ಬೆಂಗಳೂರು:
ರಾಜ್ಯದಲ್ಲಿ ಬಸ್ ಪ್ರಯಾಣ ದರ ಏರಿಕೆ ಮಾಡಲು ಸಿದ್ಧತೆ ಮಾಡಿಕೊಂಡಿರುವಾಗಲೇ ಕೇಂದ್ರ ಸರ್ಕಾರ ಪೆಟ್ರೋಲ್-ಡೀಸೆಲ್ ದರ ಇಳಿಕೆ ಮಾಡಿರುವುದರಿಂದ ರಾಜ್ಯ ಸರ್ಕಾರ ತನ್ನ ನಿರ್ಧಾರದಿಂದ ತಾತ್ಕಾಲಿಕವಾಗಿ ಹಿಂದೆ ಸರಿದಿದೆ ಎಂದು ಹೇಳಲಾಗಿದೆ.
ಡೀಸೆಲ್ ದರ ಏರಿಕೆಯ ಹಿನ್ನೆಲೆಯಲ್ಲಿ ರಾಜ್ಯ ರಸ್ತೆ ಸಾರಿಗೆ ನಿಗಮ ನಷ್ಟವನ್ನನುಭವಿಸಿದೆ ಎಂಬ ಕಾರಣಕ್ಕೆ ಬಸ್ ಗಳ ಪ್ರಯಾಣ ದರವನ್ನು ಏರಿಕೆ ಮಾಡಲು ರಾಜ್ಯ ಸರ್ಕಾರ ಚಿಂತನೆ ನಡೆಸಿತ್ತು. ಇದೀಗ ಕೇಂದ್ರ ಸರ್ಕಾರ ಡೀಸೆಲ್ ಬೆಲೆಯಲ್ಲಿ 2.50 ರೂ. ಇಳಿಕೆ ಮಾಡಿರುವ ಕಾರಣ ತನ್ನ ನಿರ್ಧಾರದಿಂದ ತಾತ್ಕಾಲಿಕವಾಗಿ ಹಿಂದೆ ಸರಿದಿದೆ ಎಂದು ಹೇಳಲಾಗಿದೆ.
ಬಸ್ ಪ್ರಯಾಣ ದರವನ್ನು ಶೇಕಡ 18ರಷ್ಟು ಏರಿಕೆ ಮಾಡಲು ರಾಜ್ಯ ರಸ್ತೆ ಸಾರಿಗೆ ನಿಗಮ ಸರ್ಕಾರದ ಮುಂದೆ ಪ್ರಸ್ತಾವನೆಯನ್ನು ಸಲ್ಲಿಸಿದ್ದು, ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಶೇಕಡಾ 12ರಷ್ಟು ಏರಿಕೆ ಮಾಡಲು ಸಮ್ಮತಿ ಸೂಚಿಸಿದ್ದರೆಂದು ಹೇಳಲಾಗಿದೆ.
ಈ ಹಿನ್ನಲೆಯಲ್ಲಿ ಬಸ್ ಪ್ರಯಾಣ ದರವನ್ನು ತಕ್ಷಣಕ್ಕೆ ಏರಿಸದಿರಲು ನಿರ್ಧಾರ ಕೈಗೊಳ್ಳಲಾಗಿದ್ದು, ಹೀಗಾಗಿ ಬಸ್ ಪ್ರಯಾಣಿಕರಿಗೆ ಕೊಂಚ ಮಟ್ಟಿಗೆ ರಿಲೀಫ್ ಸಿಕ್ಕಂತಾಗಿದೆ. ಆದರೆ ಇದು ತಾತ್ಕಾಲಿಕ ಎನ್ನಲಾಗುತ್ತಿದ್ದು, ಮುಂದಿನ ದಿನಗಳಲ್ಲಿನ ಡೀಸೆಲ್ ದರ ಗಮನಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ತಿಳಿದು ಬಂದಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ