ಜೈಪುರ:
ರಾಜಸ್ಥಾನದ 21 ವರ್ಷದ ಮಯಾಂಕ್ ಪ್ರತಾಪ್ ಸಿಂಗ್ ರಾಜಸ್ಥಾನ ನ್ಯಾಯಾಂಗ ಸೇವಾ ಪರೀಕ್ಷೆಯಲ್ಲಿ ಪಾಸಾಗಿದ್ದು, ದೇಶದ ಅತಿ ಕಿರಿಯ ನ್ಯಾಯಮೂರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಮಯಾಂಕ್ ಕೇವಲ 21 ವರ್ಷ 10 ತಿಂಗಳು 9 ದಿನಗಳ ವಯಸ್ಸಿನಲ್ಲಿ ರಾಜಸ್ಥಾನ ನ್ಯಾಯಾಂಗ ಸೇವೆ (ಆರ್‌ಜೆಎಸ್) 2018ರ ಪರೀಕ್ಷೆಯಲ್ಲಿ 197 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ. ಅಷ್ಟೇ ಅಲ್ಲದೆ ಮೊದಲ ಪ್ರಯತ್ನದಲ್ಲಿ ಅಗ್ರಸ್ಥಾನದಲ್ಲಿ ಪಾಸಾಗಿದ್ದಾರೆ.
ಮಯಾಂಕ್ ತಂದೆ ರಾಜ್‍ಕುಮಾರ್ ಸಿಂಗ್ ಮತ್ತು ತಾಯಿ ಡಾ.ಮಂಜು ಸಿಂಗ್ ಶಿಕ್ಷಕರಾಗಿದ್ದಾರೆ. 2014ರಲ್ಲಿ ರಾಜಸ್ಥಾನ್ ವಿಶ್ವವಿದ್ಯಾಲಯಕ್ಕೆ ಸೇರಿಕೊಂಡ ಮಯಾಂಕ್, ಇದೇ ವರ್ಷ ಅವರು 5 ವರ್ಷಗಳ ಎಲ್‍ಎಲ್‍ಬಿ ವ್ಯಾಸಂಗ ಪೂರ್ಣಗೊಳಿಸಿದರು. ಈ ಮಧ್ಯೆ 2018ರಲ್ಲಿ ಆರ್‌ಜೆಎಸ್ ಪರೀಕ್ಷೆ ಬರೆದು, ಮೊದಲ ಪ್ರಯತ್ನದಲ್ಲಿ ಉತ್ತೀರ್ಣರಾಗಿದ್ದಾರೆ. ಈ ಸಾಧನೆಯು ಮಯಾಂಕ್ ಅವರಿಗೆ ವಿಶೇಷವಾಗಿದೆ. ಏಕೆಂದರೆ ಅವರು ತಮ್ಮ ಕುಟುಂಬದಲ್ಲಿ ಕಾನೂನು ಕ್ಷೇತ್ರಕ್ಕೆ ಹೋದ ಮೊದಲ ವ್ಯಕ್ತಿಯಾಗಿದ್ದಾರೆ.
ಸಮಾಜದಲ್ಲಿ ನ್ಯಾಯಮೂರ್ತಿಗಳಿಗಿರುವ ಪ್ರಾಧಾನ್ಯ ಮತ್ತು ಗೌರವವನ್ನು ನೋಡಿ ನನಗೆ ನ್ಯಾಯಾಂಗ ಸೇವೆ ಬಗ್ಗೆ ಆಸಕ್ತಿ ಹುಟ್ಟಿತು. ನಾನು ರಾಜಸ್ಥಾನ ಯುನಿವರ್ಸಿಟಿಯಲ್ಲಿ 5 ವರ್ಷದ ಎಲ್‌ಎಲ್‌ಬಿ ಕೋರ್ಸ್‌ಗೆ 2014ರಲ್ಲಿ ಸೇರಿದ್ದೆ. ಇದು ಈವರ್ಷ ಮುಗಿಯಿತು ಎಂದು ಸಿಂಗ್ ಈ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.
ಆರ್‌ಜೆಎಸ್ ಪರೀಕ್ಷೆಗೆ ಹಾಜರಾಗಲು ಈ ಹಿಂದೆ ಕನಿಷ್ಠ ವಯಸ್ಸು 23 ನಿಗದಿಯಾಗಿತ್ತು. ಆದರೆ ಈ ವರ್ಷ ಅದನ್ನು 21 ವಯಸ್ಸಿಗೆ ಇಳಿಸಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ