ಇತ್ತೀಚೆಗೆ ವಾಟ್ಸ್ ಆಪ್ ಗೆ ಸೇರಿಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಕಳೆದೊಂದು ವರ್ಷದಲ್ಲಿ ವಾಟ್ಸ್ ಆಪ್ ಗೆ ಮಿಲಿಯನ್ ಗಟ್ಟಲೆ ಮಂದಿ ಸೇರ್ಪಡೆಗೊಂಡಿದ್ದಾರೆ. ಆಂಡ್ರಾಯ್ಡ್ ಫೋನ್ ಕಡಿಮೆ ಬೆಲೆಗೆ ಲಭ್ಯವಾಗುವಿಕೆ ಮತ್ತು ಉಚಿತ ಇಂಟರ್ನೆಟ್ ಆಯ್ಕೆಗಳಿಂದಾಗಿ ಇದು ಸಾಧ್ಯವಾಗುತ್ತಿದೆ. ಅವಿದ್ಯಾವಂತರು ಮತ್ತು ವಿದ್ಯಾವಂತರೂ ಎಲ್ಲರೂ ಕೂಡ ವಾಟ್ಸ್ ಆಪ್ ಕಲಿಯಲು ಉತ್ಸುಕತೆ ತೋರಿಸುತ್ತಿದ್ದಾರೆ. ಈ ಮೊಬೈಲ್ ಹಿಡಿದು ಅದೇನು ಮಾಡ್ತಿರ್ತವೋ ಈ ಹುಡುಗರು ಅಂತ ಗೊಣಗುತ್ತಿದ್ದ ಹಿರಿಯ ಅಜ್ಜಅಜ್ಜಿಯಂದಿರಿಗೂ ಕೂಡ ವಾಟ್ಸ್ ಆಪ್ ಅಂದರೆ ಅಚ್ಚುಮೆಚ್ಚಾಗುತ್ತಿದೆ. ಪೋಲೀ ಹುಡುಗರಿಂದ ಹಿಡಿದು ಬ್ಯೂಸಿನೆಸ್ ಮಾಡುವ ವಿದ್ಯಾವಂತರಿಗೂ ಕೂಡ ವಾಟ್ಸ್ ಆಪ್ ಹಲವು ಉಪಯೋಗಗಳನ್ನು ಮಾಡುತ್ತಿದೆ. ಆದರೆ ಹೀಗೆ ಎಲ್ಲರೂ ವಾಟ್ಸ್ ಆಪ್ ನಲ್ಲಿ ಇರುವುದೇ ಒಂದು ಸಮಸ್ಯೆಯೇನೋ ಎಂಬಂತಾಗುತ್ತಿರುವ ಸುಳ್ಳಲ್ಲ
ಅಪರಿಚಿತ ಗುಂಪಿಗೆ ವೆಬ್ ಲಿಂಕ್ ಮೂಲಕ ಆಹ್ವಾನ:
ವಾಟ್ಸ್ ಆಪ್ ನಲ್ಲಿ ಇತ್ತೀಚೆಗೆ ಹಲವು ಅಪ್ ಡೇಟ್ ಗಳಾಗುತ್ತಿದೆ. ಅದರಲ್ಲೂ ಒಂದು ವರ್ಷದ ಹಿಂದೆ ಇಲ್ಲದ ಗ್ರೂಪ್ ಚಾಟಿಂಗ್ ಆಯ್ಕೆಯು ವಾಟ್ಸ್ ಆಪ್ ನ ಹತ್ತು ಹಲವು ಸಮಸ್ಯೆಗಳಿಗೆ ಕಾರಣವಾಗುತ್ತಿದೆಯೇನೋ ಅನ್ನಿಸುವಂತಾಗಿದೆ. ಅದರಲ್ಲೂ ವೆಬ್ ಲಿಂಕ್ ಮೂಲಕವೂ ವಾಟ್ಸ್ ಆಪ್ ಗುಂಪಿಗೆ ಸೇರುವುದಕ್ಕೆ ಆಹ್ವಾನಗಳು ಬರುತ್ತಿದೆ. ಇದು ಗೊತ್ತುಪರಿಚಯವಿಲ್ಲದ ಗುಂಪಿಗೂ ಸೇರಿಕೊಳ್ಳುವಂತೆ ಮಾಡಿಬಿಡುತ್ತದೆ. ಹಾಗಾಗಿ ಇಂತಹ ಗುಂಪಿಗೆ ಸೇರಿಕೊಳ್ಳುವ ಮುನ್ನ ಸ್ವಲ್ಪ ಎಚ್ಚರಿಕೆಯಿಂದಿರಿ. ನೀವು ಯಾವ ಗುಂಪಿನಲ್ಲಿ ಇರಬೇಕು ಯಾವ ಗುಂಪಿನಲ್ಲಿ ಇರಬಾರದು ಎಂಬುದು ನಿಮ್ಮದೇ ವಯಕ್ತಿಕ ನಿರ್ಧಾರವಾಗಿರುತ್ತದೆ. ಅದಕ್ಕೆ ಯಾರೂ ನಿಮ್ಮನ್ನ ಬಲವಂತ ಮಾಡಲು ಸಾಧ್ಯವಿಲ್ಲ.
ಯಾವ ಗುಂಪಿನಲ್ಲಿ ಯಾವ ಮೆಸೇಜ್ ಕಳಿಸಬೇಕು ಎಂಬ ಸಾಮಾನ್ಯ ಜ್ಞಾನ:
ಇತ್ತೀಚೆಗೆ ಒಬ್ಬರ ವಾಟ್ಸ್ ಆಪ್ ನಲ್ಲಿ ಅನೇಕ ಗುಂಪುಗಳಿರುತ್ತದೆ. ಆದರೆ ಯಾವ ಗುಂಪು ಯಾವುದಕ್ಕೆ ಸಂಬಂಧಿಸಿದ್ದು. ಆ ಗುಂಪಿನಲ್ಲಿ ಯಾವ ರೀತಿಯ ಮೆಸೇಜ್ ಗಳಿಗೆ ಅವಕಾಶವಿರುತ್ತದೆ ಎಂಬುದನ್ನು ಅರ್ಥೈಸಿಕೊಂಡು ಮೆಸೇಜ್ ಕಳಿಸಿ. ಬೇಕಾಬಿಟ್ಟಿಯಾಗಿ ನಿಮ್ಮ ಮೊಬೈಲ್ ಗೆ ಬಂದ ಮೆಸೇಜ್ ಗಳನ್ನೆಲ್ಲ ಗ್ರೂಪ್ ಗಳಲ್ಲಿ ಕಳಿಸಿ ಗುಂಪಿನ ಇತರ ಸದಸ್ಯರಿಗೆ ಕಿರಿಕಿರಿ
ಮಾಡಬೇಡಿ.
ಪ್ರೊಫೆಷನಲ್ ಗುಂಪಿನಲ್ಲಿ ಮುಜುಗರ ಹುಟ್ಟಿಸೋ ಮೆಸೇಜ್ ಗಳು ಬೇಡ:
ಕೆಲವು ಗುಂಪುಗಳು ನಿಜಕ್ಕೂ ಹರಟೆ ಕಟ್ಟೆಗಳು, ಇನ್ನೂ ಕೆಲವು ನಿಮ್ಮ ಪೋಲಿ ಹುಡುಗರದ್ದು, ಆದರೆ ಮತ್ತೂ ಕೆಲವು ಗುಂಪುಗಳು ತೀರಾ ಪ್ರೊಫೆಷನಲ್ ಆಗಿರಬಹುದು. ಅಂತಹ ಪ್ರೊಫೆಷನಲ್ ಗುಂಪಿನಲ್ಲಿ ನಿಮ್ಮ ಪೋಲಿತನವನ್ನು ತೋರಿಸಬೇಡಿ. ಅದು ನಿಮ್ಮನ್ನ ಮತ್ತಷ್ಟು ಡಿಗ್ರೇಡ್ ಮಾಡುವ ಸಾಧ್ಯತೆ ಇರುತ್ತದೆ. ಎಲ್ಲಿ ಹೇಗಿರಬೇಕು ಎಂಬುದು ಬಹಳ ಮುಖ್ಯ. ಕೆಲವು ರೀತಿಯ ತಿಕ್ಕಲುತನಗಳು ನಿಮ್ಮ ವಾಟ್ಸ್ ಆಪ್ ನಲ್ಲೂ ಸಾಮಾಜಿಕ ಗೌರವವನ್ನು ಕಡಿಮೆ ಮಾಡುವಂತೆ ಮಾಡುತ್ತದೆ ಎಂಬುದು ನಿಮ್ಮ ಗಮನದಲ್ಲಿ ಇರಲಿ.
ಸುಳ್ಳು ಸುದ್ದಿಗಳನ್ನು ಹರಡಬೇಡಿ:
ವಾಟ್ಸ್ ಆಪ್ ಗೆ ಇದೊಂದು ದೊಡ್ಡ ಸವಾಲಾಗಿದ್ದು ಕೇಂದ್ರ ಸರ್ಕಾರವೂ ಈ ನಿಟ್ಟಿನಲ್ಲಿ ವಾಟ್ಸ್ ಆಪ್ ಗೆ ಎಚ್ಚರಿಕೆ ನೀಡಿದೆ. ವಾಟ್ಸ್ ಆಪ್ ಕೂಡ ಸುಳ್ಳು ಸುದ್ದಿಗಳು ಹರಡದಂತೆ ತಡೆಯಲು ಹಲವು ಕ್ರಮಗಳನ್ನು ತೆಗೆದುಕೊಂಡಿದೆ. ಅದರಲ್ಲೊಂದು ಫಾರ್ವರ್ಡ್ ಲೇಬಲ್. ಹೌದು ನಿಮ್ಮ ವಾಟ್ಸ್ ಆಪ್ ಗೆ ಯಾರಿಂದಲಾದರೂ ಫಾರ್ವರ್ಡ್ ಲೇಬಲ್ ಇರುವ ಮೆಸೇಜ್ ಬಂದಲ್ಲಿ ಅದನ್ನು ಗುಂಪಿನಲ್ಲಿ ಕಳುಹಿಸುವ ಮುನ್ನ ಆಲೋಚಿಸಿ. ಫಾರ್ವರ್ಡ್ ಲೇಬಲ್ ನ ಮೆಸೇಜ್ ನಲ್ಲಿ ಎಷ್ಟು ಸತ್ಯವಿದೆ ಎಂಬುದನ್ನು ಗಮನಿಸಿ. ನಿಜಕ್ಕೂ ಅದನ್ನು ಗುಂಪಿನ ಸದಸ್ಯರಿಗೆಲ್ಲಾ ಕಳಿಸಿದಲ್ಲಿ ಅದರಿಂದಾಗುವ ಪ್ರಯೋಜನವೇನು? ಗುಂಪಿನಲ್ಲಿ ಆ ನಿರ್ಧಿಷ್ಟ ಮೆಸೇಜ್ ಕಲುಹಿಸುವ ಅಗತ್ಯವಿದೆಯೇ ಎಂಬ ಬಗ್ಗೆ ಒಮ್ಮೆ ಚಿಂತನೆ ನಡೆಸಿ ನಂತರ ಫಾರ್ವರ್ಡ್ ಮಾಡಿ. ನಿಮ್ ಮ ಮೊಬೈಲಿಗೆ ಬಂದದ್ದೆನ್ನೆಲ್ಲಾ ಫಾರ್ವರ್ಡ್ ಮಾಡುವ ಅಗತ್ಯವಿಲ್ಲ.
ವೈಯಕ್ತಿಕ ಮಾಹಿತಿಗಳನ್ನು ಎಲ್ಲಾ ಗುಂಪಿನಲ್ಲಿ ಹಂಚಿಕೊಳ್ಳಬೇಡಿ: ಎಷ್ಟೇ ಆಪ್ತರೇ ನಿಮ್ಮ ವಾಟ್ಸ್ ಆಪ್ ಗುಂಪಿನಲ್ಲಿದ್ದರೂ ಕೂಡ ಗುಂಪಿನಲ್ಲಿ ನಿಮ್ಮ ವಯಕ್ತಿಕ ವಿಚಾರಗಳನ್ನು ಹಂಚಿಕೊಳ್ಳುವುದು ಸೂಕ್ತವಲ್ಲ. ಉದಾಹರಣೆಗೆ ನೀವು ಪ್ರವಾಸಕ್ಕೆ ಹೋದಾಗ ಫೋಟೋ ಕ್ಲಿಕ್ಕಿಸಿ ಅಪ್ ಲೋಡ್ ಮಾಡುವುದು, ನೀವು ಮನೆಯಲ್ಲಿ ಇಲ್ಲ, ಇಂತಿಷ್ಟು ದಿನ ಇರುವುದಿಲ್ಲ ಎಂಬಿತ್ಯಾದಿ ಮಾಹಿತಿಯನ್ನು ಗುಂಪಿನಲ್ಲಿ ಹಂಚಿಕೊಳ್ಳಬೇಡಿ. ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದ ವಿಚಾರಗಳನ್ನು ಪ್ರಸ್ತಾಪಿಸಲೂ ಕೂಡ ಯಾವುದೇ ವಾಟ್ಸ್ ಆಪ್ ಗುಂಪು ಸರಿಯಾದ ತಾಣವಲ್ಲ ಎಂಬುದು ನಿಮ್ಮ ಗಮನದಲ್ಲಿ ಇರಲಿ.
ಗುಂಪಿನ ನೀತಿ ನಿಯಮಗಳಿಗೆ ಬದ್ಧರಾಗಿ:
ಕೆಲವು ಗುಂಪುಗಳು ಪ್ರಾರಂಭವಾಗುವುದೇ ಕೆಲವು ಪ್ರಮುಖ ಉದ್ದೇಶಗಳಿಂದ. ಆ ಉದ್ದೇಶಗಳ ಸಾಕಾರಗೊಳ್ಳುವ ನಿಟ್ಟಿನಲ್ಲಿ ನಿಮ್ಮ ಗುಂಪಿನ ಮೆಸೇಜ್ ಗಳು ಪೂರಕವಾಗಿರಬೇಕು. ಗುಂಪನ್ನು ಆರಂಭಿಸಿದಾಗ ಗ್ರೂಪ್ ಅಡ್ಮಿನ್ ತಿಳಿಸುವ ನೀತಿನಿಯಮಗಳಿಗೆ ಗುಂಪಿನ ಸದಸ್ಯರಾಗಿರುವ ನೀವು ಬದ್ಧರಾಗಿರಬೇಕು.
