ಬೆಂಗಳೂರು:
ಶ್ರೀಲಂಕಾದ ಕೊಲಂಬೊದಲ್ಲಿ ಬಾಂಬ್ ಸ್ಫೋಟದಲ್ಲಿ ಮೃತಪಟ್ಟಿದ್ದ ಕನ್ನಡಿಗರ ಮೃತದೇಹವನ್ನು ಯುಎಲ್ 173 ಶ್ರೀಲಂಕಾ ಏರ್ಲೈನ್ಸ್ ವಿಮಾನದಲ್ಲಿ ಬೆಂಗಳೂರಿಗೆ ತರಲಾಗಿದೆ.
ಭಾನುವಾರ ಶ್ರೀಲಂಕಾದಲ್ಲಿ ನಡೆದ ಸರಣಿ ಬಾಂಬ್ ಸ್ಫೋಟದಲ್ಲಿ ಜೆಡಿಎಸ್ ಪಕ್ಷಕ್ಕೆ ಸೇರಿದ ಏಳು ಜನರು ಮೃತಪಟ್ಟಿದ್ದರು. ಗುರುತುಪತ್ತೆ ಕಾರ್ಯ ಮುಗಿದ ನಂತರ ಶ್ರೀಲಂಕಾ ಏರ್ಲೈನ್ಸ್ನ ಯುಎಲ್-173 ವಿಮಾನದಲ್ಲಿ ಅವರನ್ನು ತಡರಾತ್ರಿ 2:30ಕ್ಕೆ ಬೆಂಗಳೂರಿಗೆ ತರಲಾಗಿದೆ.
ರಂಗಪ್ಪ, ಲಕ್ಷ್ಮೀನಾರಾಯಣ್, ಶಿವಕುಮಾರ್ ಮತ್ತು ಹನುಮಂತರಾಯಪ್ಪ ಅವರ ಪಾರ್ಥಿವ ಶರೀರಗಳನ್ನು ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಂದು ಅಲ್ಲಿಂದ ಬೆಂಗಳೂರಿನ ನೆಲಮಂಗಲದ ಹರ್ಷ ಆಸ್ಪತ್ರೆಯಲ್ಲಿ ಪರೀಕ್ಷೆ ನಡೆಸಿ ಅವರುಗಳ ನಿವಾಸಕ್ಕೆ ಕಳುಹಿಸಿಕೊಡಲಾಗಿದೆ.
ನೆಲಮಂಗಲದ ಕಾಚನಹಳ್ಳಿಯ ಹನುಮಂತರಾಯಪ್ಪ, ಲಕ್ಷ್ಮೀನಾರಾಯಣ, ದಾಸರಹಳ್ಳಿಯ ರಂಗಪ್ಪ, ನೆಲಮಂಗಲದ ಶಿವಕುಮಾರ್ ಅವರ ಮೃತದೇಹಗಳನ್ನು ಬೆಂಗಳೂರಿಗೆ ತರಲಾಗಿದೆ. ರಂಗಪ್ಪ ಮೃತ ದೇಹ ದಾಸರಹಳ್ಳಿ ಚೊಕ್ಕಸಂದ್ರ ಸ್ವಗೃಹಕ್ಕೆ ರವಾನೆ ಮಾಡಲಾಗಿದೆ. ಉಳಿದ ಮೂರು ಕಳೆಬರಹಗಳನ್ನು ನೆಲಮಂಗಲ ಜೂನಿಯರ್ ಕಾಲೇಜ್ ಮೈದಾನದಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗಿದೆ.
ತುಮಕೂರು ನಿವಾಸಿ ರಮೇಶ್, ಅಡಕಮಾರನಹಳ್ಳಿ ನಿವಾಸಿ ಮಾರೇಗೌಡ, ಹಾರೋ ಕ್ಯಾತನಹಳ್ಳಿಯ ಪುಟ್ಟರಾಜ ಕೂಡ ಬಾಂಬ್ ಸ್ಫೋಟದಲ್ಲಿ ಮೃತಪಟ್ಟಿದ್ದರು. ಇಂದು ಮಧ್ಯಾಹ್ನ ಇಂಡಿಗೋ ಫ್ಲೈಟ್ನಲ್ಲಿ ಮೂರು ಮೃತದೇಹ ಬೆಂಗಳೂರಿಗೆ ತರಲಾಗುತ್ತದೆ ಎಂದು ಮಾಹಿತಿ ತಿಳಿದುಬಂದಿದೆ.