ದೆಹಲಿ :
ಬಿಎಸ್ಪಿ ವರಿಷ್ಠೆ ಮಾಯಾವತಿ ಸಹೋದರ ಹಾಗೂ ಅವರ ಪತ್ನಿಗೆ ಸೇರಿದ ನೋಯ್ಡಾದಲ್ಲಿರುವ 400 ಕೋಟಿ ರೂಪಾಯಿ ಮೌಲ್ಯದ ಬೇನಾಮಿ ಭೂಮಿಯನ್ನು ಆದಾಯ ತೆರಿಗೆ ಇಲಾಖೆ ಮುಟ್ಟಗೋಲು ಹಾಕಿಕೊಂಡಿದೆ.
ವಶಪಡಿಸಿಕೊಂಡಿರುವ 400 ಕೋಟಿ ರೂ. ಮೌಲ್ಯದ ಸಂಪತ್ತಾದ ನೋಯ್ಡದಲ್ಲಿರುವ ಏಳು ಎಕರೆಯ ನಿವೇಶನವನ್ನು ಮಾಯಾವತಿ ಸಹೋದರ ಹಾಗೂ ಬಹುಜನ ಸಮಾಜವಾದಿ ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷರೂ ಆಗಿರುವ ಆನಂದ್ ಕುಮಾರ್ ಮತ್ತು ಅವರ ಪತ್ನಿ ವಿಚಿತೆರ್ ಲತಾ ಹೆಸರಲ್ಲಿ ಇತ್ತು.
ಈ ನಿವೇಶನದಲ್ಲಿ ಪಂಚತಾರಾ ಹೋಟೆಲ್ ಮತ್ತು ಇತರ ಐಷಾರಾಮಿ ಸೌಲಭ್ಯಗಳನ್ನು ನಿರ್ಮಿಸಲು ಉದ್ದೇಶಿಸಿದ್ದು, 2ಎ, ಸೆಕ್ಟರ್ 94, ನೋಯ್ಡ ವಿಳಾಸ ಹೊಂದಿ ನೋಂದಣಿಯಾಗಿದೆ. 28328.07 ಚದರ ಮೀಟರ್ ವಿಸ್ತೀರ್ಣದ ಈ ನಿವೇಶನದ ಮೌಲ್ಯ 400 ಕೋಟಿ ರೂ. ಎಂದು ಆದೇಶದಲ್ಲಿ ವಿವರಿಸಲಾಗಿದೆ.
ನಕಲಿ ಕಂಪನಿಗಳೂ ಒಳಗೊಂಡಂತೆ ಆರು ಕಂಪನಿಗಳ ಸಂಕೀರ್ಣ ಷೇರು ಜಾಲವನ್ನು ಐಟಿ ಅಧಿಕಾರಿಗಳು ಪತ್ತೆ ಮಾಡಿದ್ದು, ಇವರು ಬೇನಾಮಿ ಆಸ್ತಿಯ ಫಲಾನುಭವಿಗಳಾಗಿದ್ದು, ಅವರ ಹೆಸರಿನಲ್ಲಿ ನಿವೇಶನ ಇದೆ ಎಂದು ಆದಾಯ ತೆರಿಗೆ ಅಧಿಕಾರಿಗಳು ಹೇಳಿದ್ದಾರೆ.
ಬಿಜೆಪಿ ನಮ್ಮ ಕುಟುಂಬವನ್ನು ಪ್ರಕರಣದಲ್ಲಿ ಸಿಲುಕಿಸಲು ಹತಾಶ ಪ್ರಯತ್ನ ನಡೆಸುತ್ತಿದೆ ಎಂದು ಬಿಎಸ್ಪಿ ನಾಯಕಿ ಗುರುವಾರವಷ್ಟೇ ಆಪಾದಿಸಿದ್ದರು.
