ಅಹಮದಾಬಾದ್:
ಪಾಕಿಸ್ತಾನ ಮೂಲದ ಮುಸ್ಲಿಂ ಮಹಿಳೆ ಖಮರ್ ಮೊಹ್ಸಿನ್ ಶೇಖ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪೋಸ್ಟ್ ಮೂಲಕ ರಾಖಿಯನ್ನು ಕಳುಹಿಸಿದ್ದಾರೆ.
ಸೋಮವಾರ ಆಗಸ್ಟ್ 3ರಂದು ರಕ್ಷಾ ಬಂಧನ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಅನೇಕ ಮಂದಿ ಸೋದರಿಯರು ರಾಖಿ ಕಟ್ಟುತ್ತಾರೆ, ಅಹಮದಾಬಾದ್‌ನಲ್ಲಿ ನೆಲೆಸಿರುವ ‘ರಾಖಿ ಸಹೋದರಿ’ ಎಂದೇ ಖ್ಯಾತರಾಗಿರುವ ಪಾಕ್ ಮೂಲದ ಮೊಹ್ಸಿನ್ ಶೇಖ್ ಕಳೆದ 30 ವರ್ಷಗಳಿಂದ ಮೋದಿ ಅವರಿಗೆ ಪರಿಚಿತರು.
ಮೋದಿಯವರನ್ನು ನಾನು 30-35 ವರ್ಷಗಳಿಂದ ಬಲ್ಲೆ. ನಾನು ಅವರನ್ನು ಮೊದಲ ಬಾರಿಗೆ ದೆಹಲಿಯಲ್ಲಿ ಭೇಟಿ ಮಾಡಿದ್ದಾಗ ನಾನು ಕರಾಚಿಯಿಂದ ಬಂದವಳು, ಮದುವೆಯಾಗಿ ಇಲ್ಲಿ ಬಂದು ನೆಲೆಸಿದ್ದೇನೆ ಎಂದು ಪರಿಚಯ ಮಾಡಿಕೊಂಡೆ. ಆಗಿನಿಂದ ನನ್ನನ್ನು ಅವರು ಬೆಹೆನ್(ಸೋದರಿ) ಎಂದು ಕರೆಯುತ್ತಾರೆ. ನನಗೆ ಸ್ವಂತ ಸೋದರ ಇಲ್ಲ. ಎರಡು ಮೂರು ವರ್ಷ ಕಳೆದ ನಂತರ ಮತ್ತೆ ಅವರನ್ನು ನಾನು ದೆಹಲಿಯಲ್ಲಿ ರಕ್ಷಾ ಬಂಧನ ಸಮಯದಲ್ಲಿ ಭೇಟಿ ಮಾಡಿದೆ, ಆಗ ಅವರ ಕೈಗೆ ರಾಖಿ ಕಟ್ಟಿದೆ ಎನ್ನುತ್ತಾರೆ ಮೊಹ್ಸಿನ್ ಶೇಖ್.
ಒಮ್ಮೆ ನಾನು ರಾಖಿ ಕಟ್ಟುವ ಸಂದರ್ಭದಲ್ಲಿ ನೀವು ಗುಜರಾತ್ ಮುಖ್ಯಮಂತ್ರಿಯಾಗಬೇಕು ಎಂದು ದೇವರಲ್ಲಿ ಬೇಡಿಕೊಳ್ಳುತ್ತೇನೆ ಎಂದು ಹೇಳಿದ್ದೆ. ಆಗ ಅವರು ನಕ್ಕರು, ನಂತರ ಗುಜರಾತ್ ಮುಖ್ಯಮಂತ್ರಿ ಕೂಡ ಆದರು. ಮತ್ತೊಂದು ದಿನ ಅವರು ಪ್ರಧಾನಿ ಕೂಡ ಆದರು. ನನ್ನ ಪ್ರಾರ್ಥನೆ ಫಲಿಸಿತು ಎಂದು ಶೇಖ್ ಹೇಳಿದ್ದಾರೆ.
ಕೋವಿಡ್-19 ಸಮಯದಲ್ಲಿ ದೆಹಲಿಗೆ ಖುದ್ದಾಗಿ ಬಂದು ರಾಖಿ ಕಟ್ಟಲು ಸಾಧ್ಯವಿಲ್ಲ ಎಂದು ಈ ಮಹಿಳೆ ಪೋಸ್ಟ್ ಮೂಲಕ ರಾಖಿಯನ್ನು ಮೋದಿಯವರಿಗೆ ಕಳುಹಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ