ಹೈದರಾಬಾದ್:
ಬಿಜೆಪಿಯೊಂದಿಗೆ ತನ್ನ ನೇತೃತ್ವದ ಜನ ಸೇನಾ ಪಕ್ಷ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡು ಒಟ್ಟಿಗೆ ಹೋರಾಟ ನಡೆಸಲಿದೆ ಎಂದು ನಟ ಹಾಗೂ ರಾಜಕಾರಣಿ ಪವನ್ ಕಲ್ಯಾಣ್ ಘೋಷಿಸಿದ್ದಾರೆ.
ಜನ ಸೇನಾ ಮುಖ್ಯಸ್ಥ ಪವನ್ ಕಲ್ಯಾಣ್ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಕಣ್ಣ ಲಕ್ಷ್ಮಿನಾರಾಯಣ ಅವರು ವಿಜಯವಾಡದಲ್ಲಿ ಜಂಟಿ ಪತ್ರಿಕಾಗೋಷ್ಠಿ ನಡೆಸಿ, ರಾಜ್ಯದಲ್ಲಿ ಉಭಯ ಪಕ್ಷಗಳು ಮೈತ್ರಿ ಮಾಡಿಕೊಂಡಿರುವುದಾಗಿ ಘೋಷಿಸಿದ್ದಾರೆ. ಮುಂದೆ ಬರಲಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಿಂದ ಆರಂಭಿಸಿ 2024ರ ಲೋಕಸಭೆ ಚುನಾವಣೆವರೆಗೆ ರಾಜ್ಯದ ಅಭಿವೃದ್ಧಿಗಾಗಿ ನಾವು ಒಟ್ಟಾಗಿ ಹೋರಾಡಲಿದ್ದೇವೆ. ನಮ್ಮ ಉದ್ದೇಶ ರಾಜ್ಯವನ್ನು ರಕ್ಷಣೆ ಮಾಡುವುದು ಎಂಬುದಾಗಿ ಇಬ್ಬರೂ ನಾಯಕರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪವನ್ ಕಲ್ಯಾಣ್ ಅವರು, ಸಂವಹನ ತೊಂದರೆಯಿಂದ ಇಷ್ಟು ದಿನ ಮೈತ್ರಿ ಸಾಧ್ಯವಾಗಿರಲಿಲ್ಲ. ಈಗ ಅಂಧ್ರ ಪ್ರದೇಶದ ಭವಿಷ್ಯಕ್ಕಾಗಿ ಜನ ಸೇನಾ, ಬಿಜೆಪಿಯೊಂದಿಗೆ ಯಾವುದೇ ಷರತ್ತುಗಳಿಲ್ಲದೆ ಮೈತ್ರಿ ಮಾಡಿಕೊಂಡಿದೆ. ರಾಜ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಮಾರ್ಗದರ್ಶನದ ಅಗತ್ಯ ಇದೆ ಎಂದರು.
”ಬಿಜೆಪಿ ಹಾಗೂ ಜನಸೇನಾ ಮೈತ್ರಿ ಘೋಷಣೆ ಮಾಡಿರುವುದರಿಂದ ಇಂದು ಐತಿಹಾಸಿಕ ದಿನವಾಗಿದೆ. ರಾಜ್ಯದಲ್ಲಿರುವ ರಾಜಕೀಯ ಜಾತಿವಾದ, ರಾಜಕೀಯ ವಂಶಾಡಳಿತ ಹಾಗೂ ಭ್ರಷ್ಟಾಚಾರವನ್ನು ಅಂತ್ಯಗೊಳಿಸಲು ನಾವು ಒಟ್ಟಿಗೆ ಚುನಾವಣೆಯಲ್ಲಿ ಸ್ಪರ್ಧಿಸುತ್ತೇವೆ” ಎಂದು ಆಂಧ್ರಪ್ರದೇಶದಲ್ಲಿ ಬಿಜೆಪಿಯ ಉಸ್ತುವಾರಿಯಾಗಿರುವ ಸುನೀಲ್ ದೇವಧರ್ ಹೇಳಿದ್ದಾರೆ.
ಪವನ್ ಕಲ್ಯಾಣ್ ಅವರು 2014ರಲ್ಲಿ ಬಿಜೆಪಿಯೊಂದಿಗೆ ಹೋರಾಡಿದ್ದರು. ಆದರೆ, ಚುನಾವಣೆಗಳಲ್ಲಿ ಸ್ಪರ್ಧಿಸಿರಲಿಲ್ಲ. 2019ರಲ್ಲಿ ಎಡಪಕ್ಷಗಳು ಹಾಗೂ ಬಹುಜನ ಸಮಾಜ ಪಕ್ಷದೊಂದಿಗೆ ಮೈತ್ರಿಮಾಡಿಕೊಂಡು ಚುನಾವಣೆಗಳಲ್ಲಿ ಸ್ಪರ್ಧಿಸಿ, ಕೇವಲ ಒಂದು ಸ್ಥಾನದಲ್ಲಿ ಮಾತ್ರ ಗೆಲುವು ಸಾಧಿಸಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ