ಮಂಗಳೂರು :
ನೇತ್ರಾವತಿ ನದಿಯ ಪೂರಕ ನದಿಯ ನೀರು ಇಂಗುತ್ತಿದೆ. ಉಪನದಿಗಳ ನೀರು ಇಂಗುತ್ತಿರುವ ಪರಿಣಾಮ ನೀರಿಗೆ ಸಮಸ್ಯೆ ಆಗಿದೆ. ಕಾಡು ಉಳಿಸದೇ ಇರುವ ಕಾರಣ ಈ ಸಮಸ್ಯೆ ಎದುರಾಗಿದೆ ಎಂದು ಧರ್ಮಸ್ಥಳದ ಧರ್ಮಾದಿಕಾರಿ ಡಾ ಡಿ ವೀರೇಂದ್ರ ಹೆಗ್ಗಡೆ ವಿಷಾದ ವ್ಯಕ್ತಪಡಿಸಿದ್ದಾರೆ.
ಸರ್ಕಾರ ಮತ್ತು ಜಲತ್ಞರು ಈ ಬಗ್ಗೆ ತಕ್ಷಣ ಯೋಚನೆ ಮಾಡಬೇಕು. ಇಂದು ಮಾತ್ರವಲ್ಲ ಮುಂದಿನ 15ರಿಂದ 20 ವರ್ಷಗಳ ಭವಿಷ್ಯದ ಬಗ್ಗೆ ಯೋಚನೆ ಮಾಡಬೇಕು. ಪಶ್ಚಿಮಘಟ್ಟದಲ್ಲಿ ಅರಣ್ಯನಾಶದಿಂದ ನೀರಿನ ಸಮಸ್ಯೆ ಉಂಟಾಗುತ್ತಿದೆ. ಅರಣ್ಯವನ್ನು ಉಳಿಸುವತ್ತ ಸರಕಾರ ಮತ್ತು ಪರಿಸರ ತಜ್ಞರು ಗಮನ ಹರಿಸಬೇಕು ಎಂದು ಅವರು ಕಿವಿಮಾತು ಹೇಳಿದರು. ಧರ್ಮಸ್ಥಳದಲ್ಲಿ ನೀರಿನ ಅಭಾವ:ದರ್ಶನ ಮುಂದೂಡುವಂತೆ ವೀರೇಂದ್ರ ಹೆಗ್ಗಡೆ ಮನವಿ ಕರ್ನಾಟಕದ ಕರಾವಳಿಯಲ್ಲಿ ಇದೀಗ ತೀವ್ರ ನೀರಿನ ಸಮಸ್ಯೆ ಎದುರಾಗಿದೆ. ದಿನದಿಂದ ದಿನಕ್ಕೆ ಬಿಸಿಲಿನ ಬೇಗೆ ತೀವ್ರಗೊಳ್ಳಲಾರಂಭಿಸಿದೆ.
ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ತೀವ್ರ ನೀರಿನ ಬರ ಪರಿಸ್ಥತಿ ಸೃಷ್ಟಿಯಾಗಿದೆ. ತಾಪಮಾನ ಹೆಚ್ಚಳದಿಂದ ಅಂತರ್ಜಲ ಮಟ್ಟ ಕುಸಿಯಲಾರಂಭಿಸಿದ್ದು ಜಲಮೂಲಗಳು ಬರಿದಾಗಲಾರಂಭಿಸಿವೆ. ಧರ್ಮಸ್ಥಳದಲ್ಲಿ 40ರ ಆಸುಪಾಸಿನಲ್ಲಿ ತಾಪಮಾನವಿದೆ. ನೀರಿನ ಬರದ ಪರಿಣಾಮ ಜಿಲ್ಲೆಯ ಪ್ರಮುಖ ಪುಣ್ಯಕ್ಷೇತ್ರಗಳ ಮೇಲೆಯೂ ಉಂಟಾಗಿದೆ. ರಾಜ್ಯದ ಹೆಸರಾಂತ ಕ್ಷೇತ್ರವಾದ ಧರ್ಮಸ್ಥಳದಲ್ಲಿ ನೀರಿನ ಸಮಸ್ಯೆ ಉಲ್ಬಣಿಸಿದೆ. ಕ್ಷೇತ್ರದ ವತಿಯಿಂದ ಭಕ್ತಾದಿಗಳು ತಮ್ಮ ಪ್ರವಾಸವನ್ನು ಮುಂದೂಡಲು ಮನವಿ ಮಾಡಲಾಗಿದೆ. ಕ್ಷೇತ್ರದಲ್ಲಿ ನೀರಿನ ಅಭಾವ ಇರುವುದರಿಂದ ಭಕ್ತಾದಿಗಳು ಹಾಗು ಪ್ರವಾಸಿಗರು ಕೆಲ ದಿನಗಳ ಕಾಲ ಕ್ಷೇತ್ರದ ಭೇಟಿಯನ್ನು ಮುಂದೂಡುವಂತೆ ಕೋರಿದ್ದರು.
ಕ್ಷೇತ್ರದ ಶೌಚಾಲಯ, ಛತ್ರ, ವಸತಿ ಗೃಹಗಳಲ್ಲಿ ತೀವ್ರ ನೀರಿನ ಕೊರತೆ ಎದುರಾಗಿದೆ. ಅದಲ್ಲದೇ ಕ್ಷೇತ್ರದ ಸ್ನಾನ ಘಟ್ಟದಲ್ಲಿ ನೀರಿಲ್ಲದೇ ಭಕ್ತರು ಪರದಾಡುವಂತಾಗಿದೆ. ಧರ್ಮಸ್ಥಳದಲ್ಲಿ ನೀರಿಗೆ ತೀರಾ ಬರ ಹಿನ್ನೆಲೆಯಲ್ಲಿ ಶನಿವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ವೀರೆಂದ್ರ ಹೆಗ್ಗಡೆ ಅವರು, ರಾಜ್ಯದಲ್ಲೇ ಬರದ ಲಕ್ಷಣವಿದ್ದು, ನೀರಿನ ಸಾಕಷ್ಟು ಕೊರತೆಯಿದೆ, ಈ ವರ್ಷ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ನೀರಿನ ಸಮಸ್ಯೆಯಾಗಿದೆ. ಘಟ್ಟದ ಭಾಗದಿಂದ ನೀರು ಹರಿದು ಬರುವುದರಿಂದ ನೇತ್ರಾವತಿಯಲ್ಲಿ ನೀರು ಹೆಚ್ಚಿರುತ್ತದೆ. ಆದರೆ ಈ ಬಾರಿ ಅಲ್ಲಿಯೂ ಮಳೆಯಾಗದ ಕಾರಣ ನೇತ್ರಾವತಿಯಲ್ಲೂ ನೀರಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.