ನ್ಯೂಯಾರ್ಕ್:
“ಭಾರತ ಮತ್ತು ಪಾಕಿಸ್ತಾನ ದೇಶಗಳಿಂದ ಶೀಘ್ರದಲ್ಲೇ ಸಿಹಿ ಸುದ್ದಿ ಬರಲಿದೆ” ಎಂದು ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ.
ವಿಯೆಟ್ನಾಂನಲ್ಲಿ ಉತ್ತರ ಕೊರಿಯಾ ನಾಯಕ ಕಿಮ್ ಜಾಂಗ್ ಉನ್ ಅವರನ್ನು ಭೇಟಿ ಮಾಡಿ ಮಾತನಾಡಿದ ಅವರು, “ಭಾರತ ಹಾಗೂ ಪಾಕಿಸ್ತಾನ ಯುದ್ಧ ಮಾಡುವ ದಿಕ್ಕಿನಲ್ಲಿ ಸಾಗುತ್ತಿದ್ದವು. ನಾವು ಅದನ್ನು ತಡೆಯಲು ಪ್ರಯತ್ನಿಸುತ್ತಿದ್ದೇವೆ. ಎರಡೂ ದೇಶಗಳ ಸಮಸ್ಯೆಯನ್ನು ಬಗೆಹರಿಸಲು ನಾವು ಮುಂದಾಗಿದ್ದೇವೆ. ಶೀಘ್ರದಲ್ಲೇ ಸಮಾಧಾನಕರ ಸುದ್ದಿ ಸಿಗಲಿದೆ,” ಎಂದಿದ್ದಾರೆ.
“ಭಾರತ ಮತ್ತು ಪಾಕಿಸ್ತಾನ ದೇಶಗಳ ನಡುವೆ ಎದ್ದಿರುವ ಪ್ರಕ್ಷುಬ್ಧ ವಾತಾವರಣ ತಿಳಿಯಾಗಬೇಕು. ಎರಡೂ ದೇಶಗಳೂ ಈ ಸಂದಿಗ್ಧಕ್ಕೆ ತಿಲಾಂಜಲಿ ಹಾಡಿ, ದಶಕ-ದಶಕಗಳ ಕಾಲ ಶಾಂತಿ ಕಾಪಾಡಿಕೊಳ್ಳಲು ಪ್ರಯತ್ನಿಸಬೇಕು. ಆದ್ದರಿಂದ ಉಭಯ ದೇಶಗಳಿಂದಲೂ ಧನಾತ್ಮಕ ಪ್ರತಿಕ್ರಿಯೆ ಬರಲಿದೆ ಎಂದು ನಿರೀಕ್ಷಿಸಿದ್ದೇನೆ” ಎಂದು ಟ್ರಂಪ್ ಹೇಳಿದರು.
ಪುಲ್ವಾಮಾ ದಾಳಿಗೆ ಪ್ರತಿಯಾಗಿ ಪಾಕಿಸ್ತಾನದ ಮೇಲೆ ಭಾರತ ಏರ್ ಸರ್ಜಿಕಲ್ ಸ್ಟ್ರೈಕ್ ನಡೆಸಿತ್ತು. ಈ ಘಟನೆಯಿಂದಾಗಿ ಎರಡೂ ರಾಷ್ಟ್ರಗಳ ನಡುವೆ ಉದ್ವಿಗ್ನ ವಾತಾವರಣ ಸೃಷ್ಟಿಯಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
