ಅಸ್ಸಾಂ :
ದೇಶದ 20 ರಾಜ್ಯಗಳ 91 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಚುನಾವಣೆ ನಡೆದ ಬೆನ್ನಲ್ಲೇ, ‘ಭಾರತದಾದ್ಯಂತ ಮೋದಿ ಸರ್ಕಾರದ ಭಾರೀ ಅಲೆ’ ಎದ್ದು ಕಾಣುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿಪಾದಿಸಿದ್ದಾರೆ.
ಅಸ್ಸಾಂನ ಸಿಲ್ಚಾರ್‌ನಲ್ಲಿ ಗುರುವಾರ ಏರ್ಪಡಿಸಲಾಗಿದ್ದ ಬಿಜೆಪಿ ರಾರಯಲಿಯನ್ನುದ್ದೇಶಿಸಿ ಮಾತನಾಡಿದ ಮೋದಿ ‘ನಿಮ್ಮ ಉತ್ಸುಕತೆಯಲ್ಲಿ ದೇಶದ ಗಾಳಿ ಯಾವ ಕಡೆ ಬೀಸುತ್ತಿದೆ ಎಂಬುದನ್ನು ತಿಳಿಯಬಹುದಾಗಿದೆ. ಇಂದು ದೇಶದ ಕೆಲವು ಭಾಗಗಳಲ್ಲಿ ಮೊದಲ ಹಂತದ ಚುನಾವಣೆ ನಡೆಯುತ್ತಿದೆ. ದೇಶಾದ್ಯಂತ ಮತ್ತೊಮ್ಮೆ ಮೋದಿ ಸರ್ಕಾರ ಎಂಬ ಭಾರೀ ಅಲೆ ಎದ್ದಿರುವುದನ್ನು ನಾವು ಕಂಡುಕೊಂಡಿದ್ದೇವೆ,’ ಎಂದರು.

ಅಸ್ಸಾಂನಲ್ಲಿ ಐದಕ್ಕೆ ಐದು ಲೋಕಸಭೆ ಕ್ಷೇತ್ರಗಳಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಕೂಟ ಜಯ ಸಾಧಿಸಲಿದೆ ಎಂದು ಮೋದಿ ಭರವಸೆ ವ್ಯಕ್ತಪಡಿಸಿದರು. ಚಹಾಗೆ ಸಂಬಂಧಿಸಿದ ಅತಿಹೆಚ್ಚು ಉದ್ದಿಮೆಗಳು ಇರುವ ಅಸ್ಸಾಂ ರಾರಯಲಿಯಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಲು, ಚಾಯ್‌ವಾಲಾ ವಿಚಾರವನ್ನು ಮೋದಿ ಬಳಸಿಕೊಂಡರು.
‘ಬಾಯಲ್ಲಿ ಚಿನ್ನದ ಚಮಚ ಇಟ್ಟುಕೊಂಡು ಹುಟ್ಟಿದವರು ಚಹಾದ ರುಚಿಯನ್ನು ಮಾತ್ರವೇ ನೋಡಿರುತ್ತಾರೆ. ಆದರೆ, ಅವರಿಗೆ ಚಹಾ ತೋಟಗಳಲ್ಲಿ ಕಾರ್ಯ ನಿರ್ವಹಿಸುವವರ ಸಂಕಷ್ಟಗಳು ಗೊತ್ತಿಲ್ಲ,’ ಎಂದು ರಾಹುಲ್ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು. ಚಾಯ್‌ವಾಲಾಗಳ ಬಗ್ಗೆ ಕಾಂಗ್ರೆಸ್ ವಿರೋಧಿ ನಿಲುವು ಹೊಂದಿದೆ. ಈ ಹಿಂದೆ ನಾನು ಚಹಾ ಮಾರುವವನಾದ ಕಾರಣ ಕಾಂಗ್ರೆಸ್ ನನ್ನನ್ನು ಗುರಿಯಾಗಿಸಿಕೊಂಡಿತ್ತು . ಆದರೆ, ದಶಕಗಳಿಂದ ಇದುವರೆಗೂ ಕಾಂಗ್ರೆಸ್ ಬಂಗಾಳ ಹಾಗೂ ಅಸ್ಸಾಂನಲ್ಲಿರುವ ಯಾವುದೇ ಚಹಾ ತೋಟಗಳನ್ನು ಸಹ ನೋಡಿಲ್ಲ ಎಂದು ಟೀಕಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








