ದಾವಣಗೆರೆ:
ಉಪ ಮುಖ್ಯಮಂತ್ರಿಯ ಆಮಿಷ ತೋರಿಸಿ ತಮ್ಮನ್ನು ಬಿ.ಎಸ್.ಯಡಿಯೂರಪ್ಪ ಬಿಜೆಪಿಗೆ ಆಹ್ವಾನಿಸುತ್ತಿದ್ದಾರೆ. ಆದರೆ, ತಾವು ಯಾವುದೇ ಕಾರಣಕ್ಕೂ ಕಾಂಗ್ರೆಸ್ ಪಕ್ಷವನ್ನು ಬದಲಿಸುವುದಿಲ್ಲ ಎಂದು ಶಾಸಕ ಡಾ.ಶಾಮನೂರು ಶಿವಶಂಕರಪ್ಪ ತಿಳಿಸಿದ್ದಾರೆ.
ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪ ಮುಖ್ಯಮಂತ್ರಿ ಸ್ಥಾನ ನೀಡುವುದಾಗಿ ಬಿಜೆಪಿಯವರು ತಮಗೆ ಸಾಕಷ್ಟು ಆಹ್ವಾನ ನೀಡುತ್ತಿದ್ದಾರೆ. ಹಾಗೆಂದ ಮಾತ್ರಕ್ಕೆ ನಾನೇನು ಉಪ ಮುಖ್ಯಮಂತ್ರಿ ಆಗಲೇಬೇಕೆಂದಿಲ್ಲ. ಕಾಂಗ್ರೆಸ್ ಪಕ್ಷದ ನಿಷ್ಟಾವಂತ ಆಗಿರುವ ನಾನು ಪಕ್ಷ ಬದಲಿಸುವ ಪ್ರಶ್ನೆಯೇ ಇಲ್ಲ ಎಂದರು.
ಕಾಂಗ್ರೆಸ್ ವರಿಷ್ಠರು ಜವಾಬ್ದಾರಿ ಕೊಟ್ಟರೆ ನಿರ್ವಹಿಸುವೆ. ಇಲ್ಲದಿದ್ದರೆ, ನನ್ನ ಕ್ಷೇತ್ರದ ಕೆಲಸ ಮಾಡಿಕೊಂಡಿರುತ್ತೇನೆ. ಹೊರತು, ಯಾವುದೇ ಕಾರಣಕ್ಕೂ ಬಿಜೆಪಿಗೆ ಹೋಗುವ ಪ್ರಶ್ನೆಯೇ ಇಲ್ಲ ಎಂದರು.
ಶಿವಮೊಗ್ಗ, ಬಳ್ಳಾರಿ ಲೋಕಸಭೆ ಹಾಗೂ ಜಮಖಂಡಿ, ರಾಮನಗರ, ಮಂಡ್ಯ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಪಕ್ಷಗಳ ಅಭ್ಯರ್ಥಿಗಳು ಗೆಲವು ಸಾಧಿಸುವುದು ನಿಶ್ಚಿತವಾಗಿದೆ. ಬಳ್ಳಾರಿ, ಶಿವಮೊಗ್ಗ ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ತಾವು ಪ್ರಚಾರ ಮಾಡಿದ್ದು, ಎರಡೂ ಕಡೆ ಮೈತ್ರಿ ಪಕ್ಷಗಳ ಅಭ್ಯರ್ಥಿಗಳ ಪರವಾದಂತಹ ವಾತಾವರಣವಿದೆ. ಮೈತ್ರಿ ಪಕ್ಷಗಳ ಪರ ಅಲೆಯೂ ಕಂಡು ಬಂದಿದ್ದು, ಶಿವಮೊಗ್ಗದಲ್ಲಿ ಮಧು ಬಂಗಾರಪ್ಪ, ಬಳ್ಳಾರಿಯಲ್ಲಿ ವಿ.ಎಸ್.ಉಗ್ರಪ್ಪ ಜಯ ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ