ಬೆಂಗಳೂರು
ಆಂಬಿಡೆಂಟ್ ಗ್ರೂಪ್‍ನಲ್ಲಿ ನಡೆದ ಅಕ್ರಮ ಹಣ ಬದಲಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಜನಾರ್ದನ ರೆಡ್ಡಿ ಅವರ ಆಪ್ತ ಆಲಿಖಾನ್‍ಗೆ ನಗರದ ಸೆಷನ್ಸ್ ನ್ಯಾಯಾಲಯ ಷರತ್ತುಬದ್ಧ ಜಾಮೀನು ನಿರೀಕ್ಷಣಾ ಜಾಮೀನು ನೀಡಿದೆ.
ಬಂಧನದ ಭೀತಿಯಿಂದ ಸಲ್ಲಿಸಲಾಗಿದ್ದ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಬೆಂಗಳೂರು 61 ನೇ ಸೆಷನ್ಸ್ ನ್ಯಾಯಾಲಯ ಆಲಿಖಾನ್‍ಗೆ ಶರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. 50 ಸಾವಿರ ರೂ ಮೊತ್ತದ ಬಾಂಡ್, ಒಬ್ಬರ ಶೂರಿಟಿ ನೀಡಲು ಷರತ್ತು ವಿಧಿಸಲಾಗಿದೆ. ಒಂದು ವಾರದ ಹಿಂದೆಯೇ ಆಲಿಖಾನ್ ಜಾಮೀನಿಗೆ ಅರ್ಜಿ ಸಲ್ಲಿಸಿರುವುದು ತಿಳಿದುಬಂದಿದೆ.
ಆಬಿಡೆಂಟ್ ಕಂಪನಿ ಜೊತೆ ಜನಾರ್ದನ ರೆಡ್ಡಿ ಮತ್ತೊಂದು ಅಕ್ರಮ ಡೀಲ್ ಮಾಡಿಕೊಂಡಿರುವ ಆರೋಪದ ಹಿನ್ನಲೆಯಲ್ಲಿ ಜನಾರ್ದನ ರೆಡ್ಡಿ ಹಾಗೂ ಅವರ ಕುಟುಂಬದವರ ಮನೆಗಳ ಮೇಲೆ ದಾಳಿ ನಡೆಸಲು ಸಿಸಿಬಿಗೆ ಸರ್ಚ್ ವಾರಂಟ್ ಸಿಕ್ಕಿದೆ.
ರೆಡ್ಡಿಗೆ ಜಾಮೀನು ಸಾಧ್ಯತೆ
ಆಂಬಿಡೆಂಟ್ ಗ್ರೂಪ್‍ನಲ್ಲಿ ನಡೆದ ಅಕ್ರಮ ಹಣ ಬದಲಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಜನಾರ್ದನ ರೆಡ್ಡಿ ಅವರ ಆಪ್ತ ಆಲಿಖಾನ್‍ಗೆ ನಗರದ ಸೆಷನ್ಸ್ ನ್ಯಾಯಾಲಯ ಷರತ್ತುಬದ್ಧ ಜಾಮೀನು ನಿರೀಕ್ಷಣಾ ಜಾಮೀನು ನೀಡಿರುವ ಬೆನ್ನಲ್ಲೇ ಪ್ರಕರಣದಲ್ಲಿ ಜನಾರ್ದನ ರೆಡ್ಡಿ ಅವರಿಗೂ ಜಾಮೀನು ದೊರೆಯುವ ಸಾಧ್ಯತೆಯಿದೆ
ಅಲಿಖಾನ್ ಪರ ವಕೀಲ ವಾದಿಸಿ ಜಾಮೀನು ದೊರೆಕಿಸಿಕೊಟ್ಟಿರುವ ಹಿರಿಯ ವಕೀಲ ಚಂದ್ರಶೇಖರ್ ಮಾತನಾಡಿ, ಇದೊಂದು ಸುಳ್ಳು ಪ್ರಕರಣವಾಗಿದೆ. ಸಿಸಿಬಿಯವರು ಅಂಬಿಡೆಂಟ್‍ಪ್ರಕರಣವನ್ನು ಬಳಿಸಿಕೊಂಡು ರಾಜಕೀಯ ಒತ್ತಡದಲ್ಲಿ ಅಲಿಖಾನ್ ಅವರನ್ನು ಸಿಕ್ಕಿಸಿಹಾಕಿದ್ದಲ್ಲದೇ ಜನಾರ್ದನ ರೆಡ್ಡಿಯವರ ಹೆಸರನ್ನೂ ಪ್ರಸ್ತಾಪ ಮಾಡಿ ಸಿಲುಕಿಸುವ ಹುನ್ನಾರ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ
ಈ ಹುನ್ನಾರದ ವಿರುದ್ಧವಾಗಿ ನಾವು ನ್ಯಾಯಾಲಯದ ಮೊರೆ ಹೋಗಿದ್ದೆವು. ಇಂದು ಕೋರ್ಟ್ ಅಲಿಖಾನ್ ಅವರಿಗೆ ಜಾಮೀನು ಮಂಜೂರು ಮಾಡಿದೆ. ಈ ಮೂಲಕ ಬಂಧನದ ಭೀತಿಯಿಂದ ಅಲಿಖಾನ್ ಪಾರಾಗಿದ್ದಾರೆ. ಇದು ಅಂಬಿಡೆಂಟ್ ನಿರ್ದೇಶಕರುಗಳ ವಿರುದ್ಧ ಇರುವಂತಹ ಕೇಸ್ ಆಗಿದ್ದು, ಆರೋಪಿ ನಂಬರ್ 1,2,3 ಈ ಮೂವರು ಕೂಡ ಕಂಪನಿಯ ನಿರ್ದೇಶಕರಾಗಿದ್ದಾರೆ
ಅಂಬಿಡೆಂಟ್ ಕಂಪನಿಯವರು ಸಾರ್ವಜನಿಕರಿಗೆ ವಂಚನೆ ಮಾಡುತ್ತಿದ್ದರು. ಅವರು ಸಾರ್ವಜನಿಕರ ಆಸೆಗಳನ್ನು ಯಾವಾಗ ನೆರವೇರಿಸಲಿಲ್ಲವೋ ಆ ಸಂದರ್ಭದಲ್ಲಿ ಹೂಡಿಕೆದಾರರು ಕಂಪನಿ ವಿರುದ್ಧ ದೂರು ನೀಡಿದ್ದರು. ಹೀಗಾಗಿ ಸಿಟಿ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿತ್ತು. ಇವೆಲ್ಲವೂ ಸಿಸಿಬಿ ಪೊಲೀಸರಿಗೆ ವರ್ಗಾವಣೆಯಾಗಿತ್ತು. ಒಟ್ಟಿನಲ್ಲಿ ಆರೋಪಿ ಪಟ್ಟಿಯಲ್ಲಿರುವಂತವರು ಕಂಪನಿಯ ನಿರ್ದೇಶಕರಾಗಿದ್ದಾರೆ. ಹೀಗಾಗಿ ಕಂಪನಿ, ಅಲಿಖಾನ್ ಹಾಗೂ ಜನಾರ್ದನ ರೆಡ್ಡಿಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದರು
ಕಂಪನಿ ವಿರುದ್ಧ ತನಿಖೆ ಮುಂದುವರಿಸಿ ದೋಷಾರೋಪ ಪಟ್ಟಿಗಳನ್ನು ಸಲ್ಲಿಸಬೇಕು. ಅದನ್ನು ಬಿಟ್ಟು ಇವರು ಯಾವುದೋ ಒಂದು ಇಲ್ಲಸಲ್ಲದ ಫೋಟೋಗಳನ್ನು ತೋರಿಸಿ, ಯಾವುದೋ ಸಂದರ್ಭದಲ್ಲಿ ವ್ಯಕ್ತಿ ಜೊತೆ ರೆಡ್ಡಿ ಇದ್ದಂತಹ ಫೋಟೋವನ್ನು ಸಿಸಿಬಿ ಪೊಲೀಸರು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದಿದ್ದಾರೆ.