ಮೈತ್ರಿ ನಾಯಕರಿಗೆ ಕೈ ಕೊಟ್ಟು ಮುಂಬೈಗೆ ಹಾರಿದ ಸಚಿವ ಎಂಟಿಬಿ ನಾಗರಾಜ್

ಬೆಂಗಳೂರು ;

    ಮೈತ್ರಿ ನಾಯಕರು ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಶನಿವಾರ ಇಡೀ ದಿನ ನಡೆಸಿದ ಸಂಧಾನ ಪ್ರಯತ್ನ ಕೊನೆಗೂ ವಿಫಲಾಗಿದೆ.  ಸಚಿವ ಎಂಟಿಬಿ ನಾಗರಾಜ್ ಇಂದು ಬೆಳಗ್ಗೆ ಬಿಜೆಪಿ ನಾಯಕ ಆರ್. ಅಶೋಕ್ ಜೊತೆಗೆ ಖಾಸಗಿ ವಿಮಾನದಲ್ಲಿ ಮುಂಬೈಗೆ ತೆರಳಿ ಅತೃಪ್ತರ ಪಡೆಗೆ ಸೇರ್ಪಡೆಗೊಳ್ಳುವ ಮೂಲಕ ಸಿಎಂ ಕುಮಾರಸ್ವಾಮಿಗೆ ಮತ್ತೊಂದು ಶಾಕ್ ನೀಡಿದ್ದಾರೆ.

  ಶುಕ್ರವಾರ ಕುಮಾರಸ್ವಾಮಿ ಅಧಿವೇಶನದಲ್ಲಿ ಬಹುಮತ ಸಾಬೀತುಪಡಿಸಲು ಸ್ಪೀಕರ್ ಅವರ ಬಳಿ ಸಮಯ ನಿಗದಿಪಡಿಸುವಂತೆ ಕೇಳಿಕೊಳ್ಳುವ ಮೂಲಕ ಅಚ್ಚರಿ ಮೂಡಿಸಿದ್ದರು. ಈ ಬೆಳವಣಿಗೆಯ ನಂತರ ಬಹುತೇಕ ಮೈತ್ರಿ ಸರ್ಕಾರದ ಎಲ್ಲಾ ಪ್ರಮುಖ ನಾಯಕರು ಭಿನ್ನಮತೀಯರ ಮನವೊಲಿಸಲು ಮುಂದಾಗಿದ್ದರು.

  ಡಿ.ಕೆ. ಶಿವಕುಮಾರ್, ಡಿಸಿಎಂ ಡಾ.ಜಿ. ಪರಮೇಶ್ವರ್ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಶನಿವಾರ ಇಡೀ ದಿನ ಸಚಿವ ಎಂಟಿಬಿ ನಾಗರಾಜ್ ಹಾಗೂ ಸುಧಾಕರ್ ಮನವೊಲಿಕೆಗೆ ಮುಂದಾಗಿದ್ದರು. ನಿನ್ನೆ ಸಂಜೆ ಪತ್ರಿಕಾಗೋಷ್ಠಿ ನಡೆಸಿದ ಎಂಟಿಬಿ ನಾಗರಾಜ್ ತಾನು ರಾಜೀನಾಮೆ ವಾಪಸ್ ಪಡೆದು ಮತ್ತೆ ಕಾಂಗ್ರೆಸ್​ಗೆ ಬೆಂಬಲ ಸೂಚಿಸುವುದಾಗಿ ತಿಳಿಸಿದ್ದರು.  

  ಎಂಟಿಬಿ ನಾಗರಾಜ್ ನಿನ್ನೆ ಪತ್ರಿಕಾಗೋಷ್ಠಿ ನಡೆಸಿ ತಾನು ಕಾಂಗ್ರೆಸ್ಗೆ ಬೆಂಬಲಿಸುವುದಾಗಿ ತಿಳಿಸಿದ್ದರು ಸಿಎಂ ಕುಮಾರಸ್ವಾಮಿಗೆ ಎಂಟಿಬಿ ಮೇಲೆ ಅನುಮಾನ ಇದ್ಧೇ ಇತ್ತು. ಇದೇ ಕಾರಣಕ್ಕೆ ಅವರ ಚಲನವಲನದ ಮೇಲೆ ಕಣ್ಣಿಡಲು ಇಂಟಲಿಜೆನ್ಸ್ ಇಲಾಖೆಗೆ ಸೂಚಿಸಿದ್ದರು. ಆದರೆ, ಇದೀಗ ಎಲ್ಲರ ಕಣ್ಣಿಗೂ ಮಣ್ಣೆರಚಿರುವ ಎಂಟಿಬಿ ಖಾಸಗಿ ವಿಮಾನದಲ್ಲಿ ಇಂದು ಬೆಳಗ್ಗೆ ಮುಂಬೈಗೆ ಹಾರಿದ್ದಾರೆ.

  ವಿಶೇಷವೆಂದರೆ ಎಂಟಿಬಿ ನಾಗರಾಜ್ ಬಿಜೆಪಿ ಮುಖಂಡ ಆರ್. ಅಶೋಕ್ ಜೊತೆ ಮುಂಬೈ ವಿಮಾನ ಹತ್ತುವ ಚಿತ್ರವೊಂದು ಇದೀಗ ಎಲ್ಲೆಡೆ ವೈರಲ್ ಆಗಿದೆ. ತಾವು ಆಪರೇಷನ್ ಕಮಲ ಮಾಡುತ್ತಿಲ್ಲ ಎಂದು ಹೇಳುತ್ತಿರುವ ಬಿಜೆಪಿ ಮುಖಂಡರೇ ಮುಂದೆ ನಿಂತು ಅಸಮಾಧಾನಿತರನ್ನು ಮುಂಬೈ ವಿಮಾನ ಹತ್ತಿಸುತ್ತಿರುವುದು ಇದೀಗ ಹಲವಾರು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ