ಪ್ಯಾರಿಸ್:
ಜಮ್ಮು-ಕಾಶ್ಮೀರದ ಪುಲ್ವಾಮಾ ದಾಳಿಯ ರೂವಾರಿ, ಜೈಶ್ ಎ ಮೊಹಮ್ಮದ್ ಭಯೋತ್ಪಾದಕ ಸಂಘಟನೆಯ ಮುಖ್ಯಸ್ಥ ಅಜರ್ ಮಸೂದ್ ನ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ನಿರ್ಧರಿಸಿರುವುದಾಗಿ ಫ್ರಾನ್ಸ್ ಸರ್ಕಾರ ತಿಳಿಸಿದೆ.
ಫ್ರಾನ್ಸ್ ನ ಆಂತರಿಕ ಸಚಿವಾಲಯ, ಹಣಕಾಸು ಸಚಿವಾಲಯ ಮತ್ತು ವಿದೇಶಾಂಗ ಸಚಿವಾಲಯ ಜಂಟಿಯಾಗಿ ನೀಡಿರುವ ಹೇಳಿಕೆಯಲ್ಲಿ, ಭಯೋತ್ಪಾದನೆಯಲ್ಲಿ ನಿರತರಾಗಿರುವ ಶಂಕಿತ ಉಗ್ರರ ಯುರೋಪಿಯನ್ ಯೂನಿಯನ್ ಪಟ್ಟಿಯಲ್ಲಿ ಮಸೂದ್ ಅಜರ್ ಹೆಸರನ್ನು ಸೇರಿಸಲಾಗುವುದು ಎಂದಿವೆ.
ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಆತ್ಮಾಹುತಿ ದಾಳಿ ನಡೆಸಿ 40 ಮಂದಿ ಯೋಧರು ಹುತಾತ್ಮರಾದ ಘಟನೆಯ ಹೊಣೆಯನ್ನು ಜೈಶ್ ಎ ಮೊಹಮ್ಮದ್ ಉಗ್ರಗಾಮಿ ಸಂಘಟನೆ ಹೊತ್ತುಕೊಂಡಿತ್ತು. ಈ ಹಿನ್ನೆಲೆಯಲ್ಲಿ ಮಸೂದ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪಾಕಿಸ್ತಾನದ ಮೇಲೆ ಭಾರತ ಸೇರಿದಂತೆ ಹಲವು ರಾಷ್ಟ್ರಗಳು ಒತ್ತಡ ಹೇರಿದ್ದವು. ಆದರೆ ಮಸೂದ್ ನನ್ನು ಜಾಗತಿಕ ಭಯೋತ್ಪಾದಕ ಎಂದು ಘೋಷಿಸಲು ವಿಶ್ವಸಂಸ್ಥೆಯಲ್ಲಿ ಚೀನಾ ಮತ್ತೆ ಅಡ್ಡಗಾಲು ಹಾಕಿತ್ತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
