಿ ನಿರ್ಮಾಣ ಮಾಡಲಾದ ಒಳಚರಂಡಿಯಿಂದ ದುರ್ನಾತ ಬೀರುತ್ತದೆ. ಒಳಗೆ ಪ್ರವೇಶಿಸುವಾಗ ದ್ವಾರದಲ್ಲಿಯೆ ಈ ದೃಶ್ಯ ನಮಗೆ ಎದುರಾಗುತ್ತದೆ. ಗಬ್ಬು ವಾಸನೆಯೂ ಮೂಗಿಗೆ ತಾಗುತ್ತದೆ. ಇದನ್ನು ಸಹಿಸಿಕೊಂಡೇ ಒಳಗಡೆ ಪ್ರವೇಶಿಸಬೇಕು. ಬಡಾವಣೆಯೊಳಗಿರುವ ರಸ್ತೆಗಳ ಅಕ್ಕಪಕ್ಕದಲ್ಲಿ ನಿರ್ಮಾಣ ಮಾಡಲಾದ ಚರಂಡಿಗಳು ಕಸದಿಂದ ತುಂಬಿಕೊಂಡು ನೀರು ಹರಿಯದೆ ಅಲ್ಲಿಯೇ ನಿಂತಿದೆ. ಬಡಾವಣೆಯಿಂದ ಹೊರಗಡೆಗೆ ಬರುವ ಒಳಚರಂಡಿ ವ್ಯವಸ್ಥೆಗೆ ಮುಂದೆ ಸಾಗಲು ವ್ಯವಸ್ಥೆಯೇ ಮಾಡಿಲ್ಲ ಎನ್ನುತ್ತಾರೆ ಸ್ಥಳೀಯರು.
ಪ್ರವೇಶದಲ್ಲಿ ಉಕ್ಕುತ್ತಿದೆ ಯುಜಿಡಿ:
ಬಡಾವಣೆಗೆ ಮಾಡಿದ ಒಳಚರಂಡಿ ವ್ಯವಸ್ಥೆಯಲ್ಲಿ ಸರಾಗವಾಗಿ ಹರಿಯಬೇಕಿದ್ದ ನೀರು ಯುಜಿಡಿ ಲೀಕ್ ಆಗಿ ರಸ್ತೆಯ ಮೇಲೆಲ್ಲಾ ಹರಿದಾಡುತ್ತಿದೆ. ಇದು ಕೇವಲ ಬಡಾವಣೆಯಲ್ಲಿ ವಾಸ ಮಾಡುವವರಿಗೆ ಮಾತ್ರವಲ್ಲದೆ ಇಲ್ಲಿನ ರಸ್ತೆಯ ಮೂಲಕ ಓಡಾಡುವವರು ಮೂಗು ಮುಚ್ಚಿಕೊಂಡು ಓಡಾಡುವಂತಾಗುದೆ. ರಸ್ತೆಯ ಉದ್ದಗಲಕ್ಕೂ ಚರಂಡಿ ನೀರು ಹರಿದು ದುರ್ವಾಸನೆ ಬರುತ್ತಿದೆ.
ಸರಿಯಿಲ್ಲದ ನೀರಿನ ಸೌಲಭ್ಯ:
ಒಂದು ಸಮುಚ್ಛಯಕ್ಕೆ ಒಂದು ನೆಲ ಮಟ್ಟದ ಜಲಸಂಗ್ರಹಾಗಾರ ನಿರ್ಮಿಸಲಾಗಿದ್ದು ಅದು ಸಣ್ಣ ಗಾತ್ರದ್ದಾಗಿದೆ. ಸಮುಚ್ಛಯದ ಮೇಲೆ 700 ಲೀಟರ್ ಸಾಮಥ್ರ್ಯದ ಒಟ್ಟು 4 ನೀರಿನ ಟ್ಯಾಂಕ್‍ಗಳನ್ನು ಇರಿಸಲಾಗಿದೆ. ಆ ಟ್ಯಾಂಕರ್‍ಗಳಿಗೆ ಮುಚ್ಚಳಗಳೇ ಇಲ್ಲ ಎಂಬುದು ಪ್ರಮುಖ ಆರೋಪವಾಗಿದೆ. ಕೆಳಗಿನ ಸಂಪ್‍ನಲ್ಲಿ ಶೇಖರಣೆಯಾಗುವ ನೀರು ಕುಡಿಯುವುದಕ್ಕೆ ಆಗುವುದಿಲ್ಲ. ಬದಲಿಗೆ ದಿನನಿತ್ಯ ಬಳಕೆಗೂ ಆಗದಷ್ಟು ಕೊಳಚೆಯಾಗಿರುತ್ತದೆ. ಈ ನೀರು ಕೇವಲ ಬಟ್ಟೆ ತೊಳೆಯಲು, ಪಾತ್ರೆ ತೊಳೆಯಲು ಮಾತ್ರ ಸಾಧ್ಯವಾಗುತ್ತದೆ.
ಸೋರಿಕೆಯಾಗುತ್ತಿರುವ ಪೈಪುಗಳು:
ಸಮುಚ್ಛದಲ್ಲಿನ 50ನೇ ಬ್ಲಾಕ್, 78ನೇ ಬ್ಲಾಕ್ ಹಾಗೂ ಪಕ್ಕದ ಕೆಲ ಬ್ಲಾಕ್‍ಗಳಲ್ಲಿ ಅಳವಡಿಸಲಾಗಿರುವ ನೀರನ ಪೈಪುಗಳು ಲೀಕ್ ಆಗುತ್ತಿವೆ. ಕೆಲಭಾಗದ ನೀರಿನ ಸಂಪ್‍ನಿಂದ ಮೇಲ್ಬಾಗದಲ್ಲಿರುವ ನೀರಿನ ಟ್ಯಾಂಕ್‍ಗಳಿಗೆ ನೀರು ತುಂಬಿಸಲು ಮೋಟಾರ್ ಪ್ರಾರಂಭಿಸಿದರೆ ಟ್ಯಾಂಕ್ ತುಂಬುವ ಬದಲಾಗಿ ಮನೆಯ ಗೋಡೆಗಳು ನೆನೆಯುತ್ತಿವೆ. ಇನ್ನೂ ಕೆಲ ಬ್ಲಾಕ್‍ಗಳಲ್ಲಿ ನೀರು ಮನೆಯ ಒಳಗೆ ಹರಿಯುತ್ತಿವೆ ಎಂದು ವಾಸಿಸುವವರು ಹೇಳುತ್ತಾರೆ.
ಸಮರ್ಪಕವಾಗಿ ಸಿಗದ ವಿದ್ಯುತ್ ಸೌಲಭ್ಯ:
ವಸತಿ ಸಮುಚ್ಛಯದಲ್ಲಿ ಮಾಡಲಾದ ವಿದ್ಯುತ್ ಕಾಮಗಾರಿ ತೃಪ್ತಿಕರವಾಗಿಲ್ಲವಾಗಿದೆ. ವಿದ್ಯುತ್ ಮೀಟರ್‍ಗಳಿಗಾಗಿ ಪ್ರತಿ ಸಮುಚ್ಛಯದಲ್ಲಿ ನಿರ್ಮಿಸಿರುವ ಬಾಕ್ಸ್ ವ್ಯವಸ್ಥೆಯ ಕೆಳಭಾಗವು ಸಮರ್ಪಕವಾಗಿ ಮುಚ್ಚಲ್ಪಟ್ಟಿಲ್ಲ. ಇದರಿಂದ ವೈರ್‍ಗಳು ಹೊರಗಡೆ ಬಿದ್ದಿವೆ. ಕೆಲವೆಡೆ ಅರ್ತಿಂಗ್ ವೈರ್‍ಕೂಡ ಮೆಟ್ಟಿಲುಗಳ ಅಂಚಿನಲ್ಲಿವೆ. ಸಣ್ಣ ಮಕ್ಕಳು, ವಯೋವೃದ್ಧರು ನೋಡದೆ ಆ ವೈರ್‍ಗಳನ್ನು ತಾಕಿದ್ದಲ್ಲಿ ಪ್ರಾಣಕ್ಕೆ ಕುತ್ತು ಬರುವ ಸಾಧ್ಯತೆಗಳು ಕೂಡ ಇವೆ.
ಮೋಟರ್ ಅಳವಡಿಸಲು 3000 ರೂ:
ಬೆಸ್ಕಾಂ ಇಲಾಖೆಯಿಂದ ಮೀಟರ್ ಒಂದು ಅಳವಡಿಸಲು ನಿಗಧಿ ಮಾಡಿದ ಹಣ 900 ರೂ. ಆದರೆ ಇಲ್ಲಿ ಮೀಟರ್ ಅಳವಡಿಕೆಗೆ ಪಡೆದ ಹಣ ಮಾತ್ರ ಬರೊಬ್ಬರಿ 3000 ರೂ. ಅದು ಕೂಡ ಹಣ ಪಡೆದು ಇಲ್ಲಿಯವರೆಗೆ ಮೀಟರ್ ಅಳವಡಿಕೆ ಮಾಡಿಲ್ಲ ಎಂಬ ಮಾತುಗಳು ಕೂಡ ಹೆಚ್ಚಾಗಿ ಕೇಳಿ ಬರುತ್ತಿವೆ. ಈಗಾಗಲೇ ಕೆಲ ಮನೆಗಳಲ್ಲಿ ತಾತ್ಕಾಲಿಕವಾಗಿ ವಿದ್ತುತ್ ಸಂಪರ್ಕ ಮಾಡಿದ್ದಾರಾದರು ಸಂಪೂರ್ಣವಾಗಿ ವಿದ್ಯುತ್ ಸೌಲಭ್ಯ ಮಾಡಿಲ್ಲ ಎಂಬುದು ಮತ್ತೊಂದು ಪ್ರಮುಖ ಆರೋಪವಾಗಿದೆ.
ಅವಶ್ಯಕವಾಗಿದೆ ಆಸ್ಪತ್ರೆ:
ಸರಿಸುಮಾರು 5000ಕ್ಕೂ ಹೆಚ್ಚು ಜನ ವಾಸ ಮಾಡುತ್ತಿರುವ ಬಡಾವಣೆಯಲ್ಲಿ ಮೂಲಭೂತ ಸೌಲಭ್ಯಗಳಿಲ್ಲದೆ ಪರದಾಡುತ್ತಿದ್ದಾರೆ ಎನ್ನುವುದಕ್ಕೆ ಮತ್ತೊಂದು ಉದಾಹರಣೆ. ಇಲ್ಲಿ ಯಾವುದಾದರೊಂದು ಅನಾಹುತ ಸಂಭವಿಸಿದಲ್ಲಿ ತುರ್ತು ಚಿಕಿತ್ಸೆ ಮಾಡಲು ಯಾವುದೇ ಸೌಲಭ್ಯವಿಲ್ಲ. ಒಂದು ಸಾರ್ವಜನಿಕ ಆಸ್ಪತ್ರೆ ವ್ಯವಸ್ಥೆ ಇಲ್ಲ. ಮೂಲ ನಕ್ಷೆಯ ಪ್ರಕಾರ ಈ ಪ್ರದೇಶದಲ್ಲಿ ಶಾಲೆ, ಆಸ್ಪತ್ರೆ ನಿರ್ಮಿಸಬೇಕು. ಆದರೆ ಇಂದಿನವರೆಗೂ ಯಾವೊಬ್ಬ ಅಧಿಕಾರಿಯೂ ಇದರ ಗೋಜಿಗೆ ಹೋಗಿಲ್ಲ ಅನಿಸುತ್ತಿದೆ.
ರಸ್ತೆ ಮೇಲೆ ಬೇಕಿದೆ ಹಂಪ್ಸ್ ಗಳು:
ನೂತನ ಬಡಾವಣೆಯಾದ್ದರಿಂದ ಉತ್ತಮವಾದ ರಸ್ತೆಗಳನ್ನು ಇಲ್ಲಿ ನಿರ್ಮಿಸಲಾಗಿದೆ. ಈ ರಸ್ತೆಯ ಯಾವೊಂದು ಭಾಗದಲ್ಲಿಯೂ ಹಂಪ್ಸ್‍ಗಳನ್ನು ಹಾಕಿಲ್ಲ. ಇದರಿಂದ ವಾಹನಗಳು ಅತಿ ವೇಗವಾಗಿ ಬರುತ್ತವೆ. ಇತ್ತೀಚೆಗೆ ಓರ್ವ ಬಾಲಕನ ಮೇಲೆ ವಾಹನವೊಂದು ಹರಿದು ಎರಡು ಕಾಲುಗಳು ಮುರಿದಿವೆ. ಆ ಬಾಲಕನೀಗ ಅಂಗವಿಕಲನಾಗಿ ಜೀವನ ಸಾಗಿಸುವಂತಾಗಿದೆ. ರಾತ್ರಿ ವೇಳೆ ಇಂತಹ ಘಟನೆಗಳು ಮರುಕಳಿಸಿದರೆ ಹೆಚ್ಚಿನ ಅನಾಹುತಗಳಾದರೆ ಯಾರನ್ನು ಕೇಳಬೇಕು ಎಂಬುದು ಕೂಡ ತಿಳಿಯದ ಪರಿಸ್ಥಿತಿ.
ಬೇಕಿದೆ ಬಸ್ ಸೌಲಭ್ಯ:
ವಸತಿ ಸಮುಚ್ಛದಿಂದ ಸಾಕಷ್ಟು ಮಂದಿ ವಿದ್ಯಾರ್ಥಿಗಳು ನಗರದಲ್ಲಿರುವ ಶಾಲಾ ಕಾಲೇಜುಗಳಿಗೆ ತೆರಳುತ್ತಾರೆ. ಇಲ್ಲಿಗೆ ಸರಿಯಾದ ವಾಹನ ಸೌಲಭ್ಯವಿಲ್ಲ. ಬೆಳಗ್ಗೆ ಒಂದು ಮತ್ತು ಸಂಜೆ ಒಂದು ಸರ್ಕಾರಿ ಬಸ್ ದಿಬ್ಬೂರು ಬಸ್ ನಿಲ್ದಾಣದವರೆಗೆ ಬರುತ್ತದೆ. ಆದರೆ ದಿಬ್ಬೂರು ಒಳಭಾಗಕ್ಕೆ ಬಸ್ ಸಂಚಾರ ಕಲ್ಪಿಸಿದರೆ ಎಲ್ಲಾ ಮಕ್ಕಳಿಗೆ ಹಾಗೂ ಸ್ಥಳೀಯ ಜನರಿಗೆ ಅನುಕೂಲವಾಗುತ್ತದೆ. ಇಲ್ಲಿನ ಜನರು ನಗರಕ್ಕೆ ಬಂದುಹೋಗಲು ಅನುಕೂಲವಾಗುವಂತೆ ಸಿಟಿ ಬಸ್ ವ್ಯವಸ್ಥೆಯನ್ನು ಈ ಮಾರ್ಗದಲ್ಲಿ ತುರ್ತಾಗಿ ಆರಂಭಿಸಬೇಕು ಸ್ಥಳೀಯರ ಒತ್ತಾಯವೂ ಆಗಿದೆ.
ಪೊಲೀಸ್ ಔಟ್ ಪೋಸ್ಟ್‍ಗೆ ಬೇಡಿಕೆ:
ದಿಬ್ಬೂರಿನಿಂದ ಒಳಭಾಗದಲ್ಲಿ ವಸತಿ ಸಮುಚ್ಛಯಗಳನ್ನು ನಿರ್ಮಾಣ ಮಾಡಿರುವುದರಿಂದ ಕಳ್ಳರ ಕಾಟ ಹೆಚ್ಚಾಗಿದೆ. ಇಲ್ಲಿ ಯಾವೊಬ್ಬ ಪೊಲೀಸ್ ಅಧಿಕಾರಿಗಳು ಬರುವುದಿಲ್ಲ. ಬೀಟ್ ಪೊಲೀಸರಂತೂ ಇಲ್ಲಿ ಕಾಣುವುದೇ ಇಲ್ಲ. ಪ್ರತಿ ದಿನ ರಾತ್ರಿ ಮಲಗಿದ್ದ ವೇಳೆ ಕಳ್ಳರು ಮನೆಯ ಬಾಗಿಲು ಬಡಿಯುವುದು. ಕಿಟಕಿ ಗ್ಲಾಸ್‍ಗಳನ್ನು ಒಡೆಯುವುದು. ನೀರಿನ ಸಂಪ್‍ನಲ್ಲಿರುವ ಮೋಟಾರ್‍ಗಳನ್ನು ಕದ್ದೊಯ್ದ ಘಟನೆಗಳು ನಡೆದಿವೆ. ರಾತ್ರಿ ವೇಳೆ ಯಾರು ಕೂಡ ಒಂಟಿಯಾಗಿ ಓಡಾಡಲು ಸಾಧ್ಯವೇ ಇಲ್ಲ. ಅದರಲ್ಲೂ ಮಹಿಳೆಯರಂತೂ ಒಂಟಿಯಾಗಿ ವಾಸ ಮಾಡಲು ಕೂಡ ಆಗದ ಪರಿಸ್ಥಿತಿ ನಿರ್ಮಾಣವಾಗಿದೆ. ಇಲ್ಲಿನ ನಿವಾಸಿಗಳು ಧೈರ್ಯದಿಂದ ವಾಸ ಮಾಡಬೇಕಾದರೆ ಪೊಲೀಸ್ ಔಟ್ ಪೋಸ್ಟ್ ತುರ್ತಾಗಿ ಪ್ರಾರಂಭಿಸಬೇಕಾಗಿದೆ.
ನಿಜವಾದ ಫಲಾನುಭವಿಗಳಿಗೆ ಸಿಗದ ಮನೆಗಳು:
ರಾಜೀವ್ ಗಾಂಧಿ ಆವಾಸ್ ಯೋಜನೆ ಅಡಿಯಲ್ಲಿ ಕೊಳಚೆ ಪ್ರದೇಶದಲ್ಲಿ ವಾಸ ಮಾಡುವವರಿಗೆ ಸೂಕ್ತ ನಿವೇಶನ ಸಿಗಲಿ ಎಂದು 1200 ಮನೆಗಳ ಸಮುಚ್ಛಯದಲ್ಲಿ ಅರ್ಜಿ ಹಾಕಿದ್ದವರಲ್ಲಿ ಸಾಕಷ್ಟು ಮಂದಿಗೆ ಮನೆಗಳೇ ಸಿಗಲಿಲ್ಲ. ಬದಲಿಗೆ ಯಾರು ಹೆಚ್ಚಿಗೆ ಹಣ ನೀಡುತ್ತಾರೆ ಅವರಿಗೆ ಮನೆಗಳು ದೊರಕಿವೆ. ಓರ್ವರ ಕುಟುಂಬದಲ್ಲಿ ಇಬ್ಬರು ಮಕ್ಕಳು ವಿಶೇಷ ಚೇತನರು. ಅವರ ಹೆಸರು ಫಲಾನುಭವಿಗಳ ಪಟ್ಟಿಯಲ್ಲಿ ಬಂದಿದೆ. ಅವರು ಮನೆ ಪಡೆಯಲು ಡಿಡಿ ಕಟ್ಟಲು ಹೋದರೆ ಇಲ್ಲ ಸಲ್ಲದ ಹೇಳಿಕೆಗಳನ್ನು ನೀಡಿ ಡಿಡಿಯನ್ನು ಕಟ್ಟಿಸಿಕೊಳ್ಳದೆ ಬೇಜವಬ್ದಾರಿ ತೋರುತ್ತಿದ್ದಾರೆ ಎಂದು ಕುಟುಂಬದ ಯಜಮಾನ ಪ್ರಜಾಪ್ರಗತಿಗೆ ತಿಳಿಸಿದರು.
ನಿರ್ಮೂಲನೆಯಾಗದ ಕಸದ ಸಮಸ್ಯೆ:
ದಿಬ್ಬೂರು ಭಾಗದಲ್ಲಿ ಎಲ್ಲಿಯೂ ಕಸದ ತೊಟ್ಟಿಗಳು ಕಾಣುವುದೇ ಇಲ್ಲ. ಗಾರ್ಡನ್ ರಸ್ತೆಯಲ್ಲಿ ಬಿಟ್ಟರೆ ದಿಬ್ಬೂರು ಪ್ರದೇಶದಲ್ಲಿ ಎಲ್ಲಿಯೂ ಕಸದ ತೊಟ್ಟಿಗಳನ್ನು ಇಟ್ಟಿಲ್ಲ. ವಸತಿ ಸಮುಚ್ಛಯದಲ್ಲಂತಿ ಕಸ ಹಾಕಲು ಕಸದ ತೊಟ್ಟಿಗಳೂ ಇಲ್ಲ. ಕಸದ ವಾಹನಗಳಂತೂ ಬರುವುದೇ ಇಲ್ಲ. ಪ್ರತಿನಿತ್ಯ ನಗರದ ಎಲ್ಲಾ ಭಾಗಗಳಲ್ಲಿಯೂ ಕಸದ ವಾಹನಗಳು ಓಡಾಡುತ್ತವೆ. ಕಸವನ್ನು ತೆಗೆದುಕೊಂಡು ಹೋಗುತ್ತವೆ. ಆದರೆ ಒಂದು ವಾಹನವು ಕೂಡ ದಿಬ್ಬೂರು ವಸತಿ ನಿಲಯಗಳ ಹತ್ತಿರ ಸುಳಿಯುವುದೇ ಇಲ್ಲ. ಇದರಿಂದ ಕಸದ ಸಮಸ್ಯೆ ಯಥೇಚ್ಛವಾಗಿದೆ.
ಹೆಚ್ಚಾದ ಸೊಳ್ಳೆಗಳು :
ಒಳಚರಂಡಿ ವ್ಯವಸ್ಥೆ ಸರಿಯಿಲ್ಲದ ಕಾರಣ, ಚರಂಡಿ ನೀರು ನಿಂತು ದುರ್ವಾಸನೆ ಬೀರುತ್ತಿದೆ. ಅದರ ಜೊತೆಗೆ ನೀರು ಹರಿಯಲು ಸಾಧ್ಯವಾಗುತ್ತಿಲ್ಲ ಚರಂಡಿಗಳು ತುಂಬಿ ತುಳುಕುತ್ತಿವೆ. ಸಾಮಾನ್ಯವಾಗಿ ಹೆಚ್ಚು ದಿನಗಳ ಕಾಲ ನೀರು ನಿಂತರೆ ಸೊಳ್ಳೆಗಳ ಉತ್ಪತ್ತಿಯಾಗುತ್ತವೆ. ಅಂತಹದ್ದು ಚರಂಡಿ ನೀರು ಹರಿಯದೆ ತಿಂಗಳುಗಟ್ಟಲೆ ನಿಂತರೆ ಸೊಳ್ಳೆಗಳಗೆ ಆವಾಸ ಸ್ಥಾನ ಮಾಡಿಕೊಟ್ಟಂತಾಗಿದೆ. ಸಂಜೆ ವೇಳೆ ಮನೆಯ ಮುಂದೆ ನಿಂತುಕೊಳ್ಳಲು ಕೂಡ ಆಗದಷ್ಟು ಸೊಳ್ಳೆಗಳು ಇಲ್ಲ ಕಂಡು ಬರುತ್ತವೆ. ಇದರಿಂದ ಯಾವಾಗ ಯವ ಕಾಯಿಲೆ ಬರುತ್ತೋ ಎಂಭ ಭೀತಿಯು ಇಲ್ಲಿನ ನಿವಾಸಿಗಳಲ್ಲಿದೆ.
ಸ್ಪಂಧಿಸದ ಅಧಿಕಾರಿ ವರ್ಗದವರು:
ಬಡವರಿಗಾಗಿ ನೀಡಿದ ಮನೆಗಳಲ್ಲಿ ಸಮಸ್ಯೆಗಳ ಮಹಾಪೂರವೇ ಇದೆ. ಈ ಬಗ್ಗೆ ಹೇಳಿಕೊಳ್ಳಲು ಯಾವೊಬ್ಬ ಅಧಿಕಾರಿಯೂ ಇತ್ತ ಸುಳಿಯುವುದಿಲ್ಲ. ಸಮುಚ್ಛಯಗಳಿರುವ ಪ್ರದೇಶದಲ್ಲಿ ಎರಡು ಆಡಳಿತ ಕಚೇರಿಗಳಿವೆ. ಆದರೆ ಅವುಗಳು ತೆರೆಯವುದು ಯಾವಾಗ ಎಂಬುದು ಸ್ಥಳೀಯರಿಗೆ ತಿಳಿದಿಲ್ಲ. ಸ್ಲಂ ಬೋರ್ಡ್ ಅಧಿಕಾರಿಗಳಿಗೆ ಮಾಹಿತಿ ನೀಡಿದರೆ ಇದು ಜಿಲ್ಲಾಧಿಕಾರಿ ವ್ಯಾಪ್ತಿಗೆ ಬರುತ್ತದೆ ಎನ್ನುತ್ತಾರೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೇಳಿದರೆ ಇದು ಮಹಾನಗರ ಪಾಲಿಕೆ ವ್ಯಾಪ್ತಿಗೆ ಬರುತ್ತದೆ ಎಂದು ನುಣುಚಿಕೊಳ್ಳುತ್ತಾರೆ. ಒಬ್ಬರ ಮೇಲೆ ಇನ್ನೊಬ್ಬರು ಹೇಳುತ್ತಾ ನಮ್ಮ ಸಮಸ್ಯೆಗಳಿಗೆ ಯಾರು ಸ್ಪಂಧಿಸುತ್ತಿಲ್ಲ ಎನ್ನುತ್ತಾರೆ ಸ್ಥಳೀಯ ನಿವಾಸಿಗಳು.
ನೋಡವುದಕ್ಕೆ ಮಾತ್ರ ಸುಂದರ:
ದಿಬ್ಬೂರು ಮನೆಗಳಿಗೆ ಭೇಟಿ ನೀಡಿದರೆ ಮೊದಲು ಕಣ್ಣಿಗೆ ಕಾಣುವುದು ಸುಂದರವಾದ ರಸ್ತೆಗಳು. ಈ ರಸ್ತೆಗಳನ್ನು ನೋಡುತ್ತಿದ್ದಂತೆಯೇ ಎಷ್ಟು ಸುಂದರವಾಗಿದೆ. ನಾವು ಕೂಡ ಇಲ್ಲಿಯೇ ವಾಸ ಮಾಡಬೇಕೆನಿಸುತ್ತದೆ. ಆದರೆ ಒಳ ಪ್ರವೇಶಿಸುತ್ತಿದ್ದಂತೆಯೇ ಒಂದೊಂದು ಸಮಸ್ಯೆಗಳು ದರ್ಶನವಾಗುತ್ತವೆ. ನೋಡಲು ಮಾತ್ರ ಸುಂದರವಾಗಿದ್ದು, ಒಳಗೆಲ್ಲಾ ಬರಿ ಕೊಳಕು ತುಂಬಿದೆ.
ನಿಜವಾದ ಫಲಾನುಭವಿಗಳನ್ನು ಗುರುತಿಸಿ :
ತುಮಕೂರಿನ ದಿಬ್ಬೂರು ಆಶ್ರಯ 1200 ಮನೆಗಳನ್ನು ಈ ಹಿಂದೆ ಇದ್ದಂತಹ ಜಿಲ್ಲಾಧಿಕಾರಿಗಳು ಅನುಮೋದನೆಯನ್ನು ನೀಡಿದ್ದರು. ಅದರಲ್ಲಿ 1038 ಫಲಾನುಭವಿಗಳು ವಂತಿಕೆಯನ್ನು ಪಾವತಿಸಿದ್ದರು. ಉಳಿದಂತಹ ಫಲಾನುಭವಿಗಳು ಸಮಯಕ್ಕೆ ಸರಿಯಾಗಿ ದಿನಾಂಕದ ಒಳಗಡೆ ಕಟ್ಟದಿರುವ ಕಾರಣ ಈ ಹಿಂದಿನ ಜಿಲ್ಲಾಧಿಕಾರಿಗಳು 145 ಮನೆಗಳನ್ನು ರದ್ದುಪಡಿಸಿ ಸರತಿ ಸಾಲಿನಲ್ಲಿದ್ದಂತಹ ಆದರೆ ವೈಟಿಂಗ್ ಲಿಸ್ಟ್‍ನಲ್ಲಿ ಇದ್ದಂತಹ ನೂರು ಜನರಿಗೆ ಮನೆಯ ಹಂಚಿಕೆಯನ್ನು ಜಿಲ್ಲಾಧಿಕಾರಿಗಳು ಅನುಮೋದನೆ ನೀಡಿದ್ದರು. ಕಾಲಾಂತರ ಚುನಾವಣೆ ಬಂದ ಹಿನ್ನೆಲೆಯಲ್ಲಿ ಆ ಪಟ್ಟಿಯಲ್ಲಿರುವ ಹೆಸರುಗಳಿಗೆ ಹಂಚಿಕೆ ಮಾಡಲು ಇಲಾಖೆಯವರಿಗೆ ಆಗಲಿಲ್ಲ. ಆದರೆ ಚುನಾವಣೆ ನೀತಿ ಸಂಹಿತೆ ಮುಗಿದ್ದರೂ ಸಹ ಕೊಳಚೆ ನಿರ್ಮೂಲನಾ ಮಂಡಳಿಯವರು ಅಧಿಕಾರಿಗಳು ಈ ನೂರು ಜನರಿಗೆ ಮನೆ ಹಂಚಿಕೆಯನ್ನು ಮಾಡದೆ ಅವರಿಗೆ ಬೇಕಾದವರಿಗೆ ಮನೆಗಳನ್ನು ಹಂಚಿಕೆ ಮಾಡಿರುತ್ತಾರೆ. ಆದ್ದರಿಂದ ಸಂಬಂಧಪಟ್ಟವರು ನಿಜವಾದ ಫಲಾನುಭವಿಗಳಿಗೆ ಮನೆಯನ್ನು ಹಂಚಿಕೆ ಮಾಡಬೇಕು.
-ಇಮ್ರಾನ್ ಪಾಷಾ, ಮಾಹಿತಿ ಹಕ್ಕು ಕಾರ್ಯಕರ್ತ, ತುಮಕೂರು.
ನಾಡಿನಿಂದ ಕಾಡಿಗೆ ಬಂದಾಂತಾಗಿದೆ:
ಇಷ್ಟು ದಿನಗಳ ಕಾಲ ನಗರದ ಯಾವುದೋ ಮೂಲೆಯಲ್ಲಿ ವಾಸ ಮಾಡುತ್ತಿದ್ದೆವು. ಅಲ್ಲಿ ಕಸದ ಸಮಸ್ಯೆ,ಚರಂಡಿ ಸಮಸ್ಯೆ ಇದ್ದರೂ ಅದನ್ನು ವಾರಕ್ಕೊಮ್ಮೆ ಬಂದು ಸ್ವಚ್ಛಗೊಳಿಸುತ್ತಿದ್ದರು. ಅಲ್ಲಿಂದ ಮನೆಗಳು ಕೊಡುತ್ತೇವೆ ಎಂದು ಹೇಳಿ ದಿಬ್ಬೂರಿನ ವಸತಿ ಸಮುಚ್ಛಯಕ್ಕೆ ತಂದು ಬಿಟ್ಟಿದ್ದಾರೆ. ಇಲ್ಲಿ ಜನರಿಗೆ ಬೇಕಾದ ಮೂಲಭೂತ ಸೌಲಭ್ಯಗಳೇ ಇಲ್ಲ. ನಾಡಿನಿಂದ ಕಾಡಿಗೆ ತಂದು ಬಿಟ್ಟರೆ ಹೇಗಿರುತ್ತೋ ನಮ್ಮ ಪಾಡು ಕೂಡ ಹಾಗೇ ಆಗಿದೆ.
-ಶಾರದಮ್ಮ, ಸ್ಥಳೀಯ ನಿವಾಸಿ
ಪ್ರತಿಯೊಂದು ಬ್ಲಾಕ್‍ಗಳಿಗೂ ನೀರಿನ ಟ್ಯಾಂಕ್‍ಗಳನ್ನು ಅಳವಡಿಸಲಾಗಿದೆ. ಆದರೆ ಯಾವೊಂದು ಟ್ಯಾಂಕ್‍ಗಳಿಗೂ ನೀರು ತುಂಬಿಸಲು ಆಗುತ್ತಿಲ್ಲ. ಮೋಟರ್ ಪ್ರಾರಂಭಿಸಿದರೆ ಪೈಪ್‍ಗಳು ಲೀಕ್ ಆಗಿ ನೀರು ಗೋಡೆಗಳನ್ನು ನೆನೆಸುತ್ತಿದೆ. ಈ ಬಗ್ಗೆ ಯಾವ ಅಧಿಕಾರಿಯನ್ನು ಕೇಳಿದರೂ ಸರಿಯಾದ ಉತ್ತರ ಸಿಗುತ್ತಿಲ್ಲ.
-ಗೌಸ್, ಸ್ಥಳೀಯ ನಿವಾಸಿ
ಅಂಗನವಾಡಿ ಕೇಂದ್ರ ತೆರೆಯಲಿ:
ದಿಬ್ಬೂರು ವಸತಿ ಸಮುಚ್ಛಯದಲ್ಲಿ ಹೆಚ್ಚಾಗಿ ಕೊಳಗೇರಿ ನಿವಾಸಿಗಳು ಸೇರಿದಂತೆ ಬಡವರೇ ಸಾಕಷ್ಟು ಮಂದಿ ಇದ್ದಾರೆ. ಇಲ್ಲಿನ ಮಕ್ಕಳಿಗೆ ವಿದ್ಯಾಭ್ಯಾಸ ಮಾಡಿಸುವ ಅಗತ್ಯವಿದೆ. ಈ ಪ್ರದೇಶದಲ್ಲಿ ಒಂದು ಅಂಗನವಾಡಿ ಮಾಡಿಕೊಟ್ಟರೆ ನಾವೇ ಉಚಿತವಾಗಿ ಪಾಠ ಹೇಳಿಕೊಡುತ್ತೇವೆ. ಮಕ್ಕಳು ಶಿಕ್ಷಣ ಕಡೆಗೆ ಗಮನ ಹರಿಸುವಂತೆ ಮಾಡಲು ಪ್ರಯತ್ನ ಮಾಡುತ್ತೇವೆ.
ಸಿದ್ದಲಿಂಗಮ್ಮ, ಸ್ಥಳೀಯರು
ನೆಲದಲ್ಲಿ ಹಾಕಬೇಕಾದ ವಿದ್ಯುತ್ ಲೈನ್‍ಗಳು ನೆಲದ ಮೇಲೆಯೇ ಇದೆ. ಇದರಿಂದ ಯಾರಿಗಾದರೂ ಹಾನಿ ಸಂಭವಿಸಿದರೆ ಇದಕ್ಕೆ ಯಾರು ಹೊಣೆ. ಓವರ್ ಹೆಡ್ ಟ್ಯಾಂಕ್ ಮಾಡುವ ನೆಪದಲ್ಲಿ ಚರಂಡಿಗಳನ್ನು ಮುಚ್ಚಿದ್ದಾರೆ. ಇದರಿಂದ ಚರಂಡಿ ನೀರು ಹರಿಯುತ್ತಿಲ್ಲ. ಇಲ್ಲಿರುವ ಮನೆಗಳ ಕಿಟಕಿಗಳ ಗಾಜುಗಳು ಒಡೆದುಹೋಗಿವೆ. ಮನೆಗಳ ನಿರ್ಮಾಣ ಕೆಲಸ ತರಾತುರಿಯಲ್ಲಿ ನಿರ್ಮಾಣ ಮಾಡಲಾಗಿದೆ. ಪ್ಲಂಬಿಂಗ್ ಕೆಲಸ ಸರಿಯಾಗಿ ಆಗಿಲ್ಲ. ವಿದ್ಯುತ್ ಸಂಪರ್ಕ ಕೆಲ ಮನೆಗಳಿಗೆ ಕೊಟ್ಟರೆ ಇನ್ನೂ ಕೆಲ ಮನೆಗಳಿಗೆ ನೀಡಿಲ್ಲ. ಸಾಕಷ್ಟು ಸಮಸ್ಯೆಗಳ ನಡುವೆ ವಾಸ ಮಾಡುವಂತಾಗಿದೆ.
-ಬಾಬಾ, ಬೀದಿ ಬದಿ ವ್ಯಾಪಾರಸ್ಥ ಸಂಘದ ಅಧ್ಯಕ್ಷ
ಇಷ್ಟೆಲ್ಲಾ ಸಮಸ್ಯೆಗಳ ನಡುವೆ ಇಲ್ಲಿ ಸುಮಾರು 5000ಕ್ಕೂ ಹೆಚ್ಚು ಜನ ವಾಸ ಮಾಡುತ್ತಿದ್ದಾರೆ. ಸ್ಲಂ ಬೋರ್ಡ್ ಅಧಿಕಾರಿಗಳಾಗಳು, ಜಿಲ್ಲಾಧಿಕಾರಿಗಳು ಹಾಗೂ ಮಹಾನಗರ ಪಾಲಿಕೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆಗಳ ಪರಿಹಾರ ಮಾಡಿ ಸ್ಥಳೀಯರಿಗೆ ಅನುಕೂಲ ಮಾಡಬೇಕಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ











