‘ಮಸೂದ್ ಅಜರ್ ನಮ್ಮ ಬಳಿಯೇ ಇದ್ದಾನೆ’ ಎಂದ ಪಾಕ್!

ಲಾಹೋರ್:

       ಜೈಶ್ – ಎ-ಮಹಮ್ಮದ್ ಉಗ್ರ ಸಂಘಟನೆಯ ಮುಖ್ಯಸ್ಥ ಮೌಲಾನ ಮಸೂದ್ ಅಜರ್ ಪಾಕಿಸ್ತಾನದಲ್ಲಿಯೇ ಇದ್ದಾನೆ ಎಂಬುದನ್ನು ಪಾಕಿಸ್ಥಾನ ಇದೇ ಪ್ರಥಮ ಬಾರಿಗೆ ಬಹಿರಂಗವಾಗಿ ಒಪ್ಪಿಕೊಂಡಿದೆ.

      ಈ ಕುರಿತಾಗಿ ಹೇಳಿಕೆ ನೀಡಿರುವ ಪಾಕಿಸ್ಥಾನದ ವಿದೇಶಾಂಗ ಸಚಿವ ಶಾ ಮಹ್ಮೂದ್ ಖುರೇಷಿ ಅವರು, “ಮಸೂದ್​ ಪಾಕಿಸ್ತಾನದಲ್ಲಿ ವಾಸವಾಗಿರುವುದು ನಿಜ. ಆದರೆ, ಆತನ ಆರೋಗ್ಯ ತೀವ್ರವಾಗಿ ಹದಗೆಟ್ಟಿದೆ. ಮಸೂದ್​ ಮನೆಯಿಂದ ಹೊರ ಬರುವ ಸ್ಥಿತಿಯಲ್ಲೂ ಇಲ್ಲ,” ಎಂದಿದ್ದಾರೆ.

      ಮಸೂದ್​ ಮೇಲೆ ನಿರ್ಬಂಧ ಹೇರುವ ವಿಚಾರವಾಗಿಯೂ ಖುರೇಶಿ ಮಾತನಾಡಿದ್ದಾರೆ. “ಭಾರತದ ಬಳಿ ಬಲವಾದ ಸಾಕ್ಷ್ಯವಿದ್ದರೆ ಅವರು ಬಂದು ಕುಳಿತು ಮಾತನಾಡಲಿ. ಆತ ಉಗ್ರ ಎಂಬುದನ್ನು ಪಾಕಿಸ್ತಾನ ನ್ಯಾಯಾಲಯದಲ್ಲಿ ಸಾಬೀತು ಮಾಡಲು ಭಾರತ ನಮಗೆ ಸರಿಯಾದ ಸಾಕ್ಷ್ಯ ಒದಗಿಸಬೇಕು. ಹಾಗಿದ್ದರೆ ಮಾತ್ರ ನಾವು ಅವರನ್ನು ಬಂಧಿಸಲು ಸಾಧ್ಯ. ಶಾಂತಿಗೋಸ್ಕರ ಯಾವುದೇ ಕ್ರಮ ಕೈಗೊಂಡರೂ ನಾವು ಅದನ್ನು ಸ್ವಾಗತಿಸುತ್ತೇವೆ,” ಎಂದು ಖುರೇಶಿ ಹೇಳಿದರು.

       ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಅಮೆರಿಕ ಸೇರಿದಂತೆ ಕೆಲ ರಾಷ್ಟ್ರಗಳು ಮಸೂದ್​ನನ್ನು ಕಪ್ಪು ಪಟ್ಟಿಗೆ ಸೇರಿಸುವಂತೆ ಪಟ್ಟು ಹಿಡಿದಿದ್ದವು. ಇದಕ್ಕೆ, ಚೀನಾ ಅಪಸ್ವರ ಎತ್ತಿತ್ತು. ಸರಿಯಾದ ಸಾಕ್ಷ್ಯ ಇಲ್ಲದ ಕಾರಣ ನಾವು ಇದಕ್ಕೆ ಬೆಂಬಲ ಸೂಚಿಸುವುದಿಲ್ಲ ಎಂದು ಹೇಳಿತ್ತು.

      ಮಸೂದ್​ನನ್ನು ಜಾಗತಿಕ ಉಗ್ರರ ಪಟ್ಟಿಗೆ ಸೇರಿಸಲು ಅನೇಕ ರಾಷ್ಟ್ರಗಳು ಪ್ರಯತ್ನಿಸುತ್ತಿವೆ. ಆದರೆ, ಚೀನಾ ಮಾತ್ರ ಇದಕ್ಕೆ ಅಡ್ಡಗಾಲು ಹಾಕುತ್ತಿದೆ.

       ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link