ದೆಹಲಿ :
ಕಾಂಗ್ರೆಸ್ ಪಕ್ಷದ ಮುಂದಿನ ರಾಷ್ಟ್ರಾಧ್ಯಕ್ಷರ ಆಯ್ಕೆ ವಿಚಾರದಲ್ಲಿ ತಾವು ತಲೆ ಹಾಕದಿರಲು ಕಾಂಗ್ರೆಸ್‌ನ ಪರಮೋಚ್ಚ ನಾಯಕರಾದ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿಯವರು ನಿರ್ಧರಿಸಿದ್ದಾರೆ.
ಹೌದು, ಇಂದು ಅಖಿಲ ಭಾರತ ಕಾಂಗ್ರೆಸ್ ಸಮಿತಿಯ (ಎಐಸಿಸಿ) ನೂತನ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಹೊಸ ನಾಯಕನ ಆಯ್ಕೆ ಕುರಿತು ರಾಜ್ಯ ಘಟಕಗಳೊಂದಿಗೆ ಸಮಾಲೋಚನೆ ನಡೆಸಲು ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ (ಸಿಡಬ್ಲ್ಯುಸಿ) 5 ತಂಡಗಳು ರಚನೆಗೊಂಡಿವೆ. ಆದರೆ ಸಮಾಲೋಚನೆಯ ಭಾಗವಾಗಲು ನಿರಾಕರಿಸಿದ ಎಐಸಿಸಿಯ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಹಾಲಿ ಅಧ್ಯಕ್ಷ ರಾಹುಲ್ ಗಾಂಧಿ ಸಿಡಬ್ಲ್ಯುಸಿ ಸಭೆಯ ಬಳಿಕ ಹೊರನಡೆದರು.
ಸಭೆ ಬಳಿಕ ನಿರ್ಗಮಿಸುವಾಗ ಸುದ್ದಿಗಾರರ ಜತೆ ಮಾತನಾಡಿದ ಸೋನಿಯಾ ಗಾಂಧಿ, ತಾವು ಮತ್ತು ರಾಹುಲ್ ಗಾಂಧಿ ಇಬ್ಬರೂ ನೂತನ ಅಧ್ಯಕ್ಷರ ಆಯ್ಕೆಯ ಸಮಾಲೋಚನೆಯ ಭಾಗವಾಗಲು ಸಾಧ್ಯವಿಲ್ಲ. ಹಾಗಾಗಿ, ಸಿಡಬ್ಲ್ಯುಸಿ ಸಭೆ ಮುಗಿಸಿಕೊಂಡು ಹೊರಹೋಗುತ್ತಿರುವುದಾಗಿ ಹೇಳಿದರು.
ಈ ನೂತನ ಅಧ್ಯಕ್ಷರ ಆಯ್ಕೆ ನಿಟ್ಟಿನಲ್ಲಿ ಇಂದು ನಡೆಯುತ್ತಿರುವ ಸಭೆ ಮಹತ್ವದ್ದಾಗಿದೆ. ಗಾಂಧಿಗಳಿಗೆ ಹತ್ತಿರದ ವ್ಯಕ್ತಿಯಾಗಿರುವ ಮುಕುಲ್ ವಾಸ್ನಿಕ್ ಅಧ್ಯಕ್ಷ ಹುದ್ದೆಗೆ ಸೂಕ್ತ ವ್ಯಕ್ತಿ ಎಂದು ಹೇಳಲಾಗುತ್ತಿದೆ.
ರಾಹುಲ್ ಗಾಂಧಿ ಕಾಂಗ್ರೆಸ್ ಪಕ್ಷದ ರಾಷ್ಟ್ರಾಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡಿ ಎರಡು ತಿಂಗಳೇ ಕಳೆದಿದೆ. ಆದರೆ, ಈವರೆಗೆ ಆ ಸ್ಥಾನಕ್ಕೆ ಮತ್ತೊಬ್ಬ ಸೂಕ್ತ ವ್ಯಕ್ತಿಯನ್ನು ಆಯ್ಕೆ ಮಾಡುವುದು ಸಾಧ್ಯವಾಗಿಲ್ಲ. ಕರ್ನಾಟಕದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಅನೇಕರು ಮತ್ತೆ ರಾಹುಲ್ ಗಾಂಧಿಯವರೇ ಕಾಂಗ್ರೆಸ್ ಪಕ್ಷದ ರಾಷ್ಟ್ರಾಧ್ಯಕ್ಷರಾಗಲಿ ಎಂದು ಒತ್ತಾಯಿಸುತ್ತಿದ್ದಾರೆ. ಇಂದು ಆರಂಭವಾದ ಕಾಂಗ್ರೆಸ್ ಕಾರ್ಯಕಾರಣಿ ಸಭೆಯಲ್ಲೂ ಪಕ್ಷದ ಹಿರಿಯ ನಾಯಕರು ರಾಹುಲ್ ಅವರೇ ಅಧ್ಯಕ್ಷರಾಗಿ ಮುಂದುವರೆಯಲಿ ಎಂದು ಒತ್ತಾಯಿಸಿದ್ದಾರೆ.
ಇದೀಗ ಕಾಂಗ್ರೆಸ್ ಪಕ್ಷದ ಮುಂದಿನ ಅಧ್ಯಕ್ಷರ ಆಯ್ಕೆ ಕಾರ್ಯಕಾರಿ ಸಮಿತಿಯ ಜವಾಬ್ದಾರಿಯಾಗಿದ್ದು, ಶನಿವಾರ ತಡರಾತ್ರಿಯ ಒಳಗಾಗಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಮುಗಿಯಲಿದೆ ಎನ್ನಲಾಗುತ್ತಿದೆ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
