ತುಮಕೂರು :
ಕೋವಿಡ್ ಸಂಕಷ್ಟ, ಅಗತ್ಯ ವಸ್ತುಗಳ ಬೆಲೆ ಏರಿಕೆ ಬಿಸಿಯ ನಡುವೆ ದರ ಹೆಚ್ಚಳವಾಗಿದ್ದ ಗ್ಯಾಸ್ ಬೆಲೆ ಸದ್ಯ ಇಳಿಯುವಂತೆ ಕಾಣುತ್ತಿಲ್ಲ. ಗೃಹ ಬಳಕೆಯ ಸಿಲಿಂಡರ್ ಬೆಲೆ ರೂ.890 ಇದ್ದು, ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ ರೂ.1765 ರೂ.ಗೆ ಹೆಚ್ಚಳವಾಗಿದೆ. ಪದೆ ಪದೆ ಲಾಕ್‍ಡೌನ್‍ನಿಂದಾಗಿ ಕಳೆದ ಎರಡು ವರ್ಷಗಳಿಂದ ಸರಿಯಾದ ವ್ಯಾಪಾರವಿಲ್ಲದ ಹೋಟೆಲ್ ಉದ್ಯಮಕ್ಕೆ ಕೊರೋನಾ ಬರೆ ಎಳೆದಿದ್ದು, ಈಗ ಗ್ಯಾಸ್ ಬೆಲೆ ಏರಿಕೆಯಾಗಿ ಮತ್ತೊಂದು ಬರೆ ಬಿದ್ದಿದ್ದು, ಬರೆ ಮೇಲೆ ಬರೆ ಎಳೆದಂತಾಗಿದೆ. ಅಲ್ಲದೇ ಶುಲ್ಕ ಪಾವತಿಸುವ ಅತಿಥಿ ಗೃಹಗಳ (ಪೇಯಿಂಗ್ ಗೆಸ್ಟ್ ಹೌಸ್-ಪಿಜಿ) ಶುಲ್ಕ ದುಬಾರಿಯಾಗಿದ್ದು, ಅಡುಗೆ ಕಂಟ್ರ್ಯಾಕ್ಟ್‍ನವರಿಗೂ ಸಂಕಷ್ಟ ಎದುರಾಗಿದೆ.
ಹೋಟೆಲ್ ಉದ್ಯಮಕ್ಕೆ ಗ್ಯಾಸ್ ಬರೆ :
ಕೋವಿಡ್ ಲಾಕ್‍ಡೌನ್‍ನಿಂದಾಗಿ ಕಳೆದ ಎರಡು ವರ್ಷಗಳಿಂದ ಸರಿಯಾಗಿ ವ್ಯಾಪಾರವನ್ನೇ ಮಾಡದ ಹೋಟೆಲ್‍ಗಳಿಗೆ ಈಗ ಗ್ಯಾಸ್ ಬೆಲೆ ಏರಿಕೆಯ ಬಿಸಿಯು ಏಳಲಾರದ ಬರೆ ಎಳೆದಿದೆ. ದಿನಸಿ ಪದಾರ್ಥ, ಅಡುಗೆ ಎಣ್ಣೆ, ಡ್ರೈಫ್ರೂಟ್ಸ್, ಮಸಾಲೆ, ಇನ್ನಿತರ ಪದಾರ್ಥಗಳ ಬೆಲೆ ಏರಿಕೆಯಿಂದಾಗಿ ಉದ್ಯಮ ಕಂಗೆಟ್ಟಿದೆ. ಲಾಕ್‍ಡೌನ್ ನಂತರದಲ್ಲಿ ಇದೀಗತಾನೇ ವ್ಯಾಪಾರ ತಹಬದಿಗೆ ಬರುತ್ತಿದ್ದು, ಗಿರಾಕಿಗಳು ವಿರಳವಾಗಿರುವ ಈ ಸಂದರ್ಭದಲ್ಲಿ ದಿಢೀರನೆ ಊಟ-ತಿಂಡಿ ಬೆಲೆಗಳನ್ನು ಏರಿಸಲು ಆಗದೇ, ಬಿಡಲು ಆಗದೇ ಹೋಟೆಲ್ ಮಾಲೀಕರುಗಳು ಪರದಾಡುವ ಪರಿಸ್ಥಿತಿ ಎದುರಾಗಿದೆ. ಬೆಲೆ ಏರಿಕೆಯ ಬಿಸಿಯಿಂದ ಪಾರಾಗಲೂ ಕೆಲವು ಹೋಟೆಲ್‍ಗಳು ಸಾಂಪ್ರಾದಾಯಿಕ ಸೌದೆ ಒಲೆಗಳ ಮೊರೆ ಹೋಗಿದ್ದು, ಇನ್ನೂ ಕೆಲವರು ಕಳಪೆ ದಿನಸಿ, ಕಲಬೆರಕೆ ಅಡುಗೆ ಎಣ್ಣೆ, ಮತ್ತಿತರ ಅಡ್ಡದಾರಿಗಳನ್ನು ಅನುಸರಿಸುತ್ತಿರುವುದು ಕಂಡುಬರುತ್ತಿದೆ.
ಅಡುಗೆ ಗುತ್ತಿಗೆಯವರಿಗೆ ಸಂಕಷ್ಟ :
ಸರ್ಕಾರ ಲಾಕ್‍ಡೌನ್ ಹೇರಿ, ಮದುವೆ ಮತ್ತಿತರ ಶುಭ ಸಮಾರಂಭಗಳಿಗೆ ಬ್ರೇಕ್ ಹಾಕಿದಾಗಿನಿಂದಲೂ ಅಡುಗೆ ಗುತ್ತಿಗೆ ಮಾಡಿಕೊಂಡು 10-20 ಜನರ ಉದ್ಯೋಗಕ್ಕೆ ಆಸರೆಯಾಗಿದ್ದ ಕ್ಯಾಟರಿಂಗ್ ಮಾಲೀಕರು ಸ್ವತಹ ತಾವೇ ಉದ್ಯೋಗವಿಲ್ಲದೇ ಮನೆಯಲ್ಲಿ ಕುಳಿತಿದ್ದಾರೆ. ಈಗ ಸರ್ಕಾರ ಮದುವೆ ಹಾಗೂ ಇತರೆ ಸಮಾರಂಭಗಳಿಗೆ ಷರತ್ತುಬದ್ಧ ಅನುಮತಿ ನೀಡಿದ್ದರೂ, ಜನ ಸಮಾರಂಭಗಳ ಅದ್ಧೂರಿ ಆಚರಣೆಗೆ ಆಸಕ್ತಿ ತೋರದೇ ತಮ್ಮ ಮನೆಗಳಲ್ಲೇ ಕಾರ್ಯಕ್ರಮ ಆಯೋಜಿಸುತ್ತಿದ್ದು, 50-100 ಜನರಿಗೆ ಮಾತ್ರ ಅಡುಗೆ ಮಾಡಲು ಕ್ಯಾಟರಿಂಗ್‍ನವರಿಗೆ ಗುತ್ತಿಗೆ ನೀಡುತ್ತಿದ್ದಾರೆ. ಈ ನಡುವೆ ಗ್ಯಾಸ್ ಬೆಲೆ ಹೆಚ್ಚಳವಾಗಿರುವುದು ಲಾಭ-ನಷ್ಟದ ಲೆಕ್ಕಚಾರದಲ್ಲಿ ಅಡುಗೆ ಗುತ್ತಿಗೆದಾರರಿಗೆ ಹೊರೆಯಾಗಿದ್ದು, ದರ ಹೆಚ್ಚಿಸಿದರೇ ಎಲ್ಲಿ ಕಾಂಟ್ರ್ಯಾಕ್ಟ್ ಕೈ ತಪ್ಪಿ ಹೋಗಿ ಮತ್ತೆ ನಿರುದ್ಯೋಗಿಗಳಾಗುತ್ತೇವೋ ಎಂಬ ಆತಂಕ ಅಡುಗೆ ಗುತ್ತಿಗೆದಾರರನ್ನು ಕಾಡುತ್ತಿದೆ.
ಶುಲ್ಕ ಹೆಚ್ಚಿಸಿದ ಪೆಯಿಂಗ್ ಗೆಸ್ಟ್ ಹೌಸ್‍ಗಳು :
ಗ್ಯಾಸ್ ಬೆಲೆ ಹೆಚ್ಚಳವಾಗಿರುವುದು ಪೇಯಿಂಗ್ ಗೆಸ್ಟ್ ವಸತಿ ನಿಲಯ ನಡೆಸುವವರ ಮೇಲೂ ಆರ್ಥಿಕ ಏರು ಪೇರುಗಳಿಗೆ ಕಾರಣವಾಗಿದೆ. ಈ ಹಿಂದೆ ನಗರದಲ್ಲಿ 3-4 ಸಾವಿರ ರೂ.ಗಳಿಗೆಲ್ಲಾ ಸುಸಜ್ಜಿತ ವ್ಯವಸ್ಥೆಗಳನ್ನು ನೀಡುತ್ತಿದ್ದ ಪಿಜಿಗಳು ಈಗ ಧಿಡೀರನೆ ಈ ತಮ್ಮ ಶುಲ್ಕಗಳನ್ನು 1-2 ಸಾವಿರ ರೂ.ಗಳಷ್ಟು ಹೆಚ್ಚಿಸಿ ಒಬ್ಬ ವ್ಯಕ್ತಿಗೆ 5 ರಿಂದ 6 ಸಾವಿರ ಶುಲ್ಕ ಪಡೆಯುತ್ತಿವೆ. ಪಿಜಿಗಳ ಈ ಶುಲ್ಕ ಹೆಚ್ಚಳವು ನಗರಕ್ಕೆ ಉದ್ಯೋಗ, ವಿದ್ಯಾಭ್ಯಾಸಕ್ಕೆಂದು ಬರುವ ಬಡ-ಮಧ್ಯಮ ವರ್ಗದ ಜನರ ಮೇಲೆ ಹೊರೆಯಾಗುತ್ತಿದೆ. ಅಲ್ಲದೇ ಈ ಬಾರಿ ಎಸ್ಸೆಸ್ಸೆಲ್ಸಿ-ಪಿಯುಸಿಯಲ್ಲಿ ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ನಗರಕ್ಕೆ ವಿದ್ಯಾಭ್ಯಾಸಕ್ಕೆಂದು ಬಂದಾಗ ಎಲ್ಲರಿಗೂ ಸರ್ಕಾರಿ ಹಾಸ್ಟೇಲ್‍ಗಳಲ್ಲಿ ಪ್ರವೇಶ ಸಿಗುವುದು ದುಸ್ಥರವಾಗಿದ್ದು, ಅನಿವಾರ್ಯವಾಗಿ ಪಿಜಿಗಳನ್ನೇ ಆಶ್ರಯಿಸಬೇಕಿದ್ದು, ಪಿಜಿಗಳಿಗೆ ಮತ್ತಷ್ಟು ಬೇಡಿಕೆ ಹೆಚ್ಚಾಗಿ ಶುಲ್ಕವನ್ನು ಮತ್ತಷ್ಟೂ ಹೆಚ್ಚಿಸಿದರೂ ಆಶ್ಚರ್ಯವಿಲ್ಲ.
ಕೊರೋನಾದಿಂದಾಗಿ ಕಳೆದ 2 ವರ್ಷಗಳಿಂದ ಸರಿಯಾದ ವ್ಯಾಪಾರವಿಲ್ಲ, ಲಾಕ್‍ಡೌನ್ ನಂತರ ಹೋಟೆಲ್‍ಗಳಿಗೆ ಜನ ಬರುತ್ತಿರುವುದು ವಿರಳವಾಗಿದೆ. ಇದರ ನಡುವೆ ಗ್ಯಾಸ್, ಎಣ್ಣೆ, ದಿನಸಿ ವಸ್ತುಗಳ ಧಾರಣೆಯಿಂದ ಹೋಟೆಲ್ ನಡೆಸುವುದೇ ಕಷ್ಟವಾಗಿದೆ. ಲಾಭದ ಆಸೆ ಬಿಟ್ಟು ಜೀವನ ನಡೆದರೇ ಸಾಕು ಎನ್ನುವಂತಾಗಿದೆ ಹೋಟೆಲ್ ಮಾಲೀಕರ ಪರಿಸ್ಥಿತಿ.
-ಮಾಧವನಾಯಕ್, ಮಾಲೀಕರು ಸುಧಾ ಹೋಟೆಲ್, ತುಮಕೂರು
ಲಾಕ್‍ಡೌನ್ ಸಂದರ್ಭದಲ್ಲಿ ವಿದ್ಯಾರ್ಥಿಗಳು, ಇತರೆ ಉದ್ಯೋಗಸ್ಥರು ಇದ್ದಕ್ಕಿದ್ದಂತೆ ಪಿಜಿಗಳನ್ನು ಖಾಲಿ ಮಾಡಿಕೊಂಡು ಹೋದರು. ಆಗ ನಮಗೆ ಲಕ್ಷಾಂತರ ರೂ.ನಷ್ಟವಾಯಿತು. ಈಗ ಗ್ಯಾಸ್ ಬೆಲೆ, ಇತರೆ ಅವಶ್ಯ ಸರಕುಗಳ ಬೆಲೆ ಹೆಚ್ಚಳವಾಗಿದ್ದು, ಅನಿವಾರ್ಯವಾಗಿ ಶುಲ್ಕವನ್ನು ಹೆಚ್ಚಿಸಲೆಬೇಕಿದೆ. ಇಲ್ಲದಿದ್ದರೇ ನಷ್ಟ ಅನುಭವಿಸಬೇಕಾಗುತ್ತದೆ.
-ಲೋಕೇಶ್ವರಪ್ಪ, ಪಿಜಿ ಮಾಲೀಕರು, ತುಮಕೂರು
ಕಳೆದ ಎರಡು ವರ್ಷದಿಂದ ಕ್ಯಾಟರಿಂಗ್ ಕ್ಷೇತ್ರ ದುಸ್ಥಿತಿಯಲ್ಲಿದೆ. ಈ ವೃತ್ತಿಯನ್ನೆ ನೆಚ್ಚಿಕೊಂಡಿದ್ದ ಹಲವಾರು ಕುಟುಂಬಗಳು ತುಂಬಾನೇ ಸಂಕಷ್ಟ ಎದುರಿಸುತ್ತಿವೆ. ಸಮಾರಂಭಗಳಲ್ಲಿ ಹೆಮ್ಮೆಯಿಂದ ರುಚಿಕರವಾಗಿ ಅಡುಗೆ ಬಡಿಸುತಿದ್ದ ನಾವು ಇಂದು ಸರ್ಕಾರ, ಸಂಘ-ಸಂಸ್ಥೆಗಳು ನೀಡುವ ಪಡಿತರ ಕಿಟ್‍ಗಳನ್ನು ಆಶ್ರಯಿಸಿ ಜೀವನ ನಡೆಸುವಂತಾಗಿದೆ. ಗ್ಯಾಸ್ ದರ ಹೆಚ್ಚಳ ಈಗ ಚೇತರಿಸಿಕೊಳ್ಳುತ್ತಿರುವ ನಮ್ಮನ್ನು ಮಕಾಡೆ ಮಲಗಿಸಿದೆ.
-ಗೋವಿಂದಪ್ಪ, ಅಡುಗೆ ಕಂಟ್ರ್ಯಾಕ್ಟರ್, ತುಮಕೂರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ