ಲಖನೌ:
ಉತ್ತರ ಪ್ರದೇಶದ ಭಯೋತ್ಪಾದಕ ನಿಗ್ರಹ ದಳ (ಎಟಿಎಸ್) ಬಂಧಿಸಿದ ಇಬ್ಬರು ಕಾಶ್ಮೀರಿ ಯುವಕರು ಜೈಶ್ ಇ ಮೊಹ್ಮದ್ ನ ಮಾಸ್ಟರ್ ಮೈಂಡ್ ಗಳ ಜೊತೆಗೆ ತಮ್ಮ ಸಂಪರ್ಕ ಇತ್ತು ಎಂದು ಒಪ್ಪಿಕೊಂಡಿದ್ದಾರೆ.
ಜಮ್ಮು ಕಾಶ್ಮೀರದ ಕುಲ್ಗಾಮ್ ನ ಶಹನವಾಝ್ ಅಹ್ಮದ್ ಮತ್ತು ಪುಲ್ವಾಮದ ಆಖಿಬ್ ಅಹ್ಮದ್ ಮಾಲಿಕ್ ಎಂಬ ಇಬ್ಬರು ಉಗ್ರರನ್ನು ಬಂಧಿಸಲಾಗಿತ್ತು.
ಪುಲ್ವಾಮಾ ದಾಳಿಯ ಸಂಚುಕೋರ ಅಬ್ದುಲ್ ರಶೀದ್ ಘಾಜಿ ಜತೆ ನಿಕಟ ಸಂಪರ್ಕ ಹೊಂದಿದ್ದಾಗಿ ಬಂಧಿತರು ವಿಚಾರಣೆ ವೇಳೆ ತಿಳಿಸಿದ್ದು, ತಾವೂ ಸಹ ಭಯೋತ್ಪಾದಕ ದಾಳಿ ನಡೆಸಲು ಸಿದ್ಧತೆ ಮಾಡಿಕೊಳ್ಳುತ್ತಿರುವುದನ್ನು ಬಾಯಿ ಬಿಟ್ಟಿದ್ದಾರೆ.
ವಿಚಾರಣೆ ವೇಳೆ ಶಹನವಾಝ್ ಅಹ್ಮದ್ ಬಾಯಿ ಬಿಟ್ಟಿರುವ ಪ್ರಕಾರ, ಜೈಶ್ ಉಗ್ರ ಸಂಘಟನೆ ಜತೆಗೆ ಆತನಿಗೆ ಹದಿನೆಂಟು ತಿಂಗಳಿಂದ ನಂಟಿದೆ. ಆದರೆ ಅಕಿಬ್ ಆರು ತಿಂಗಳ ಹಿಂದಷ್ಟೇ ಇವರ ಜೊತೆ ಸೇರಿದ್ದಾನೆ. ಫೆಬ್ರವರಿ 19 ನೇ ತಾರೀಖಿನಂದು ಭಾರತೀಯ ಸೇನೆಯಿಂದ ಹತ್ಯೆಗೀಡಾದ ಘಾಜಿ ಜೊತೆಗೆ ತನ್ನ ನಂಟಿತ್ತು ಎಂಬುದನ್ನು ಒಪ್ಪಿಕೊಂಡಿದ್ದಾನೆ.
ಈ ಬಗ್ಗೆ ಮಾತನಾಡಿರುವ DGP ಓ.ಪಿ.ಸಿಂಗ್ 4 ಗಂಟೆಗಳ ಕಾಲ ನಡೆದ ವಿಚಾರಣೆಯಲ್ಲಿ ಇಬ್ಬರು ಯುವಕರು ಉಗ್ರ ಸಂಘಟನೆಯೊಂದಿಗೆ ಸಂಪರ್ಕದಲ್ಲಿರುವ ಬಗ್ಗೆ ತಿಳಿಸಿದ್ದಾರೆ.
ಇಬ್ಬರು ಯುವಕರ ಪೈಕಿ ಕುಲ್ಗಾಮ್ ನ ಶಹನವಾಝ್ ಅಹ್ಮದ್ ಮೊಬೈಲ್ ನಿಂದ ಧ್ವನಿ ಸಂದೇಶವೊಂದನ್ನು ವಶಪಡಿಸಿಕೊಳ್ಳಲಾಗಿದೆ. ಅದರಲ್ಲಿ “ಬಡಾ ಕಾಮ್” (ದೊಡ್ಡ ಕೆಲಸ) ಹಾಗೂ “ಸಾಮಾನ್” (ಸರಕು) ಎಂದು ಮಾತನಾಡಲಾಗಿದೆ.
ಧ್ವನಿ ಸಂದೇಶಗಳಲ್ಲಿ ‘ಕುಛ್ ಕರ್ನಾ ಹೈ ಜಲ್ದೀ (ಬೇಗನೆ ಏನಾದರೂ ಮಾಡಬೇಕು) ಎಂದು ಹೇಳಿರುವುದು ಗೊತ್ತಾಗಿದೆ. ಶಸ್ತ್ರಾಸ್ತ್ರಗಳನ್ನು ಎಲ್ಲಿಂದ ಪಡೆಯಬಹುದು ಎಂಬ ಬಗ್ಗೆ ಕೆಲವು ಸ್ಥಳಗಳ ಹೆಸರೂ ಈ ಸಂಭಾಷಣೆಗಳಲ್ಲಿ ಉಲ್ಲೇಖವಾಗಿದೆ. ಆದರೆ ಆ ಸ್ಥಳಗಳಲ್ಲಿ ಉಗ್ರರಿಗೆ ಶಸ್ತ್ರಾಸ್ತ್ರಗಳು ಲಭ್ಯವಿವೆಯೆ ಎಂಬುದು ಖಚಿತವಾಗಬೇಕಿದೆ’ ಎಂದು ತಿಳಿಸಿದರು.
ಈ ಮಾತುಕತೆಯಲ್ಲೇ ದೊಡ್ಡ ಕಾರ್ಯಾಚರಣೆ ಯೋಜಿಸಿದ್ದರು ಎಂಬುದು ಗೊತ್ತಾಗುತ್ತದೆ. ಶಸ್ತ್ರಾಸ್ತ್ರಗಳು ಅಥವಾ ಸ್ಫೋಟಕಗಳು ಎಂಬ ಪದಗಳ ಬದಲಿಗೆ “ಸಾಮಾನ್” ಎಂದು ಬಳಸಲಾಗಿದೆ. ಇಬ್ಬರೂ ಕಾಶ್ಮೀರಿ ಯುವಕರು ಜೈಶ್ ಇ ಮೊಹ್ಮದ್ ಜತೆಗಿನ ತಮ್ಮ ನಂಟನ್ನು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ.
ಇವರಿಬ್ಬರನ್ನೂ ಕಾಶ್ಮೀರಕ್ಕೆ ಕರೆದೊಯ್ದು, ಉಗ್ರರಿಗೆ ತರಬೇತಿ ನೀಡಲು ಎಲ್ಲೆಲ್ಲಿ ಡಮ್ಮಿ ಗ್ರನೇಡ್ ಗಳನ್ನು ಇಡಲಾಗಿದೆ ಎಂದು ಪತ್ತೆ ಮಾಡಲು ಯತ್ನಿಸಲಾಗುವುದು. ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
