ಉತ್ತರ ಕರ್ನಾಟಕದಲ್ಲಿ ಪ್ರವಾಹ; ಬಾಗಲಕೋಟೆ, ಚಿಕ್ಕೋಡಿ, ಬೆಳಗಾವಿಯಲ್ಲಿ ಹೈ ಅಲರ್ಟ್​ ಘೋಷಣೆ

ರಾಯಚೂರು/ ಬೆಳಗಾವಿ/ ಚಿಕ್ಕೋಡಿ :

    ಉತ್ತರ ಕರ್ನಾಟಕದಲ್ಲಿ ಒಂದು ಕಡೆ ಬರದಿಂದ ಜನರು ಮುಗಿಲಿನತ್ತ ಕಣ್ಣು ನೆಟ್ಟಿದ್ದರೆ ಇನ್ನೊಂದೆಡೆ ಪ್ರವಾಹದಿಂದ ಪ್ರಾಣ ಭೀತಿ ಎದುರಿಸುತ್ತಿದ್ದಾರೆ. ಮಹಾರಾಷ್ಟ್ರದಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೊಯ್ನಾ ಡ್ಯಾಂನಿಂದ ನೀರು ಬಿಡಲಾಗಿದೆ. ಇದರಿಂದಾಗಿ ಕೃಷ್ಣಾ ನದಿ ತೀರದ ಜಿಲ್ಲೆಗಳಲ್ಲಿ ಪ್ರವಾಹ ಸ್ಥಿತಿ ಎದುರಾಗಿದೆ. 

    ಮಹಾರಾಷ್ಟ್ರದ ಸಾತಾರಾ ಜಿಲ್ಲೆಯ ಪಾಟಣ ತಾಲೂಕಿನ ಕೊಯ್ನಾ ಡ್ಯಾಂ ನಲ್ಲಿ90.46 ಟಿಎಂಸಿ ನೀರು ಸಂಗ್ರಹವಾಗಿದ್ದು, ಈ ಡ್ಯಾಂ 105 ಟಿಎಂಸಿ ನೀರು ಸಂಗ್ರಹಣಾ ಸಾಮರ್ಥ್ಯ ಹೊಂದಿದೆ. ಕೊಯ್ನಾ ಡ್ಯಾಂ ನಿಂದ ಇದೀಗ 19,580 ಕ್ಯೂಸೆಕ್  ನೀರು ಹೊರಬಿಡಲಾಗಿದೆ. ನಿನ್ನೆ ಒಂದೇ ದಿನದಲ್ಲಿ ಮೂರು ಭಾರಿ ನೀರು ಬಿಡುಗಡೆ ಮಾಡಲಾಗಿದ್ದು,  ಕ್ಷಣ ಕ್ಷಣಕ್ಕೂ ಕೃಷ್ಣಾ ನದಿ ನೀರಿನ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ರಾಜ್ಯಕ್ಕೆ ಕೃಷ್ಣಾ ನದಿಯ ಮೂಲಕ ಭಾರೀ ಪ್ರಮಾಣದಲ್ಲಿ ನೀರು ಬರುತ್ತಿರುವುದರಿಂದ ಉತ್ತರ ಕರ್ನಾಟಕ ಜಿಲ್ಲೆಯ ಜನರು ಆತಂಕಕ್ಕೊಳಗಾಗಿದ್ದಾರೆ. ಕೃಷ್ಣಾ ನದಿ ತೀರದ ಬೆಳಗಾವಿ, ಬಾಗಲಕೋಟ, ವಿಜಯಪುರ, ರಾಯಚೂರು, ಯಾದಗಿರಿ ಜಿಲ್ಲೆಯ ಜನರಲ್ಲಿ ಪ್ರವಾಹ ಭೀತಿ ಎದುರಾಗಿದೆ.

    ಉತ್ತರ ಕರ್ನಾಟಕದ ಬಾಗಲಕೋಟೆ, ಬೆಳಗಾವಿ, ಚಿಕ್ಕೋಡಿ ಜಿಲ್ಲೆಗಳ್ಲಲೂ ಉತ್ತಮವಾದ    ಮಳೆಯಾಗುತ್ತಿರುವುದರಿಂದ ಕೃಷ್ಣಾ ನದಿಯ ನೀರಿನ ಮಟ್ಟ ಹೆಚ್ಚುತ್ತಲೇ ಇದೆ. ಮಹಾರಾಷ್ಟ್ರ ಮತ್ತು ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಮಳೆಯಾಗುತ್ತಿರುವುದರಿಂದ ಕೃಷ್ಣಾ ನದಿಯ ದಡದಲ್ಲಿ ಆತಂಕದ ಸ್ಥಿತಿ ನಿರ್ಮಾಣವಾಗಿದೆ. ಈಗಾಗಲೇ ಕೃಷ್ಣಾ ನದಿಗೆ ಅಡ್ಡಲಾಗಿ ಕಟ್ಟಿರುವ ಕೊಯ್ನಾ ಡ್ಯಾಂನಿಂದ ಅಧಿಕ ಪ್ರಮಾಣದಲ್ಲಿ ನೀರು ಬಿಡಲಾಗಿದೆ. ಇದರ ಜೊತೆಗೆ  ನಾರಾಯಣಪುರ ಡ್ಯಾಂನಿಂದ 2.54 ಕ್ಯೂಸೆಕ್ಸ್​ ನೀರು ಹೊರಬಿಡಲಾಗಿದೆ. ಹೀಗಾಗಿ, ಕೃಷ್ಣಾ ನದಿಯ ಸುತ್ತಮುತ್ತ ಪ್ರವಾಹ ಉಂಟಾಗುವ ಸಾಧ್ಯಾತೆಯಿದ್ದು, ತುರ್ತು ಸ್ಥಿತಿಯಲ್ಲಿ ರಕ್ಷಿಸಲು ಎನ್ ಡಿಆರ್ ಎಫ್ 30 ಜನರು ಹಾಗೂ 2 ಬೋಟುಗಳ ವ್ಯವಸ್ಥೆ .

    ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದ ಕೃಷ್ಣಾನದಿಗೆ ಆಲಮಟ್ಟಿ, ಬಸವಸಾಗರ ಡ್ಯಾಂನಿಂದ 2 ಲಕ್ಷ 70 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಇದರಿಂದ ಯಾದಗಿರಿಯ ಕೌಳೂರು ಸೇತುವೆ ಮುಳುಗಡೆಯಾಗಿದೆ. ಶಹಾಪುರ- ದೇವದುರ್ಗ ರಸ್ತೆ ಸಂಚಾರ ಬಂದ್ ಆಗಿದೆ. ನದಿ ಪಕ್ಕದ ಜಮೀನುಗಳಿಗೆ  ನೀರು ನುಗ್ಗಿದೆ. ಜಿಲ್ಲಾಡಳಿತದಿಂದ 24 ಗಂಟೆಗಳ ಅಲರ್ಟ್ ಘೋಷಣೆ ಮಾಡಲಾಗಿದೆ.

   ಬೆಳಗಾವಿ ಜಿಲ್ಲೆಯಲ್ಲಿ ವ್ಯಾಪಕ ಮಳೆಯಿಂದ ಮತ್ತು ಮಹಾರಾಷ್ಟ್ರದ ಜಲಾಶಯಗಳಿಂದ ದಿಢೀರ್ ನೀರು ಬಿಟ್ಟರೆ ಕೃಷ್ಣಾ ಸೇರಿದಂತೆ ವಿವಿಧ ನದಿ ಪಾತ್ರದಲ್ಲಿರುವ ಚಿಕ್ಕೋಡಿ ಉಪ ವಿಭಾಗದ 37 ಗ್ರಾಮಗಳು ಪ್ರವಾಹದಿಂದ ತೀವ್ರವಾಗಿ ಬಾಧಿತಗೊಳ್ಳಲಿವೆ.  ಅದೇ ರೀತಿ 39 ಗ್ರಾಮಗಳು ಪ್ರವಾಹದಿಂದ ಭಾಗಶಃ ಬಾಧಿತಗೊಳ್ಳುವ ಸಾಧ್ಯತೆಯಿದೆ ಎಂದು ಬೆಳಗಾವಿ ಜಿಲ್ಲಾಧಿಕಾರಿ ಎಸ್.ಬಿ. ಬೊಮ್ಮನಹಳ್ಳಿ ತಿಳಿಸಿದ್ದಾರೆ.

   ಚಿಕ್ಕೋಡಿ ಉಪ ವಿಭಾಗದ ಚಿಕ್ಕೋಡಿ, ರಾಯಬಾಗ ಹಾಗೂ ಅಥಣಿ ತಾಲ್ಲೂಕಿನಲ್ಲಿ ಕೃಷ್ಣಾ, ದೂದಗಂಗಾ, ವೇದಗಂಗಾ ಹಾಗೂ ಪಂಚಗಂಗಾ ನದಿ ತೀರದಲ್ಲಿರುವ ಒಟ್ಟು 37 ಗ್ರಾಮಗಳು ಪ್ರವಾಹದಿಂದ ತೀವ್ರವಾಗಿ ಬಾಧಿತಗೊಳ್ಳಲಿದ್ದು, ಅದೇ ರೀತಿ ಒಟ್ಟಾರೆ 39 ಗ್ರಾಮಗಳು ಭಾಗಶಃ ಬಾಧಿತಗೊಳ್ಳಲಿವೆ.

   ತುರ್ತು ಸಂದರ್ಭದಲ್ಲಿ ನದಿ ತೀರದ ಜನರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲು ಹಾಗೂ ಪರಿಹಾರ (ಗಂಜಿ) ಕೇಂದ್ರಗಳನ್ನು ಸ್ಥಾಪಿಸಲು ಸೂಕ್ತ ಸ್ಥಳಗಳನ್ನು ಮುಂಚಿತವಾಗಿಯೇ ಗುರುತಿಸಲಾಗಿದೆ.

    ನದಿ ತೀರದ ಗ್ರಾಮಸ್ಥರು ಮುನ್ನೆಚ್ಚರಿಕೆ ಕ್ರಮವಾಗಿ ಸಾಧ್ಯವಾದಷ್ಟು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಗೊಳ್ಳಬೇಕು. ಮುಳುಗಡೆಗೊಂಡಿರುವ ಸೇತುವೆಗಳನ್ನು ದಾಟುವ ಸಾಹಸಕ್ಕೆ ಮುಂದಾಗಬಾರದು. ತುರ್ತು ಸಂದರ್ಭದಲ್ಲಿ ತಕ್ಷಣವೇ ಸ್ಥಳೀಯ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

   ಈಗಾಗಲೇ ಚಿಕ್ಕೋಡಿ ತಾಲೂಕಿನ ಕಲ್ಲೋಲ, ಯಡೂರ ಹಾಗೂ ಇಂಗಳಿ ಗ್ರಾಮಗಳ ನದಿ ತೀರದ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸಾಗಿಸುವುದು ಮುಂದುವರೆದಿದೆ.

 ತೀವ್ರ ಬಾಧಿತಗೊಳ್ಳುವ ಗ್ರಾಮಗಳು:
ಚಿಕ್ಕೋಡಿ ತಾಲ್ಲೂಕು- ಕಲ್ಲೋಳ, ಯಡೂರ, ಇಂಗಳಿ, ಚಂದೂರ, ಮಾಂಜರಿ, ಬಾರವಾಡ ಹಾಗೂ ಹುನ್ನರಗಿ.ರಾಯಬಾಗ ತಾಲ್ಲೂಕು-ಹಳೇ ದಿಗ್ಗೇವಾಡಿ, ಗುಂಡವಾಡ, ಶಿರಗೂರ, ಖೇಮಲಾಪುರ, ಸಿದ್ದಾಪುರ ,ಅಥಣಿ ತಾಲ್ಲೂಕು-ಮೊಳವಾಡ, ಕುಸನಾಳ, ಕೃಷ್ಣಾ ಕಿತ್ತೂರ, ಬಣಜವಾಡ, ತೀರ್ಥ, ನದಿಇಂಗಳಗಾಂವ, ದರೂರ, ಕವಟಕೊಪ್ಪ, ಶೇಗುಣಶಿ, ಹುಲಬಾಳಿ, ಅವರಖೋಡ, ನಾಗನೂರ ಪಿ.ಕೆ., ಸತ್ತಿ, ಮಹಿಷವಾಡಗಿ, ಜನವಾಡ, ಸವದಿ ದರ್ಗಾ, ಶಿರಹಟ್ಟಿ, ಕಾತ್ರಾಳ, ಝುಂಜರವಾಡ, ನಂದೇಶ್ವರ, ಸಪ್ತಸಾಗರ, ಮಂಗಾವತಿ, ಜುಗೂಳ, ಶಹಾಪುರ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

 

 

Recent Articles

spot_img

Related Stories

Share via
Copy link
Powered by Social Snap