ಬ್ಯಾಡಗಿ:
ಅಪಫಾತದಲ್ಲಿ ಗಾಯಗೊಂಡು ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದರು ರೋಜಾ ಪಾಲನೆ (ರಂಜಾನ್ ಉಪವಾಸ)ಗಾಗಿ ನೀರು ಕುಡಿಯಲು ನಿರಾಕರಿಸಿ ಶಿಕ್ಷಕರೊಬ್ಬರು ಅಸುನೀಗಿದ ಪ್ರಸಂಗ ಭಾನುವಾರ ಹಾವೇರಿ ತಾಲೂಕಿನ ತೋಟದ ಯಲ್ಲಾಪುರದ ಬಳಿ ಸಂಭವಿಸಿದೆ. ಇಲ್ಲಿನ ಸಂಗಮೇಶ್ವರ ನಗರದ ಸರ್ಕಾರಿ ಶಾಲೆ ಶಿಕ್ಷಕ ಫೈಸಲ್ ಅಲಿ ಕೋಲಕಾರ (46) ಮೃತರಾದವರು.
ಹಾವೇರಿಯಲ್ಲಿ ತರಬೇತಿ ಮುಗಿಸಿಕೊಂಡು ವಾಪಸ್ ಮನೆಗೆ ಬರುತ್ತಿದ್ದ ಸಂದರ್ಭದಲ್ಲಿ ಫೈಸಲ್ ಅಲಿ ಬೈಕ್‌ಗೆ ಬಸ್ ಡಿಕ್ಕಿ ಹೊಡೆದು, ಫೈಸಲ್ ತೀವ್ರ ಗಾಯಗೊಂಡಿದ್ದರು. ನೆಲಕ್ಕೆ ಬಿದ್ದ ಫೈಸಲ್ ಕಿವಿ, ಮೂಗು, ಬಾಯಿಯಲ್ಲಿ ರಕ್ತಸ್ರಾವ ಆಗುತ್ತಿತ್ತು. ಈ ಸಂದರ್ಭದಲ್ಲಿ ಬಸ್ಸಿನಲ್ಲಿದ್ದವರು, ಅಕ್ಕಪಕ್ಕದವರು ನೀರು ಕುಡಿಸುವ ಪ್ರಯತ್ನ ಮಾಡಿದ್ದಾರೆ.
ಇಂತಹ ಸಂದಿಗ್ಧ ಸ್ಥಿತಿಯಲ್ಲೂ ಫೈಸಲ್ ‘ನಾನು ರೋಜಾ ಇದ್ದೇನೆ ಸಂಜೆ ನಮಾಜ್ ಮಾಡದೇ ಹನಿ ನೀರೂ ಸಹ ಕುಡಿಯುವುದಿಲ್ಲ’ ಎಂದು ನೀರು ನಿರಾಕರಿಸಿದ್ದಾರೆ. ಕೆಲವರು ಜೀವ ಉಳಿಸಲು ನೀರು ಕುಡಿಸುವ ಪ್ರಯತ್ನಕ್ಕೆ ಮುಂದಾದರೂ ಅದನ್ನು ನುಂಗದೇ ಉಗುಳಿದ್ದಾರೆ ಎನ್ನಲಾಗಿದೆ. ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಅವರು ಬಳಿಕ ಕೆಲ ನಿಮಿಷಗಳಲ್ಲಿ ಮೃತಪಟ್ಟಿದ್ದಾರೆ.