ಚೆನ್ನೈ:
ತಮಿಳುನಾಡಿನ ಕಂಚೀಪುರಂನಲ್ಲಿರುವ ವರದರಾಜ ಪೆರುಮಾಳ್ ದೇಗುಲ ಅದ್ಭುತ ವಾಸ್ತುಶಿಲ್ಪದಿಂದ ವಿಶ್ವವಿಖ್ಯಾತವಾಗಿದೆ. ಪಲ್ಲವರ ಕಾಲದ ಈ ಸುಂದರ ದೇಗುಲಕ್ಕೆ ಇದೀಗ ಭಕ್ತಸಾಗರ ಹರಿದುಬರುತ್ತಿದೆ. ಕಾರಣ 40 ವರ್ಷಗಳ ನಂತರ ನೀರಿನಿಂದ ಹೊರತೆಗೆಯಲಾದ ಆತ್ತಿ ವರದರಾಜ ಸ್ವಾಮಿಮೂರ್ತಿ.
ಬರೋಬ್ಬರಿ 40 ವರ್ಷಗಳ ಬಳಿಕ ವರದರಾಜ ಸ್ವಾಮಿಮೂರ್ತಿಯನ್ನು ದೇಗುಲದಲ್ಲೇ ಇದ್ದ ನೀರಿನ ಟ್ಯಾಂಕರ್ನಿಂದ ಹೊರತೆಗೆಯಲಾಗಿದೆ. 12 ಅಡಿಗಳ ಅಂಜೂರದ ಮರದಿಂದ ತಯಾರಿಸಿದ ಬೆಳ್ಳಿಯ ಲೇಪನವಿರುವ ಮೂರ್ತಿಯನ್ನು ಕಾಣಲು ಭಕ್ತರು ತಂಡೋಪತಂಡವಾಗಿ ಆಗಮಿಸುತ್ತಿದ್ದಾರೆ.
ಕಳೆದ ಶುಕ್ರವಾರವಷ್ಟೇ ಪ್ರತಿಮೆಯನ್ನು ನೀರಿನಿಂದ ಹೊರತೆಗೆಯಲಾಗಿದ್ದು, 48 ದಿನಗಳ ಕಾಲ ದರ್ಶನಕ್ಕೆ ಮುಕ್ತವಾಗಿದೆ. 16ನೇ ಶತಮಾನದ ಮೂರ್ತಿಯನ್ನು 1979 ಜುಲೈ 2ರಂದು ಹೊರತೆಗೆಯಲಾಗಿತ್ತು. ಇತಿಹಾಸಪ್ರಸಿದ್ಧ ಮೂರ್ತಿಯನ್ನು ನೀರಿನಲ್ಲಿ 40 ವರ್ಷಗಳ ಕಾಲ ಇಡಲು ಕಾರಣ, ಕಳ್ಳರಿಂದ ಇದನ್ನು ರಕ್ಷಣೆ ಮಾಡುವುದಾಗಿದೆ. 1709 ರಲ್ಲಿ ಟ್ಯಾಂಕ್ ಖಾಲಿಯಾದಾಗ ಮೂರ್ತಿ ತಾನಾಗಿಯೇ ಕಾಣಿಸಿಕೊಂಡಿತ್ತು.
ಆನಂತರ 40 ವರ್ಷಗಳಿಗೊಮ್ಮೆ ಮೂರ್ತಿಯನ್ನು ಹೊರತಂದು ಭಕ್ತರಿಗೆ ದರ್ಶನ ಭಾಗ್ಯ ಕರುಣಿಸುವ ಕೆಲಸವನ್ನೂ ದೇವಸ್ಥಾನದ ಮಂಡಳಿ ಮಾಡುತ್ತಿದೆ. ವ್ಯಕ್ತಿಯ ಜೀವಮಾನದಲ್ಲಿ ಎರಡು ಬಾರಿ ಮಾತ್ರ ಮೂರ್ತಿಯ ದರ್ಶನ ಪಡೆಯಲು ಸಾಧ್ಯವಾಗುವುದರಿಂದ ಭಕ್ತಸಾಗರ ಹರಿದುಬರುತ್ತಿದೆ. ದೇಗುಲಕ್ಕೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿರುವುದರಿಂದವೈದ್ಯಕೀಯ ಸೌಲಭ್ಯ, 2,500 ಪೊಲೀಸರಿಂದ ಬಿಗಿ ಬಂದೋಬಸ್ತ್ ಸಹ ಏರ್ಪಡಿಸಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
