ನವದೆಹಲಿ:
ಸ್ವಿಟ್ಜರ್‌ಲೆಂಡ್‌ನ (ಸ್ವಿಸ್) ಬ್ಯಾಂಕ್‌ಗಳಲ್ಲಿ ಭಾರತೀಯರು ಇರಿಸಿರುವ ಕಪ್ಪುಹಣದ ವಿರುದ್ಧದ ಹೋರಾಟದಲ್ಲಿ ಭಾರತಕ್ಕೆ ಈ ಸೆಪ್ಟೆಂಬರ್‌ನಲ್ಲಿ ಭಾರಿ ಮುನ್ನಡೆ ದೊರೆಯಲಿದೆ.
ವಿದೇಶಾಂಗ ಖಾತೆಯ ರಾಜ್ಯ ಸಚಿವ ವಿ. ಮುರಳೀಧರನ್ ಅವರು ಲೋಕಸಭೆಗೆ ಮಾಹಿತಿ ಕೊಟ್ಟಿದ್ದು, ಭಾರತ ಮತ್ತು ಸ್ವಿಟ್ಜರ್‌ಲೆಂಡ್ ನಡುವೆ ಸೆಪ್ಟೆಂಬರ್‌ನಿಂದ ‘ಸ್ವಯಂ ಮಾಹಿತಿ ವಿನಿಮಯ’ ಚೌಕಟ್ಟಿನ ಅಡಿಯಲ್ಲಿ ಖಾತೆಗಳ ಮಾಹಿತಿ ದೊರೆಯಲಿದೆ ಎಂದು ಅವರು ತಿಳಿಸಿದ್ದಾರೆ.
ಸ್ವಿಸ್ ಬ್ಯಾಂಕ್ ನಲ್ಲಿ ಭಾರತೀಯರು ಕಪ್ಪುಹಣ ಹೊಂದಿರುವ ಖಾತೆದಾರರ ಮಾಹಿತಿ ವಿನಿಮಯಕ್ಕೆ ಸೆಪ್ಟಂಬರ್ ನಲ್ಲಿ ವೇದಿಕೆ ಸಜ್ಜಾಗಿದ್ದು, ಕಳೆದ ವರ್ಷ ಮುಚ್ಚಲ್ಪಟ್ಟ ಮಾಹಿತಿಗಳ ವಿವರ ಕೂಡ ಲಭ್ಯವಾಗಲಿದೆ. ಬ್ಯಾಂಕ್ ಖಾತೆ ಸಂಖ್ಯೆ, ಇರುವ ಠೇವಣಿ, ಖಾತೆದಾರರು ಪಡೆಯುತ್ತಿರುವ ಆದಾಯ ಮುಂತಾದ ಮಾಹಿತಿ ಇದರಲ್ಲಿ ಸೇರಿರಲಿದೆ.
2 ಸ್ವಿಸ್ ಏಜೆನ್ಸಿಗಳ ಪ್ರಕಾರ, ಈ ವರ್ಷ ಬ್ಯಾಂಕ್ ಖಾತೆಗಳ ಮಾಹಿತಿಯನ್ನು ಹಂಚಿಕೊಳ್ಳುವ 73 ದೇಶಗಳ ಪಟ್ಟಿಯಲ್ಲಿ ಭಾರತವೂ ಸೇರಿದೆ. ಬ್ಯಾಂಕಿಂಗ್ ಮಾಹಿತಿ ವಿನಿಮಯಕ್ಕೆ ಮುಂಚಿತವಾಗಿ ಕೈಗೊಳ್ಳಬೇಕಾದ ಶಾಸಕಾಂಗ ಮತ್ತು ಸಂಸತ್ತಿನ ಕಾರ್ಯವಿಧಾನಗಳು ಮುಕ್ತಾಯಗೊಂಡಿವೆ ಎಂದು ಸ್ವಿಸ್ ಅಧಿಕಾರಿಗಳು ದೃಢಪಡಿಸಿದ್ದಾರೆ.
ತೆರಿಗೆ ವಿಷಯಕ್ಕೆ ಸಂಬಂಧಿಸಿದಂತೆ ಎರಡು ದೇಶಗಳ ನಡುವೆ ಒಪ್ಪಂದ ಇದ್ದು, ಈಗಾಗಲೇ ಸ್ವಿಸ್ ಸರ್ಕಾರವು 100 ಭಾರತೀಯ ಉದ್ಯಮಿಗಳ ಬಗೆಗಿನ ಮಾಹಿತಿ ನೀಡಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ