‘ಸಿದ್ಧಗಂಗಾ ಶ್ರೀಗಳು ಮಾನವ ರತ್ನ ; ಭಾರತ ರತ್ನ ಬೇಕಿಲ್ಲ’

ತುಮಕೂರು:

        ನಮ್ಮ ರಾಜ್ಯದಲ್ಲಿ ಅದೆಷ್ಟೊ ಮಂದಿ ನಾಯಕರಿದ್ದಾರೆ. ಅವರೆಲ್ಲರಿಗಿಂತ ಮೊದಲು ಕೇಳಿ ಬರುವ ಹೆಸರು ಲಿಂ. ಡಾ. ಶ್ರೀ ಶಿವಕುಮಾರ ಮಹಾಸ್ವಾಮಿಗಳ ಹೆಸರು ಎಂದು ಮೈಸೂರು ಸಂಸ್ಥಾನದ ಯಧುವೀರ ಕೃಷ್ಣದತ್ತ ಒಡೆಯರ್ ನುಡಿದರು.

         ನಗರದ ಸಿದ್ದಗಂಗಾ ಮಠದ ಗೋಸಲ ಸಿದ್ದೇಶ್ವರ ವೇದಿಕೆಯಲ್ಲಿ ಆಯೋಜನೆ ಮಾಡಲಾಗಿದ್ದ ಶ್ರೀಗಳ 112ನೇ ಜನ್ಮಜಯಂತಿ ಹಾಗೂ ಗುರುವಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯದ ಇತಿಹಾಸದಲ್ಲಿ ಎಷ್ಟೋ ನಾಯಕರು ಇದ್ದಾರೆ. ಆ ಎಲ್ಲಿರಿಗಿಂತ ಮೊದಲ ಸಾಲಿನಲ್ಲಿ ಕೇಳುಬರುವ ಹೆಸರು ಶ್ರೀಗಳದ್ದು, ಅಂತಹ ಮಹಾನ್ ಸಂತನೊಂದಿಗೆ ನಮ್ಮ ಮೈಸೂರು ಸಂಸ್ಥಾನದ ಸಂಬಂಧ ಹೆಚ್ಚಿದೆ. ಅದನ್ನು ಮುಂದುವರೆಸಿಕೊಂಡು ಹೋಗುವುದು ನಮ್ಮ ಜವಾಬ್ದಾರಿ ಎಂದು ತಿಳಿಸಿದರು.

          ನಮಗೆ ಜೀವನದಲ್ಲಿ ಹೇಗೆ ನಡೆಯಬೇಕು ಎಂಬುದನ್ನು ಶ್ರೀಗಳು ತಿಳಿಸಿದ್ದಾರೆ. ಅವರ ಕಾಯಕ ನಮಗೆ ಮಾರ್ಗದರ್ಶನವಾಗಿದೆ. ಶ್ರೀಮಠಕ್ಕೆ ಬಂದು ಶ್ರೀಗಳ ಆಶೀರ್ವಾದ ಪಡೆಯುವುದು ನಮ್ಮ ಕರ್ತವ್ಯ ಎಂದರಲ್ಲದೆ, 1947ರಲ್ಲಿ ಜಯಚಾಮರಾಜೇಂದ್ರ ಒಡೆಯರ್ ಇಲ್ಲಿಗೆ ಬರಲು ಒಮ್ಮೆ ಹೊರಟ್ಟಿದ್ದರು. ಆ ಸಮಯದಲ್ಲಿ ಗಾಂಧೀಜಿ ಯವರ ಕಾರ್ಯಕ್ರಮ ಇದ್ದ ಕಾರಣ ಇಲ್ಲಿಗೆ ಬರುವುದು ಸಾಧ್ಯವಾಗಿರಲಿಲ್ಲ ಅಂದಿನಿಂದ ನಮ್ಮ ಮತ್ತು ಶ್ರೀಮಠದ ಸಂಬಂಧ ಮುಂದುವರೆಯುತ್ತಿದೆ ಎಂದರು.

          ಅಂತೆಯೇ ಸುತ್ತೂರು ಮಠಕ್ಕೂ ನಮ್ಮ ತಾತ ಜಯಚಾಮರಾಜ ಒಡೆಯರ್ ಅವರ ಕಾಲದಿಂದಲೂ ನಂಟಿದೆ. ಗುರು ಪರಂಪರೆ ಮತ್ತು ರಾಜ ಮನೆತನದ ಸಂಬಂಧ ಮುಂದುವರೆಸುವುದು ನಮ್ಮ ಕರ್ತವ್ಯವಾಗಿದ್ದು, ಎಲ್ಲಾ ಗಣ್ಯ ಶ್ರೀಗಳ ಜೊತೆ ನಾನು ಅರಮನೆಯ ಪರವಾಗಿ ಭಾಗವಹಿಸಿದ್ದು, ನನ್ನ ಪುಣ್ಯ. ಈ ಕ್ಷಣವನ್ನು ಎಂದಿಗೂ ಮರೆಯುವುದಿಲ್ಲ ಎಂದರು.

        ಡಾ.ಪ್ರದೀಪ್‍ಕುಮಾರ್ ಹೆಬ್ರಿಯವರು ರಚಿಸಿದ ಪರಂಜ್ಯೋತಿ ಮಹಾಕಾವ್ಯದ ಬಿಡುಗಡೆ ಮಾಡಿದ ಪೇಜಾವರ ಮಠದ ಜಗದ್ಗುರು ಶ್ರೀ ವಿಶ್ವೇಶ್ವರತೀರ್ಥ ಶ್ರೀಪಾದಂಗಳವರು ಆಶೀರ್ವಚನ ನೀಡಿ, ಶಿವಕುಮಾರ ಶ್ರೀಗಳ ಜೀವನ ಪವಾಡವಾದದ್ದು. ಅವರು ತಮ್ಮ ಜೀವನದ ಕೊನೆಯವರೆಗೂ ಕ್ರಿಯಾಶೀಲರಾಗಿ ಯತಿಗಳಿಗೆ ಆದರ್ಶ ಪುರುಷರಾಗಿದ್ದಾರೆ ಎಂದರಲ್ಲದೆ, ಇಂದು ಏಕಾದಶಿ, ಉಪವಾಸದ ದಿನ ಆದರೆ ಅದೆಲ್ಲವನ್ನು ಬಿಟ್ಟು ಶ್ರೀಗಳ ಮೇಲಿನ ಭಕ್ತಿಯಿಂದ ಈ ಕಾರ್ಯಕ್ರಮದಲ್ಲಿ ಭಾಗವಹಿಸಲೇ ಬೇಕು ಎಂದು ಬಂದಿದ್ದೇವೆ ಎಂದರು.

       ಮಠ ಎಂದರೆ ವಿದ್ಯಾರ್ಥಿ ನಿಲಯ. ಮಠ ಎಂಬುದು ಹೇಗಿರಬೇಕು ಎಂದು ಜಗತ್ತಿಗೆ ತೋರಿದ ಶ್ರೀಗಳ ಸಾಧನೆ ಅಪಾರವಾಗಿದೆ. ಶ್ರೀಮಠದಲ್ಲಿ ವಿದ್ಯಾಭ್ಯಾಸ ಪಡೆದು ಬೆಳೆದವರು ಇಂದು ರಾಷ್ಟ್ರದಲ್ಲಿ ದೊಡ್ಡ ದೊಡ್ಡ ಸೇವೆ ಸಲ್ಲಿಸುತ್ತಿದ್ದಾರೆ. ಶ್ರೀ ಮಠವು ಅನೇಕ ಉತ್ತಮ ವಿದ್ಯಾರ್ಥಿಗಳನ್ನು ಜಗತ್ತಿಗೆ ನೀಡಿದೆ. ಅವರ ಕಾರ್ಯ ವೈಖರಿ ಕಂಡು ಅದನ್ನು ಸ್ಪೂರ್ತಿಯಾಗಿಸಿಕೊಂಡು ನಮ್ಮ ಮಠದಲ್ಲೂ ಶಿಕ್ಷಣ ಕಾಯಕ ನಡೆಸಲಾಗುತ್ತಿದೆ. ಇನ್ನು ಶೈಕ್ಷಣಿಕ ಸೇವೆ ಸಲ್ಲಿಸಬೇಕು ಎಂಬ ಮಹದಾಸೆ ಇದೆ. 2ನೇ ಪರ್ಯಾಯದಲ್ಲಿ ಶ್ರೀಗಳು ಉಡುಪಿಗೆ ಬಂದು ನಮ್ಮನ್ನು ಅರಸಿ, ಹಾರೈಸಿದ್ದರು ಎಂದು ತಿಳಿಸಿ, ಪುರಾಣದಲ್ಲಿ ಭಗೀರಥನು ಗಂಗೆ ಹರಿಸಿದರೆ ಈ ಯುಗದಲ್ಲಿ ಲಿಂ. ಶ್ರೀಗಳು ಜ್ಞಾನವೆಂಬ ಗಂಗೆಯನ್ನು ಹರಿಸಿ ಆಧುನಿಕ ಭಗೀರಥರಾಗಿದ್ದಾರೆ ಎಂದರು.

         ಅಂತರರಾಷ್ಟ್ರೀಯ ದಾಸೋಹ ದಿನವನ್ನಾಗಿ ಆಚರಿಸಿ: ಏಪ್ರಿಲ್ 1 ಶ್ರೀ ಶಿವಕುಮಾ ಮಹಾಸ್ವಾಮಿಗಳು ಜನ್ಮದಿನೋತ್ಸವ. ಆದರೆ ಈ ದಿನವನ್ನು ಪಾಶ್ಚಾತ್ಯ ದೇಶಗಳಲ್ಲಿ ಮುರ್ಖರ ದಿನವನ್ನಾಗಿ ಆಚರಣೆ ಮಾಡುತ್ತಾರೆ. ಇದನ್ನು ಬಿಟ್ಟು ಅಂತಾÀರಾಷ್ಟ್ರೀಯ ದಾಸೋಹ ದಿನವನ್ನಾಗಿ ಆಚರಣೆ ಮಾಡುವಂತಾಗಬೇಕು. ಇದಕ್ಕೆ ಸರ್ಕಾರ ಮುಂದಾಗಬೇಕು ಎಂದು ಪೇಜಾವರ ಶ್ರೀಗಳು ಒತ್ತಾಯಿಸಿದರು. ಇದಕ್ಕೆ ವೇದಿಕೆ ಮೇಲೆ ಇದ್ದ ವಿವಿಧ ಮಠಾಧೀಶರುಗಳು ಕೂಡ ಧನಿಗೂಡಿಸಿದರು.

        ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಸಿದ್ದಗಂಗಾ ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಮಹಾಸ್ವಾಮಿಗಳು ಮಾತನಾಡಿ, ಇಂದು ನಡೆಯುತ್ತಿರುವ ಕಾರ್ಯಕ್ರಮಕ್ಕೆ ಇಷ್ಟೊಂದು ಜನ ಪೂಜ್ಯರು ಬಂದಿರುವುದೇ ಭಾಗ್ಯ. ಇಲ್ಲಿಯವರೆಗೂ ಶ್ರೀಗಳನ್ನು ಕೂರಿಸಿ ಆಚರಣೆ ಮಾಡಲಾಗುತ್ತಿತ್ತು. ಆದರೆ ಅವರಿಲ್ಲದೆ ನಡೆಯುತ್ತಿರುವ ಮೊದಲ ಜಯಂತಿ. ಇದಾಗಿದೆ. ಇಲ್ಲಿ ನೆರೆದ ಎಲ್ಲಾ ಶ್ರೀಗಳಲ್ಲಿಯೂ ಶಿವಕುಮಾರ ಮಹಾಸ್ವಾಮಿಗಳು ಇದ್ದಾರೆ. ಶ್ರೀಗಳಿಗೆ ಹುಟ್ಟು ಹಬ್ಬದ ಆಚರಣೆ ಮಾಡುವ ಆಸೆ, ಆಪೇಕ್ಷೆ ಇರಲಿಲ್ಲ. ನಮ್ಮ ಬಲವಂತಕ್ಕೆ ಒಪ್ಪಿ ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದರು. ಈ ಕಾರಣದಿಂದಾದರೂ ವಿವಿಧ ಮಠಾಧೀಶರು ಭಾಗವಹಿಸುತ್ತಾರೆ ಎಂಬುದು ನಮ್ಮ ಆಲೋಚನೆಯಾಗಿತ್ತು ಎಂದರು.

         ಶ್ರೀಗಳನ್ನು ಅರ್ಥಮಾಡಿಕೊಳ್ಳಲು ನನಗೂ ಸಾಧ್ಯವಾಗಲಿಲ್ಲ. ಅವರ ಜೀವನವೇ ಒಂದು ಸಂದೇಶವಾಗಿತ್ತು. ಅವರು ಯಾವುದೇ ಗ್ರಂಥ ಬರೆಯಲಿಲ್ಲ. ಬದಲಾಗಿ ಜೀವನದ ಬಗ್ಗೆ ಅರ್ಥವಾಗುವಂತೆ ತಿಳಿಸಿದ್ದಾರೆ. ತ್ಯಾಗಮೂರ್ತಿಯಾಗಿದ್ದ ಶ್ರೀಗಳು ಕಠಿಣವಾದ ಮತ್ತು ಮೃದು ಹೃದಯವನ್ನು ಹೊಂದಿದ್ದರು. ಮನಸ್ಸು ತಮ್ಮ ಬಗ್ಗೆ ಯೋಚಿಸುತ್ತಿರಲಿಲ್ಲ. ಯಾರಾದರೂ ತಪ್ಪು ಮಾಡಿದರೇ ತಾವೇ ಆ ಶಿಕ್ಷೆ ಅನುಭವಿಸುತ್ತಿದ್ದರು. ದಿನದ 24 ಗಂಟೆಯಲ್ಲಿ ನಾಲ್ಕರಿಂದ ಐದು ಗಂಟೆ ಮಾತ್ರ ವಿಶ್ರಾಂತಿ ಪಡೆದು ಉಳಿದೆಲ್ಲಾ ಸಮಯದಲ್ಲಿ ಕಾಯಕದಲ್ಲಿ ತೊಡಗುತ್ತಿದ್ದರು ಎಂದು ತಿಳಿಸಿದರು.

           ನನ್ನಲ್ಲಿ ಶ್ರೀಗಳನ್ನು ಕಾಣಲು ಸಾಧ್ಯವಿಲ್ಲ: ವೇದಿಕೆ ಮೇಲೆ ಇದ್ದ ವಿವಿಧ ಮಠಾಧಿಪತಿಗಳು ನನ್ನಲ್ಲಿ ಶ್ರೀಗಳನ್ನು ಕಾಣಬಹುದು. ಅವರ ಹೆಜ್ಜೆಯಲ್ಲಿ ನಡೆಯುತ್ತಿದ್ದು ಅವರನ್ನು ಕಾಣಬಹುದಾಗಿದೆ ಎಂದದನ್ನು ಉಚ್ಚರಿಸಿ, ಅವರನ್ನು ಜಗತ್ತಿನ ಯಾವ ವ್ಯಕ್ತಿಯಲ್ಲೂ ಕಾಣಲಿಕ್ಕೆ ಸಾಧ್ಯವಿಲ್ಲ. ಆನೆ ನಡೆದದ್ದೇ ದಾರಿ ಎನ್ನುವಂತಾ ಜೀವನ ಶೈಲಿಯಲ್ಲಿ ಬದುಕಿದ್ದವರು ಶ್ರೀಗಳು. ವಚನದಂತೆ ಬದುಕು ರೂಪಿಸಿಕೊಂಡವರು. ಮಕ್ಕಳಲ್ಲೇ ದೇವರನ್ನು ಕಂಡವರು. ಲಕ್ಷ ಲಕ್ಷ ಮಕ್ಕಳ ಮನೆಯಲ್ಲಿ ದೇವರ ಬೆಳಕು ಶಾಶ್ವತವಾಗಿ ನೆಲೆಸಿದೆ. ಮಕ್ಕಳೇ ದೊಡ್ಡ ಸಂಪತ್ತು. ದೇಶದ ಭವಿಷ್ಯ ಮಕ್ಕಳ ಕೈಲಿದೆ ಎಂದು ನಂಬಿದ್ದರು. ಅವರಿಗೆ ಅವರೇ ಸಾಟಿ ಎಂದರು.

          ಚುನಾವಣಾ ಬಿಸಿ ದಿನದಿನಕ್ಕೂ ಹೆಚ್ಚಾಗುತ್ತಿದ್ದು, ಅದರ ನಡುವೆ ಅಧಿಕಾರಿಗಳು, ಅಪಾರ ಭಕ್ತಾದಿಗಳು ಜಯಂತಿಗೆ ಬಂದಿರುವುದು ಶ್ರೀಗಳ ಮೇಲಿನ ಪ್ರೀತಿಯನ್ನು ತೋರುತ್ತಿದೆ. ಕಾರ್ಯಕ್ರಮಕ್ಕೆ ಬಂದ ಎಲ್ಲಾ ಶ್ರೀಗಳು ತಮ್ಮ ಹೃದಯದಿಂದ ಮಾತುಗಳನ್ನಾಡಿದ್ದಾರೆ. ಅವರು ಹೇಳಿದಂತೆ ಸರ್ಕಾರವು ದಾಸೋಹ ದಿನಾಚರಣೆ ಮಾಡಲಿ ಬಿಡಲಿ, ಇಲ್ಲಿ ಸೇರಿರುವ ನೀವು ನಿಮ್ಮ ಮನೆಯಲ್ಲಿ ದಾಸೋಹ ದಿನ ಎಂದು ಆಚರಣೆ ಮಾಡಿದರೆ ಅದೇ ಶ್ರೀಗಳಿಗೆ ನೀಡುವ ದೊಡ್ಡ ಗೌರವವಾಗಿದೆ ಎಂದರು. ಪ್ರಸ್ತುತ ದಿನಮಾನಗಳಲ್ಲಿ ಬೇಸಿಗೆಯ ಪ್ರಮಾಣ ಹೆಚ್ಚಾಗಿದ್ದು, ಪ್ರತಿಯೊಬ್ಬರು ಗಿಡಗಳನ್ನು ನೆಟ್ಟು, ಅದಕ್ಕೆ ಶ್ರೀಗಳ ಹೆಸರಿಟ್ಟು, ಪೋಷಣೆ ಮಾಡುವ ಸಂಕಲ್ಪ ಮಾಡಿ. ಪರಿಸರ ಸಂರಕ್ಷಣೆ ಜೊತೆಗೆ ಜಲ ಮೂಲ ಸಂರಕ್ಷಣೆ ಮಾಡಿ. ನೀರು ಅನ್ನವನ್ನು ವ್ಯರ್ಥ ಮಾಡಬೇಡಿ ಎಂದು ಕರೆ ನೀಡಿದರು.

         ಶ್ರೀಗಳು ಲಿಂಗೈಕ್ಯರಾಗಿದ್ದ ಸಂದರ್ಭದಲ್ಲಿ ವಿದ್ಯಾರ್ಥಿ ಶಿವು ಮಾಡಿದ ಕಾರ್ಯಕ್ಕೆ ಶ್ಲಾಘಿಸಿದ ಅವರು, ಮಕ್ಕಳಲ್ಲಿ ಶ್ರೀಗಳ ಸೇವೆ ಕಾಣಬಹುದು. ಎಲ್ಲಾ ಮಕ್ಕಳಿಗೂ ಶ್ರೀಗಳ ಅಪಾರವಾದ ಪ್ರೀತಿ ಇದೆ ಎಂದರಲ್ಲದೆ, ಸಂತರಲ್ಲೇ ಶ್ರೇಷ್ಠ ಸಂತ ಎಂದು ಶ್ರೀಗಳನ್ನು ಭಾವಿಸಿ ಅವರ ಸ್ಫೂರ್ತಿಯಿಂದ ಉಡುಪಿ ಪೇಜಾವರ ಶ್ರೀಗಳು ಶೈಕ್ಷಣಿಕ ಸೇವೆ ಮಾಡುತ್ತಿದ್ದಾರೆ. ಅದೇ ರೀತಿ ಮಹಾರಾಜರು ಬಂದಿರುವುದು ಸಂತೋಷ. ರಾಜ್ಯಕ್ಕೆ ಸಂಸ್ಥಾನದ ಕೊಡುಗೆ ಅಪಾರ. ಅಂದಿನ ಕಾಲದಲ್ಲಿಯೇ ಅಪಾರ ಕಾಣಿಕೆ, ಕೊಡುಗೆ ನೀಡಿದ್ದಾರೆ. ಯಾವುದೇ ಸರಕಾರ ಬಂದರೂ ಅದಕ್ಕೆ ಸರಿಸಮಾನವಲ್ಲ ಎಂದು ಮೈಸೂರು ಸಂಸ್ಥಾನದ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸದರು.

         ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸುತ್ತೂರು ಮಠದ ಶ್ರೀಗಳಾದ ಶ್ರೀ ಶಿವರಾತ್ರಿ ದೇಶೀಕೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು, ಸಿದ್ದಗಂಗೆಯನ್ನು ಜಗತ್ತಿನ ಭೂಪಟದಲ್ಲಿ ಶಾಶ್ವತವಾಗಿ ನೆಲೆಸುವಂತೆ ಮಾಡಿದವರು ಲಿಂ.ಶಿವಕುಮಾರ ಶ್ರೀಗಳು. ಯಾರೇ ಬಂದರೂ, ಎಲ್ಲಿಂದ ಬಂದಿದ್ದೀರಾ? ಮಳೆ, ಬೆಳೆ ಹೇಗಿದೆ ಎಂದು ಕೇಳುತ್ತಿದ್ದರು. ಆ ನಂತರ ಪ್ರಸಾದ ಸ್ವೀಕರಿಸಿ ಎನ್ನುತ್ತಿದ್ದರು. ಆ ಮೇಲೆ ಮುಂದಿನ ಚರ್ಚೆಗೆ ಹೋಗುತ್ತಿದ್ದರು.

          ಅಂತಹ ವ್ಯಕ್ತಿತ್ವ ಅವರದ್ದು. ಸಮುದ್ರ ಹೇಗಿತ್ತು ಎಂದರೆ ಉದಾಹರಣೆ ನೀಡಲು ಸಾಧ್ಯವಿಲ್ಲ. ಅದರಂತೆ ಶ್ರೀಗಳು ಹೇಗೆ ಬದುಕಿದ್ದರು ಎಂದರೆ ಅದಕ್ಕೆ ಅವರಾಗಿಯೇ ಬದುಕಿದ್ದರು. ಅವರಿಗೆ ಮತ್ತೊಂದು ಉದಾಹರಣೆ ನೀಡಲು ಅಸಾಧ್ಯ. ರಾಜ್ಯದಲ್ಲಿ ಮೂರು ವ್ಯಕ್ತಿಗಳ ಸಾಧನೆಯನ್ನು ಜನ ನೆನೆಯುತ್ತಾರೆ. ಸಾಹಿತ್ಯ ಕ್ಷೇತ್ರದಲ್ಲಿ ಕುವೆಂಪು, ಕಲಾ ಕ್ಷೇತ್ರದಲ್ಲಿ ರಾಜಕುಮಾರ್, ಧಾರ್ಮಿಕ ಕ್ಷೇತ್ರದಲ್ಲಿ ಶ್ರೀಗಳು. ಶ್ರೀಗಳನ್ನು ಅವಿಸ್ಮರಣೀಯವಾಗಿ ಸದಾ ನೆನಪು ಮಾಡಿಕೊಳ್ಳಬೇಕು. ಅವರ ದಿನನಿತ್ಯದ ಕೆಲಸ ಊಹಿಸಲೂ ಅಸಾಧ್ಯ. ಕಠಿಣವಾದ ಜೀವನ ಶೈಲಿ ಅವರದ್ದು ಎಂದರು.

          ಅವರು ಇರುವ ಅವಧಿಯಲ್ಲಿ ಶಾಶ್ವತವಾಗಿ ಹೆಸರು ಉಳಿಯುವಂತೆ ಕೆಲಸ ನಿರ್ವಹಿಸಿದ್ದರು. ಶ್ರೀಗಳ ಮಾತೃ ವಾತ್ಸಲ್ಯ ವನ್ನು ವಿದ್ಯಾರ್ಥಿಗಳು ಎಂದಿಗೂ ಮರೆಯುವುದಿಲ್ಲ. ಮಕ್ಕಳ ಬಗ್ಗೆ ಅತೀವ ಅನುಕಂಪ ಹೊಂದಿದ್ದರು. ಇಡೀ ಪೂಜಾ ಫಲವನ್ನು ಸಮಾಜಕ್ಕೆ ದಾನ ಮಾಡಿದ್ದಾರೆ. ಸಾತ್ವಿಕ ಸಂತರಾಗಿ, ನಾಡು ಮೆಚ್ಚಿದ ಶ್ರೇಷ್ಠ ಶರಣರಾಗಿದ್ದಾರೆ. ಕಾವಿ ಲಾಂಚನ ತೊಟ್ಟ ರಾಜ್ಯದ ಎಲ್ಲಾ ಮಠದ ಶ್ರೀಗಳಿಗೆ ಗೌರವ ತಂದಿದ್ದಾರೆ. ಅದನ್ನು ನಾವು ಮುಂದುವರೆಸಿಕೊಂಡು ಹೋಗಬೇಕು ಎಂದರು.

          ಕಾರ್ಯಕ್ರಮದಲ್ಲಿ ಚಿತ್ರದುರ್ಗದ ಮುರುಘಾಮಠದ ಶ್ರೀ ಶಿವಮೂರ್ತಿ ಮುರುಘಾ ಶರಣರು. ಮುಂಡರಗಿ ಸಂಸ್ಥಾನಮಠದ ಜಗದ್ಗುರು ಶ್ರೀ ಅನ್ನದಾನಮಹಾಸ್ವಾಮಿಗಳು ಉಜ್ಜಯಿನಿ ಸದ್ಧರ್ಮ ಸಿಂಹಾಸನ ಮಹಾಸಂಸ್ಥಾಪನಾಮಠದ ಶ್ರೀ 1008 ಜಗದ್ಗುರು ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು ನಿಡಸೋಸಿಯ ದುರದುಂಡೇಶ್ವರ ಸಿದ್ಧಸಂಸ್ಥಾನಮಠದ ಪಂಚಮಶಿವಲಿಂಗೇಶ್ವರ ಮಹಾಸ್ವಾಮಿಗಳು, ಹುಕ್ಕೇರಿ ಮಠದ ಚಂದ್ರಶೇಕರ ಶಿವಾಚಾರ್ಯ ಮಹಾಸ್ವಾಮಿಗಳು, ಹೊಸಪೇಟೆಯ ಕೊಟ್ಟೂರುಸ್ವಾಮಿ ಮಹಾಸಂಸ್ಥಾನ ಮಠದ ಶ್ರೀ ಸಂಗನಬಸವ ಮಹಾಸ್ವಾಮಿಗಳು, ಧಾರವಾಡ ಮುರುಘಾಮಠದ ಶ್ರೀ ಮಲ್ಲಿಕಾರ್ಜುನಮಹಾಸ್ವಾಮಿಗಳು, ಹುಕ್ಕೇರಿ ವಿರಕ್ತಮಠದ ಶ್ರೀ ಸದಾಶಿವಮಹಾಸ್ವಾಮಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಆರಂಭಕ್ಕೂ ಮುನ್ನ ವೀಣಾವಾದನ ನಡೆಸಿಕೊಟ್ಟ ಲೋಕೇಶ್ವರಪ್ಪ ಹಾಗೂ ಪ್ರಾರ್ಥನೆ ಸಲ್ಲಿಸಿದ ಪೂಜಾ ಅವರನ್ನು ಸನ್ಮಾನಿಸಲಾಯಿತು. ಬಿ.ಎಸ್.ಪರಮಶಿವಮೂರ್ತಿ ಸ್ವಾಗತ ಕೊರಿದರು. ಡಾ.ಶಾಲಿನಿಯವರು ನಿರೂಪಣೆ ಮಾಡಿದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ  

Recent Articles

spot_img

Related Stories

Share via
Copy link
Powered by Social Snap