ತುಮಕೂರು; ಮುಗಿಯದ ಕಾಮಗಾರಿ:ರಸ್ತೆಗಳು ಕೆಸರುಮಯ

ತುಮಕೂರು:

  ಕಳೆದ  ನಾಲ್ಕೈದು  ದಿನಗಳಿಂದ ನಗರದಲ್ಲಿ ತುಂತುರು ಮಳೆ ಬೀಳುತ್ತಿದೆ. ಆಗೊಮ್ಮೆ ಈಗೊಮ್ಮೆ ಸಾಧಾರಣೆ ಮಳೆಯಾಗುತ್ತಿದೆ. ಮಳೆಯ ಪರಿಣಾಮ ರಸ್ತೆಯ ಬದಿಯಲ್ಲಿ ನಡೆಯುತ್ತಿರುವ ಕಾಮಗಾರಿ ಮಣ್ಣು ರಸ್ತೆಗೆ ಹರಡಿ ಸಂಚಾರಕ್ಕೆ ತೀವ್ರ ಅಡಚಣೆ ಎದುರಾಗಿದೆ.

   ವಿವಿಧ ಕಾಮಗಾರಿಗಳಿಗಾಗಿ ಕಳೆದ ಒಂದು ವರ್ಷದಿಂದ ರಸ್ತೆ ಅಗೆಯುವ ಕಾಮಗಾರಿ ನಡೆಯುತ್ತಿದೆ. ನಗರ ಪಾಲಿಕೆ ಸ್ಮಾರ್ಟ್ಸಿಟಿ ಯೋಜನೆ ಸೇರಿದಂತೆ ಹಲವು ಕಾಮಗಾರಿಗಳು ನಡೆಯುತ್ತಿವೆ. ಒಂದಾದ ನಂತರ ಮತ್ತೊಂದು ಎನ್ನುವಂತೆ ಸರದಿಯೋಪಾದಿಯಲ್ಲಿ ಈ ಕಾಮಗಾರಿಗಳು ನಡೆಯುತ್ತಿರುವ ಪರಿಣಾಮ ಜನತೆ ಹೈರಾಣಾಗಿ ಹೋಗಿದ್ದಾರೆ. ರಸ್ತೆಯ ಒಂದು ಬದಿಯಲ್ಲಿ ಚರಂಡಿ ಅಗೆಯುವುದರಿಂದ ಆ ಮಣ್ಣನ್ನು ರಸ್ತೆಯ ಪಕ್ಕಕ್ಕೆ ಬಿಡಲಾಗುತ್ತದೆ. ಅಲ್ಲಿ ಹೋಗಿಬರುವ ವಾಹನಗಳಿಗೆ ಈ ಮಣ್ಣು ಸಿಲುಕಿ ರಸ್ತೆಗೆ ಹರಡಿಕೊಳ್ಳುತ್ತಿದೆ.

   ಇದರ ಪರಿಣಾಮ ಎನ್ನುವಂತೆ ಸಣ್ಣ ಮಳೆ ಬಂದರೆ ಸಾಕು ಮಣ್ಣು ನೀರಿನಲ್ಲಿ ಬೆರೆತು ಇಡೀ ರಸ್ತೆಯಲ್ಲಾ ಕೆಸರುಮಯ ಎನ್ನುವಂತಾಗಿವೆ. ಕೆಂಪು ನೀರು ರಸ್ತೆಯಲ್ಲಿ ತುಂಬಿಕೊಂಡು ವಾಹನಗಳು ಸಂಚರಿಸುವುದೇ ಸಮಸ್ಯೆ ಎನ್ನುವಂತಾಗಿದೆ.
ಕಾಮಗಾರಿಗಳು ನಡೆಯುವುದಕ್ಕೆ ಯಾರಿಂದಲೂ ವಿರೋಧವಿಲ್ಲ. ಆದರೆ ನಗರದಲ್ಲಿ ನಡೆಯುತ್ತಿರುವ ಕಾಮಗಾರಿಗಳು ಯಾವುದಕ್ಕೆ ಸಂಬಂಧಪಟ್ಟದ್ದು ಎಂಬ ಪರಿಪೂರ್ಣ ಮಾಹಿತಿ ಯಾರಿಗೂ ಇಲ್ಲ. ಹೀಗಾಗಿ ರಸ್ತೆ ಅಗೆತದ ಕಾಮಗಾರಿಗಳು ನಿರಂತರವಾಗಿ ನಡೆಯುತ್ತಲೇ ಇವೆ. ಪಾಲಿಕೆಯ ಸದಸ್ಯರಾದಿಯಾಗಿ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಯಾರೂ ಉತ್ತರಿಸುತ್ತಿಲ್ಲ. ಅಧಿಕಾರಿಗಳು ತಾವಾಯಿತು ಕಾಮಗಾರಿಯಾಯಿತು ಎನ್ನುವಂತೆ, ಹೀಗೆ ಬಂದು ಹಾಗೆ ಹೋಗುತ್ತಿದ್ದಾರೆ. ಹೀಗಾದರೆ ಕಾಮಗಾರಿಗಳು ಪೂರ್ಣಗೊಳ್ಳುವುದು ಯಾವಾಗ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.

    ಜಿಲ್ಲಾಧಿಕಾರಿಗಳು ಕಳೆದ ತಿಂಗಳು ಸಭೆಯೊಂದರಲ್ಲಿ ಮಾತನಾಡುತ್ತಾ ಕಾಮಗಾರಿಗಳನ್ನು ತ್ವರಿತ ಗತಿಯಲ್ಲಿ ಕೈಗೊಳ್ಳುವಂತೆ ಸೂಚಿಸಿದ್ದರು. ನಗರ ಪಾಲಿಕೆ ಕಮೀಷನರ್ ಕೂಡ ಸಭೆಗಳಲ್ಲಿ ಈ ಮಾತನ್ನು ಪ್ರಸ್ತಾಪಿಸಿದ್ದಾರೆ. ಆದರೆ ಅಧಿಕಾರಿಗಳ ಮಾತು ಲೆಕ್ಕಕ್ಕಿಲ್ಲ ಎನ್ನುವಂತಾಗಿದೆ. ಯಾರೋ ಬರುತ್ತಾರೆ, ಅಗೆಯುತ್ತಾರೆ ಹೋಗುತ್ತಾರೆ. ಮತ್ತೊಬ್ಬರು ಬರುತ್ತಾರೆ ಮುಚ್ಚಿ ಹೋಗುತ್ತಾರೆ. ಮಣ್ಣು ರಸ್ತೆಯ ಮೇಲೆ ಹಾಗೆಯೇ ಇರುತ್ತದೆ. ಹೀಗಾದರೆ ಇದೆಂತ ಸ್ಮಾರ್ಟ್ಸಿಟಿ ಎನ್ನುತ್ತಾರೆ ಕೆಲವರು.

ರಸ್ತೆಗಳು ಜಾರುತ್ತವೆ, ದ್ವಿಚಕ್ರ ವಾಹನ ಚಾಲಕರು ನಿಧಾನವಾಗಿ, ಎಚ್ಚರಿಕೆಯಿಂದ ಚಲಿಸಿ…’ ಎಂದು ನಗರದ ವಿವಿಧ ರಸ್ತೆಗಳಲ್ಲಿ ಸಂಚಾರಿ ಪೊಲೀಸರು ವಾಹನ ಚಾಲಕರಿಗೆ ಆಗಾಗ ಎಚ್ಚರಿಕೆ ನೀಡುತ್ತಾರೆ. ಕಾರಣ ನಗರದ ಹಲವು ರಸ್ತೆಗಳೀಗ ಜಾರು ರಸ್ತೆಗಳಾಗಿವೆ, ಇಲ್ಲಿ ವಾಹನ ಸವಾರರು ಜಾರಿಬೀಳುತ್ತಿರುವ ಪ್ರಕರಣಗಳೂ ಹೆಚ್ಚುತ್ತಿವೆ.

   ಪ್ರಮುಖ ರಸ್ತೆಗಳಲ್ಲಿ ಸ್ಮಾರ್ಟ್ಸಿಟಿ ಯೋಜನೆಯಡಿ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ. ಕುಡಿಯುವ ನೀರಿನ ಕೊಳವೆ, ಒಳಚರಂಡಿ ಮಾರ್ಗ, ಬೆಸ್ಕಾಂ ಸಂಪರ್ಕ ಜಾಲ, ಆಪ್ಟಿಕಲ್ ಫೈಬರ್ ಕೇಬಲ್, ಬೀದಿದೀಪ, ಸಿಗ್ನಲ್ ದೀಪ, ಸಿ.ಸಿ.ಟಿ.ವಿ ಕೇಬಲ್, ಎಲ್ಲದಕ್ಕೂ ಒಂದೇ ಭಾಗದಲ್ಲಿ ಸಂಪರ್ಕ ಒದಗಿಸುವ ಯುಟಿಲಿಟಿ ಡಕ್ಟ್ (ಸೇವಾ ಸಂಪರ್ಕ ಜಾಲದ ನೆಲದಡಿ ಮಾರ್ಗ) ನಿರ್ಮಾಣಕ್ಕಾಗಿ ರಸ್ತೆ ಬದಿಯಲ್ಲಿ ಹಳ್ಳ ತೆಗೆಯುವ ಕಾಮಗಾರಿ ನಡೆಯುತ್ತಿವೆ. ತೆಗೆದ ಹಳ್ಳದ ಮಣ್ಣಿನ ರಾಶಿಯನ್ನು ರಸ್ತೆ ಬದಿ ಹಾಕಲಾಗಿದೆ.

    ಮೊದಲೇ ಕಿರಿದಾದ ರಸ್ತೆಗಳಲ್ಲಿ ಈ ಕಾಮಗಾರಿ ಮಣ್ಣಿನ ರಾಶಿಯಿಂದ ಅರ್ಧ ರಸ್ತೆ ಬಂದ್ ಆಗಿಬಿಡುತ್ತದೆ, ಇನ್ನೊಂದು ಬದಿಯಲ್ಲಿ ವಾಹನಗಳು ನಿಲುಗಡೆಯಾಗಿರುತ್ತವೆ, ಉಳಿದ ಇಕ್ಕಟ್ಟಿನ ಜಾಗದಲ್ಲಿ ಎರಡೂ ಬದಿಯಿಂದ ಬರುವ ವಾಹನಗಳು ಸಾಗಬೇಕಾಗುತ್ತದೆ. ಈ ವೇಳೆ ಯಾರು ಯಾರಿಗೆ ಗುದ್ದುತ್ತಾರೊ ಎನ್ನುವ ಸ್ಥಿತಿ.

ಇಂತಹ ಪರಿಸ್ಥಿತಿಯಲ್ಲಿ, ಕೆಲ ದಿನಗಳಿಂದ ಸುರಿಯುವ ಜಡಿ ಮಳೆ ಈ ರಸ್ತೆಗಳ ಸಂಚಾರಕ್ಕೆ ಇನ್ನಷ್ಟು ಕಿರಿಕಿರಿ ಉಂಟುಮಾಡಿದೆ. ಕಾಮಗಾರಿಯ ಮಣ್ಣಿನ ರಾಶಿ ಮಳೆ ನೀರಿಗೆ ಕರಗಿ ಹರಿದು ರಸ್ತೆಗಳು ಕೆಸರುಮಯವಾಗಿವೆ. ಹೆಚ್ಚಿನ ರಸ್ತೆಗಳಲ್ಲಿ ಜಾರು ಮಣ್ಣು ಇರುವುದರಿಂದ ವಾಹನಗಳು ಜಾರುವ ಅಪಾಯವಿದೆ. ಅದರಲ್ಲೂ ದ್ವಿ ಚಕ್ರ ವಾಹನಗಳು ಸ್ಕಿಡ್ ಆಗಿ ಸವಾರರು ಬಿದ್ದು ಗಾಯ ಮಾಡಿಕೊಂಡ ಪ್ರಕರಣಗಳು ನಡೆಯುತ್ತಲೇ ಇವೆ. ಈ ಹಿನ್ನೆಲೆಯಲ್ಲಿ ಸಂಚಾರಿ ಪೊಲೀಸರು ಅಂತಹ ರಸ್ತೆಗಳ ಸಂಚಾರ ನಿಯಂತ್ರಣಕ್ಕೆ ಹೆಚ್ಚಿನ ನಿಗಾ ವಹಿಸುತ್ತಿದ್ದಾರೆ. ಸಂಚಾರಿ ಪೊಲೀಸರು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ರಸ್ತೆ ಜಾರುತ್ತದೆ ಹುಷಾರ್ ಎಂದು ಎಚ್ಚರಿಸುತ್ತಲೇ ಇದ್ದಾರೆ, ನಗರ ವೃತ್ತದ ಸರ್ಕಲ್ ಇನ್ಸ್ಪೆಕ್ಟರ್ ಕೆ ಆರ್ ಚಂದ್ರಶೇಖರ್ ನಗರದ ಹಲವು ವಾಟ್ಸಾಪ್ ಗ್ರೂಪ್‌ಗಳಿಗೆ ಜಾರುವ ರಸ್ತೆಯ ಬಗ್ಗೆ ಎಚ್ಚರಿಕೆಯ ಸಂದೇಶ ಹಾಕಿ ಜನ ಜಾಗೃತಿ ಮುಡಿಸುವ ಪ್ರಯತ್ನ ಮಾಡಿದ್ದಾರೆ. ಮಳೆಗಾಲ ಮುಗಿಯುವವರೆಗೆ ಜಾರುವ ರಸ್ತೆಗಳಲ್ಲಿ ಸಂಚಾರಿ ಪೊಲೀಸರು ನಿಯಂತ್ರಣ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap