ಇಡಿ ವಿಚಾರಣೆಗೆ ಹಾಜರಾದ ಡಿ.ಕೆ.ಸುರೇಶ್!!

ದೆಹಲಿ :

      ಡಿ.ಕೆ.‌ಶಿವಕುಮಾರ್‌ ಅವರ ಸೋದರ, ಸಂಸದ‌ ಡಿ.ಕೆ. ಸುರೇಶ್ ವಿಚಾರಣೆಗಾಗಿ ಜಾರಿ ನಿರ್ದೇಶನಾಲಯ (ಇ.ಡಿ.‌) ಕಚೇರಿಗೆ  ಹಾಜರಾಗಿದ್ದಾರೆ.

     ಇಡಿ ಅಧಿಕಾರಿಗಳು ಅಕ್ಟೋಬರ್ 07 ರ ಒಳಗಾಗಿ ಇಡಿ ವಿಚಾರಣೆಗೆ ಹಾಜರಾಗುವಂತೆ ಡಿಕೆಶಿ ಸಹೋದರ ಹಾಗೂ ಸಂಸದ ಡಿ.ಕೆ. ಸುರೇಶ್ ಅವರಿಗೂ ಸಮನ್ಸ್ ಜಾರಿ ಮಾಡಿದ್ದರು. ಹೀಗಾಗಿ ಬೆಳಿಗ್ಗೆ 11ಕ್ಕೆ ಕೆಲವು ದಾಖಲೆಗಳೊಂದಿಗೆ ಇಲ್ಲಿನ ಖಾನ್ ಮಾರ್ಕೆಟ್ ಬಳಿ ಇರುವ ಲೋಕನಾಯಕ‌ ಭವನದಲ್ಲಿರುವ  ಇ.ಡಿ. ಪ್ರಧಾನ ಕಚೇರಿಯೊಳಗೆ ತೆರಳಿದ್ದಾರೆ.

      ವಿಚಾರಣೆಗೆ ತೆರಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಸುರೇಶ್, ಎಲ್ಲ ಪ್ರಶ್ನೆಗಳಿಗೂ ಉತ್ತರ ನೀಡುವೆ. ನಾನು ಯಾವುದೇ ತಪ್ಪು ಮಾಡಿಲ್ಲ ಎಂದಿದ್ದಾರೆ.

      ದೆಹಲಿಯ ಇಡಿ ಮುಖ್ಯ ಕಚೇರಿಯಲ್ಲಿ ನಡೆಯಲಿರುವ ವಿಚಾರಣೆಯಲ್ಲಿ ಅಧಿಕಾರಿಗಳು ಪ್ರಮುಖವಾಗಿ ಡಿ.ಕೆ. ಸುರೇಶ್ ಅವರಿಗೆ ಸೇರಿದ 27 ಆಸ್ತಿಗಳ ಕುರಿತು ಪ್ರಶ್ನೆ ಮಾಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

      ಈ ನಡುವೆ ಡಿಕೆಶಿ ಒಡೆತನದ ದೆಹಲಿ ಫ್ಲ್ಯಾಟ್​ನಲ್ಲಿ ದೊರೆತ 40 ಲಕ್ಷ ಹಣದ ಪೈಕಿ 21 ಲಕ್ಷ ತಮ್ಮದೆಂದು ಸುರೇಶ್ ಈಗಾಗಲೇ ಐಟಿ ಅಧಿಕಾರಿಗಳ ಎದುರು ಒಪ್ಪಿಕೊಂಡಿದ್ದಾರೆ. ಡಿಕೆಶಿ ಪುತ್ರಿ ಐಶ್ವರ್ಯ ಅವರಿಗೆ ಸಾಲ ನೀಡಿದ್ದಾಗಿಯೂ ತಿಳಿಸಿದ್ದಾರೆ. ಆದರೆ, ಈ ಎಲ್ಲಾ ಮಾಹಿತಿಯ ಕುರಿತು ಇಡಿ ಅಧಿಕಾರಿಗಳಿಗೆ ಸಾಕಷ್ಟು ಗೊಂದಲ ಇದ್ದು, ಇಂದಿನ ವಿಚಾರಣೆಯಲ್ಲಿ ಈ ಕುರಿತ ಪ್ರಮುಖ ಪ್ರಶ್ನೆಗಳನ್ನು ಇಡಿ ಅಧಿಕಾರಿಗಳು ಡಿ.ಕೆ. ಸುರೇಶ್ ಮುಂದೆ ಇಡಲಿದ್ದಾರೆ ಎಂದು ಹೇಳಲಾಗುತ್ತಿದೆ.

       ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ಅಡಿ ಬಂಧನಕ್ಕೆ ಒಳಗಾಗಿರುವ ಡಿ.ಕೆ.‌ಶಿವಕುಮಾರ್‌ ಅವರಿಗೆ ಕಳೆದ ಮಂಗಳವಾರ ನ್ಯಾಯಾಂಗ ಬಂಧನದ ಅವಧಿ ಮುಗಿದಿದ್ದ ಕಾರಣ ಡಿಕೆಶಿ ಅವರನ್ನು ಇಡಿ ವಿಶೇಷ ನ್ಯಾಯಾಲಯದ ಎದುರು ಹಾಜರುಪಡಿಸಲಾಗಿತ್ತು. ನ್ಯಾಯಾಧೀಶ ಅಜಯ್ ಕುಮಾರ್ ಕುಹಾರ್ ಡಿಕೆಶಿ ಅವರ ನ್ಯಾಯಾಂಗ ಬಂಧನವನ್ನು ಮತ್ತೆ ವಿಸ್ತರಿಸಿದ್ದರು. ಹೀಗಾಗಿ ಅಕ್ಟೋಬರ್​ 14ರ ವರೆಗೆ ಅವರು ತಿಹಾರ್​ ಜೈಲಿನಲ್ಲೇ ಇರಬೇಕಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ