ಬೆಂಗಳೂರು:
ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿರುವಂತೆಯೇ ಬಿಜೆಪಿ ಪಕ್ಷ ತನ್ನ 2ನೇ ಪಟ್ಟಿ ಬಿಡುಗಡೆ ಮಾಡಿದ್ದು, 2ನೇ ಪಟ್ಟಿಯಲ್ಲೂ ಬೆಂಗಳೂರು ದಕ್ಷಿಣ ಕ್ಷೇತ್ರದ ಅಭ್ಯರ್ಥಿಯ ಹೆಸರು ಪ್ರಕಟಿಸದೇ ಇರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ಮಾಜಿ ಕೇಂದ್ರ ಸಚಿವ ದಿವಂಗತ ಅನಂತ್ ಕುಮಾರ್ ಅವರು ಪ್ರತಿನಿಧಿಸುತ್ತಿದ್ದ ಬೆಂಗಳೂರು ದಕ್ಷಿಣ ಕ್ಷೇತ್ರಕ್ಕೆ ಅನಂತ್ ಕುಮಾರ್ ಅವರ ಪತ್ನಿ ತೇಜಸ್ವಿನಿ ಅನಂತ್ ಕುಮಾರ್ ಅವರು ಅಭ್ಯರ್ಥಿಯಾಗಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಪ್ರಸ್ತುತ 2ನೇ ಪಟ್ಟಿಯಲ್ಲೂ ಅವರ ಹೆಸರಿಲ್ಲ. ಅಭ್ಯರ್ಥಿಗಳ ಎರಡನೇ ಪಟ್ಟಿಯಲ್ಲಾದರೂ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ತೇಜಸ್ವಿನಿ ಅನಂತಕುಮಾರ್ ಅವರಿಗೆ ಟಿಕೆಟ್ ಲಭಿಸಬಹುದು ಎಂಬ ನಿರೀಕ್ಷೆ ಹುಸಿಯಾಗಿದ್ದು, ಆ ಕ್ಷೇತ್ರದಿಂದ ಬೇರೆಯವರನ್ನು ಕಣಕ್ಕಿಳಿಸುವ ಕುರಿತ ಪ್ರಯತ್ನವೂ ನಡೆದಿದೆ.
ಬೆಂಗಳೂರು ದಕ್ಷಿಣ ಕ್ಷೇತ್ರಕ್ಕೆ ತೇಜಸ್ವಿನಿ ಅನಂತಕುಮಾರ್ ಅವರ ಹೆಸರನ್ನು ಮಾತ್ರ ರಾಷ್ಟ್ರೀಯ ಘಟಕಕ್ಕೆ ಶಿಫಾರಸು ಮಾಡಲಾಗಿದೆ. ಆದರೆ, ಸಂಘ ಪರಿವಾರದ ಮುಖಂಡರಾದ ತೇಜಸ್ವಿನಿ ಅವರ ಬದಲಿಗೆ ಪಕ್ಷದ ಯುವಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಪ್ರಬಲ ಹಿಂದುತ್ವ ಪ್ರತಿಪಾದಕ ತೇಜಸ್ವಿ ಸೂರ್ಯ ಅವರ ಹೆಸರನ್ನು ವರಿಷ್ಠರ ಮುಂದೆ ಪ್ರಸ್ತಾಪಿಸಿದ್ದಾರೆ ಎನ್ನಲಾಗಿದೆ. ಆದರೆ ಈ ಬಗ್ಗೆ ಪಕ್ಷದಲ್ಲೇ ಪರ ವಿರೋಧದ ಚರ್ಚೆ ಮುಂದುವರೆದಿದೆ. ಇದೇ ಕಾರಣಕ್ಕೆ ಇನ್ನೂ ಬೆಂಗಳೂರು ದಕ್ಷಿಣ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿ ಹೆಸರು ಅಂತಿಮಗೊಂಡಿಲ್ಲ.