ನವದೆಹಲಿ:
ಆನ್‌ಲೈನ್ ಮೂಲಕ ಬೇರೊಬ್ಬರ ಖಾತೆಗೆ ಹಣ ವರ್ಗಾಯಿಸಲು ಗ್ರಾಹಕರಿಗೆ ಇರುವ ಸೌಲಭ್ಯಗಳಾದ ನೆಫ್ಟ್ ಹಾಗೂ ಆರ್‌ಟಿಜಿಎಸ್ ಸೇವಾವಧಿಯನ್ನು ವಿಸ್ತರಿಸುವ ಚರ್ಚೆಯೊಂದು ಭಾರತೀಯ ರಿಸರ್ವ್ ಬ್ಯಾಂಕ್‌ನಲ್ಲಿ ಶುರುವಾಗಿದೆ. ಈ ಎರಡೂ ಸೇವೆಗಳನ್ನು ವಾರದ ಎಲ್ಲ 7 ದಿನ ಹಾಗೂ ದಿನದ ಇಪ್ಪತ್ನಾಲ್ಕೂ ಗಂಟೆ ನೀಡುವ ಸಂಭಾವ್ಯತೆಯ ಪ್ರಸ್ತಾಪವೊಂದು ರಿಸರ್ವ್ ಬ್ಯಾಂಕ್ ಮುಂದಿದೆ.
ಹಾಲಿ ಇರುವ ನಿಯಮಗಳ ಪ್ರಕಾರ, ನೆಫ್ಟ್ ಮೂಲಕ 1 ಲಕ್ಷದಿಂದ 25 ಲಕ್ಷ ರು. ಹಾಗೂ ಆರ್‌ಟಿಜಿಎಸ್ ಬಳಸಿ 2ರಿಂದ 25 ಲಕ್ಷ ರು. ಹಣವನ್ನು ನೆಟ್ ಬ್ಯಾಂಕಿಂಗ್ ಮೂಲಕ ಬೇರೊಬ್ಬರ ಖಾತೆಗೆ ಕಳುಹಿಸಬಹುದು. ಆದರೆ ಭಾನುವಾರ, ಪ್ರತಿ ತಿಂಗಳ 2 ಹಾಗೂ 4ನೇ ಶನಿವಾರ ಮತ್ತು ಬ್ಯಾಂಕುಗಳು ರಜೆ ಇದ್ದಾಗ ಈ ಸೇವೆ ಲಭ್ಯವಿರುವುದಿಲ್ಲ. ಅದೂ ಅಲ್ಲದೆ ನೆಫ್ಟ್ ಸೇವೆ ನಿತ್ಯ ಬೆಳಗ್ಗೆ 8ರಿಂದ ರಾತ್ರಿ 7ರವರೆಗೆ ಮಾತ್ರವೇ ಇರುತ್ತದೆ. ಶನಿವಾರ ಇದು ಬೆಳಗ್ಗೆ 8ರಿಂದ ಮಧ್ಯಾಹ್ನ 1ರವರೆಗೆ ಲಭ್ಯವಿರುತ್ತದೆ. ಆರ್‌ಟಿಜಿಎಸ್‌ನಡಿ ಕಾರ್ಯನಿರ್ವಹಣಾ ದಿನಗಳಂದು ಸಂಜೆ 4ಕ್ಕೇ ಸೇವೆ ಅಂತ್ಯವಾಗುತ್ತದೆ (ಹಣ ಹಾಗೂ ಸಮಯದ ಮಿತಿ ಬ್ಯಾಂಕ್‌ನಿಂದ ಬ್ಯಾಂಕ್‌ಗೆ ಬದಲಿರುತ್ತದೆ.
ಹೀಗಾಗಿ ಗ್ರಾಹಕರು ಐಎಂಪಿಎಸ್ ಮೊರೆ ಹೋಗಬೇಕಾಗಿದೆ. ಆದರೆ ಅಲ್ಲಿ 2 ಲಕ್ಷ ರು.ಗಿಂತ ಹೆಚ್ಚಿನ ಹಣ ವರ್ಗಾವಣೆ ಮಾಡಲು ಆಗದು. ಆದ ಕಾರಣ ನೆಫ್ಟ್ ಸೌಲಭ್ಯ ವಾರವಿಡೀ, ದಿನದ 24 ಗಂಟೆ ಲಭ್ಯವಿರುವಂತೆ ನೋಡಿಕೊಳ್ಳಬೇಕು ಎಂಬ ಬೇಡಿಕೆ ಇದೆ.