ಕಳಸ-ಹೊರನಾಡು, ಚಿಕ್ಕಮಗಳೂರು- ಮಂಗಳೂರು, ಶಿರಸಿ- ಹರಿಹರ ಸಂಪರ್ಕ ಕಡಿತ

ಬೆಂಗಳೂರು :

    ರಾಜ್ಯಾದ್ಯಂತ  ಬಹುತೇಕ ಎಲ್ಲ ಜಲಾಶಯಗಳು ತುಂಬಿವೆ. ಅನೇಕ ಕಡೆ ಗುಡ್ಡ ಕುಸಿದು ರಾಷ್ಟ್ರೀಯ ಹೆದ್ದಾರಿಗಳೇ ಬಂದ್ ಆಗಿರುವುದರಿಂದ ಸ್ಥಳೀಯರು ಮತ್ತು ಪ್ರಯಾಣಿಕರು ಒಂದೆಡೆಯಿಂದ ಮತ್ತೊಂದೆಡೆ ಹೋಗಲಾಗದೆ ಪರದಾಡುವಂತಾಗಿದೆ. 

   ಚಿಕ್ಕಮಗಳೂರಿನಿಂದ ಮಂಗಳೂರು, ದಕ್ಷಿಣ ಕನ್ನಡಕ್ಕೆ ಸಂಪರ್ಕ ಕಲ್ಪಿಸುವ ಚಾರ್ಮಾಡಿ ಘಾಟ್​ನಲ್ಲಿ ಮತ್ತೆ ಗುಡ್ಡ ಕುಸಿತವಾಗಿದ್ದು, ತೆರವು ಕಾರ್ಯಾಚರಣೆ ನಡೆಯುತ್ತಿದೆ. ಕಳೆದ 3 ದಿನಗಳಿಂದ ಬಂದ್ ಆಗಿರುವ ಈ ಘಾಟ್​ ಇಂದು ಕೂಡ ಬಂದ್ ಆಗಿರಲಿದೆ.  ರಸ್ತೆಯ ನಾಲ್ಕೈದು ಕಡೆ ಮಣ್ಣು ಕುಸಿದಿರುವ ಕಾರಣ ಜಿಲ್ಲಾಡಳಿತ ತೆರವು ಕಾರ್ಯಾಚರಣೆ ನಡೆಸುತ್ತಿದೆ. ಹೀಗಾಗಿ, ಚಿಕ್ಕಮಗಳೂರು- ದಕ್ಷಿಣ ಕನ್ನಡ, ಧರ್ಮಸ್ಥಳ, ಮಂಗಳೂರು ಸಂಪರ್ಕ ಕಡಿತಗೊಂಡಿದೆ.

      ಶೃಂಗೇರಿ ಶಾರದಾಂಬೆ ದೇವಸ್ಥಾನದ ಪಕ್ಕದಲ್ಲಿ ಹರಿಯುತ್ತಿರುವ ತುಂಗಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಇದರಿಂದ ತೂಗುಸೇತುವೆಯ ಮೇಲೆ ಯಾರಿಗೂ ಹೋಗಲು ಅವಕಾಶ ನೀಡುತ್ತಿಲ್ಲ. ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲೂ ಇದೇ ಸ್ಥಿತಿ ಎದುರಾಗಿದ್ದು, ಕುದುರೆಮುಖ, ಕಳಸ  ಭಾಗದಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ಹೆಬ್ಬಾಳೆ ಸೇತುವೆ ಬಂದ್ ಆಗಿದೆ. ಇದರಿಂದ ಕಳಸ – ಹೊರನಾಡು ಸಂಪರ್ಕ ಸಂಪೂರ್ಣ ಬಂದ್ ಆಗಿದೆ. ಭದ್ರಾ ನದಿ ಅಪಾಯಮಟ್ಟ ಮೀರಿ ಹರಿಯುತ್ತಿರುವ ಕಾರಣ ರಸ್ತೆ ಕುಸಿತವಾಗಿ ಹೊರನಾಡಿಗೆ ತೆರಳಲು ಇರುವ ಇನ್ನೊಂದು ಮಾರ್ಗವಾದ  ಹಳುವಳ್ಳಿ ಮಾರ್ಗವೂ ಬಂದ್ ಆಗಿದೆ.  ಹೀಗಾಗಿ, ಹೊರನಾಡು ಸಂಪರ್ಕ ಸಂಪೂರ್ಣ ಕಡಿತಗೊಂಡಿದೆ.

    ಹಾವೇರಿ ಜಿಲ್ಲೆಯಲ್ಲಿ ಮುಂದುವರೆದ ಮಹಾ ಮಳೆಯಿಂದಾಗಿ ಶಿರಸಿ-ಹರಿಹರ ಸಂಪರ್ಕ ಬಂದ್ ಆಗಿದೆ. ವರದಾ ನದಿಯಲ್ಲಿ ಪ್ರವಾಹ ಹೆಚ್ಚಾದ ಹಿನ್ನೆಲೆ ಹಾನಗಲ್ ತಾಲೂಕಿನ ಹೊಂಕಣ ಗ್ರಾಮದಲ್ಲಿ ಇರುವ ವರದಾ ನದಿಯ ಸೇತುವೆ ಮೇಲೆ ನೀರು ಹರಿಯುತ್ತಿದೆ. ಈ ಸೇತುವ ಶಿರಸಿ ಹರಿಹರ ಸಂಪರ್ಕ ಕಲ್ಪಿಸುವ ಸೇತುವೆಯಾಗಿದೆ. ಹೀಗಾಗಿ, ಇದೀಗ ಶಿರಸಿ- ಹರಿಹರ ಮಾರ್ಗವೂ ಬಂದ್ ಆಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ