ಕೋಲ್ಕತ್ತ:
ಕೇಂದ್ರದಿಂದ ಸಿಬಿಐ ‘ದೌರ್ಜನ್ಯ’ ನಿಲ್ಲುವವರೆಗೂ ನಮ್ಮ ಧರಣಿ ಮುಂದುವರೆಯಲಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಚಿಟ್ ಫಂಡ್ ಹಗರಣದಲ್ಲಿ ಭಾಗಿಯಾಗಿರುವ ಆರೋಪಕ್ಕೆ ಗುರಿಯಾಗಿರುವ ಕೊಲ್ಕತ್ತಾ ನಗರ ಪೊಲೀಸ್ ಆಯುಕ್ತ ರಾಜೀವ್ ಕುಮಾರ್ ಅವರನ್ನು ಬಂಧಿಸಲು ಬಂದ ಸಿಬಿಐ ಅಧಿಕಾರಗಳನ್ನೇ ಕೊಲ್ಕತ್ತಾ ಪೊಲೀಸರು ವಶಕ್ಕೆ ಪಡೆದುಕೊಂಡ ಪ್ರಕರಣ ಮತ್ತು ಆ ಬಳಿಕ, ಪೊಲೀಸ್ ಆಯುಕ್ತರ ನಿವಾಸದ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ನಡೆಸುತ್ತಿದ್ದಂತೆ ಸ್ವತಃ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆಗಮಿಸಿ ಪ್ರತಿಭಟನೆ ನಡೆಸಿದ್ದಾರೆ.
ಕೇಂದ್ರದ ಸೇಡಿನ ರಾಜಕಾರಣ ನಡೆಯನ್ನು ವಿರೋಧಿಸಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಮ್ಮಿಕೊಂಡಿರುವ ಸತ್ಯಾಗ್ರಹ ಇಂದಿಗೂ ಮುಂದುವರೆದಿದೆ.
ಪ್ರಧಾನಿ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಬಂಗಾಳದಲ್ಲಿ ದಂಗೆ ಎಬ್ಬಿಸುತ್ತಿದ್ದಾರೆ ಎಂದು ಆರೋಪಿಸಿರುವ ಮಮತಾ, ಕೇಂದ್ರದಿಂದ ಸಿಬಿಐ ‘ದೌರ್ಜನ್ಯ’ ನಿಲ್ಲುವವರೆಗೂ ಈ ಧರಣಿ ಮುಂದುವರಿಯಲಿದೆ ಎಂದಿದ್ದಾರೆ.
