ಬೆಂಗಳೂರಿನ ನೆಲಮಂಗಲದ ಯಂಟಗಾನಹಳ್ಳಿ ಬಳಿ ರಸ್ತೆ ಅಪಘಾತ ನಡೆದಿದ್ದು, ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ತಂದೆ-ತಾಯಿ ಜೊತೆ ಮೂವರು ಮಕ್ಕಳು ಸೇರಿದಂತೆ ಐದು ಮಂದಿ ಮೃತಪಟ್ಟಿದ್ದಾರೆ. ಮೃತರು ಬೆಂಗಳೂರಿನ ನಾಯಂಡಹಳ್ಳಿಯ ಪಂತರ್ ಪಾಳ್ಯದ ನಿವಾಸಿಗಳು. ತಂದೆ ಏಳುಮಲೈ (43), ತಾಯಿ ಕಮಲ (35), ಮಕ್ಕಳಾದ ಕಿರಣ್ (14), ಗಿರಿಧರ್( 13), ಗೀತಾ (10) ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ್ದಾರೆ.

ಶಿವರಾತ್ರಿ ಹಬ್ಬದಂದು ದೇವಸ್ಥಾನಕ್ಕೆ ಹೋಗುವ ಪದ್ಧತಿಯನ್ನು ಈ ಕುಟುಂಬ ಆಚರಿಸುತ್ತ ಬಂದಿತ್ತು. ನಿನ್ನೆ ಶಿವರಾತ್ರಿ ಅಂಗವಾಗಿ ಕುಟುಂಬದ ಸದಸ್ಯರೆಲ್ಲ ಸ್ಕಾರ್ಪಿಯೋ ಕಾರಿನಲ್ಲಿ ದೇವಸ್ಥಾನಕ್ಕೆಂದು ಹೋಗಿದ್ರು. ದೇವರ ದರ್ಶನ ಪಡೆದ ನಂತರ ನೆಲಮಂಗಲದ ಮೂಲಕ ಬೆಂಗಳೂರಿಗೆ ಮರಳುತ್ತಿದ್ದರು. ಮಧ್ಯ ರಾತ್ರಿ ವೇಳೆ ಟೋಲ್ ದಾಟಿದ ಕಾರಿನ ಚಾಲಕ ನಿದ್ದೆಯ ಮಂಪರಿನಲ್ಲಿ ಎದುರು ಎಡ ಬದಿಯ ಎದುರು ರಸ್ತೆಗೆ ಕಾರು ತಿರುಗಿಸಿದ್ದಾನೆ.
ಈ ವೇಳೆ ಬೆಂಗಳೂರಿನಿಂದ ಹಾಸನ ಕಡೆ ಹೊರಟ್ಟಿದ್ದ ಕೆಎಸ್ಆರ್ಟಿಸಿ ಬಸ್ಗೆ ಸ್ಕಾರ್ಪಿಯೋ ಕಾರು ಡಿಕ್ಕಿ ಹೊಡೆದಿದೆ. ಸ್ಕಾರ್ಪಿಯೋ ಮುಂಭಾಗ ಜಖಂಗೊಂಡು ಕಾರಿನಲ್ಲಿದ್ದವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತ ದೇಹಗಳನ್ನು ನೆಲಮಂಗಲ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ಕಳುಹಿಸಲಾಗಿದೆ.
ಬಸ್ನಲ್ಲಿದ್ದ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಸ್ಥಳಕ್ಕೆ ನೆಲಮಂಗಲ ಟ್ರಾಫಿಕ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
