ಹೇಮಾವತಿ ಜಲಾಶಯಕ್ಕೆ ದಾಖಲೆ ಪ್ರಮಾಣದ ನೀರು

ತುಮಕೂರು:
    ನೀರು ಖಾಲಿಯಾಗಿ ಮುಂದೇನು ಎಂಬ ಆತಂಕದಲ್ಲಿದ್ದ ಹೇಮಾವತಿ ಜಲಾಶಯಕ್ಕೆ ಕಳೆದೆರಡು ದಿನಗಳಿಂದ ನೀರು ಸಂಗ್ರಹವಾಗುತ್ತಿದ್ದು, ಶುಕ್ರವಾರ ದಾಖಲೆಯ ಒಳ ಹರಿವು ಸಂಗ್ರಹವಾಗಿದೆ.
ಹಾಸನ, ಸಕಲೇಶಪುರ, ಚಿಕ್ಕಮಗಳೂರು, ಮೂಡಿಗೆರೆ ಸುತ್ತಮುತ್ತ ಮಳೆಯಾಗುತ್ತಿದ್ದು, ಕೃಷ್ಣರಾಜ ಸಾಗರ ಸೇರಿದಂತೆ ಬಹುತೇಕ ಆ ಭಾಗದ ಎಲ್ಲಾ ಜಲಾಶಯಗಳಿಗೆ ನೀರು ಹರಿದು ಬರುತ್ತಿದೆ. ತುಮಕೂರು ಜಿಲ್ಲೆಗೆ ನೀರು ಒದಗಿಸುವ ಹೇಮಾವತಿ ಜಲಾಶಯಕ್ಕೆ ಭರ್ಜರಿ ನೀರು ಹರಿದು ಬರುತ್ತಿದ್ದು, ಮುಂದಿನ ದಿನಗಳಲ್ಲಿ ಈ ನಾಲೆಯಲ್ಲಿ ನೀರು ಹರಿಸುವ ಎಲ್ಲ ಲಕ್ಷಣಗಳೂ ಕಂಡು ಬರುತ್ತಿವೆ.

   ಈ ಭಾಗದಲ್ಲಿ ಮಳೆ ಆರಂಭವಾಗಿದ್ದನ್ನು ಮನಗಂಡು ಆ.೭ ರಂದೆ ಹೇಮಾವತಿ ನಾಲೆಗೆ ನೀರು ಹರಿಸಲು ಸರ್ಕಾರ ಆದೇಶಿಸಿತ್ತು. ಅದರಂತೆ ನಾಲೆಯಲ್ಲಿ ನೀರು ಹರಿಯುತ್ತಿದೆ. ಆ.೭ ರಂದು ಹೇಮಾವತಿ ಒಡಲಲ್ಲಿ ಕೇವಲ ೧೯ ಟಿಎಂಸಿ ಯಷ್ಟು ಮಾತ್ರವೇ ನೀರಿತ್ತು. ಇದರಲ್ಲಿ ೧೪ ಟಿಎಂಸಿ ನೀರನ್ನು ಕುಡಿಯುವ ಉದ್ದೆÃಶಕ್ಕೆ ಮಾತ್ರ ಎಂದು ನಾಲೆಯಲ್ಲಿ ಹರಿಸಲು ಅವಕಾಶ ನೀಡಲಾಗಿದೆ. ಅದೃಷ್ಟವಶಾತ್ ಅಂದಿನಿಂದಲೂ ಜಲಾಶಯದ ಆ ಭಾಗಗಳಲ್ಲಿ ನಿರಂತರ ಮಳೆ ಸುರಿಯುತ್ತಿದ್ದು, ಒಳ ಹರಿವು ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಇದರಿಂದಾಗಿ ಅನಿವಾರ್ಯವಾಗಿ ನೀರು ಹರಿಸಲೇಬೇಕಾದ ಪರಿಸ್ಥಿತಿ ಇದೆ.

    ಶುಕ್ರವಾರ ಮಧ್ಯಾಹ್ನದ ಮಾಹಿತಿಯಂತೆ ಹೇಮಾವತಿ ಜಲಾಶಯದಲ್ಲಿ ೨೬.೯೫ ಟಿಎಂಸಿಯಷ್ಟು ನೀರು ಸಂಗ್ರಹವಾಗಿದೆ. ೭೪,೧೪೦ ಕ್ಯೂಸೆಕ್ಸ್ ಒಳ ಹರಿವು ಇದ್ದು, ೧೬,೦೦೦ ಕ್ಯೂಸೆಕ್ಸ್ ಹೊರ ಹರಿವಿನ ಪ್ರಮಾಣ ಅಂದಾಜಿಸಲಾಗಿದೆ. ೨೯೨೨ ಅಡಿ ಸಾಮರ್ಥ್ಯವಿರುವ ಈ ಜಲಾಶಯದಲ್ಲಿ ಪ್ರಸ್ತುತ ಶುಕ್ರವಾರದ ಮಾಹಿತಿಯಂತೆ ೨೯೧೨ ಅಡಿ ನೀರು ಸಂಗ್ರಹವಾಗಿದೆ. ಕಳೆದ ಬಾರಿ ಇದೇ ದಿನದಂದು ೨೯೨೧ ಅಡಿಯಷ್ಟು ನೀರು ಸಂಗ್ರಹವಾಗಿತ್ತು.

    ಸತತವಾಗಿ ಮಳೆಯಾಗುತ್ತಿರುವ ಕಾರಣ ಜಲಾಶಯಕ್ಕೆ ನೀರು ಹರಿಯುವ ಪ್ರಮಾಣ ಸಂಜೆ ವೇಳೆಗೆ ಮತ್ತಷ್ಟು ಹೆಚ್ಚಾಗಿದ್ದು, ಕಾವೇರಿ ಕೊಳ್ಳದ ಅನೇಕ ಗ್ರಾಮಗಳು ಜಲಾವೃತಗೊಳ್ಳುವ ಅಪಾಯಕ್ಕೆ ತಲುಪಿವೆ. ಮೈಸೂರು, ಕೊಡಗು ಭಾಗದಲ್ಲಿಯೂ ಮಳೆಯಾಗುತ್ತಿದ್ದು, ಕಾವೇರಿ ನದಿ ಪಾತ್ರದ ಎಲ್ಲ ಜಲಾಶಯಗಳಿಗೆ ಒಳ ಹರಿವು ಹೆಚ್ಚಾಗ ತೊಡಗಿದೆ. ಹೇಮಾವತಿ ಜಲಾಶಯ ಹಾಸನ ಜಿಲ್ಲೆಯ ಗೊರೂರಿನಲ್ಲಿದ್ದು, ಈ ಭಾಗದ ಅನೇಕ ಗ್ರಾಮಗಳು ನೀರಿನ ಮುಳುಗಡೆಗೆ ಒಳಗಾಗುವ ಭೀತಿ ಇದೆ.

    ಹೇಮಾವತಿ ಎಡದಂಡೆ ನಾಲಾ ಕಾಲುವೆಯ ೦.೭೦ ಕಿಮೀ ನಾಲೆಯ ಆಧುನೀಕರಣ ಬಳಿಕ ನೀರು ಹರಿಸುವ ಸಾಮರ್ಥ್ಯ ಈಗ ಹೆಚ್ಚಾಗಿದೆ. ಹೀಗಾಗಿ ಈ ಬಾರಿ ನಾಲೆಯಲ್ಲಿ ಹೆಚ್ಚಿನ ಪ್ರಮಾಣದ ನೀರು ಹರಿಸಲು ಸಾಧ್ಯವಾಗುತ್ತಿದೆ. ಆದರೂ ತುಮಕೂರು ಜಿಲ್ಲೆ ತಲುಪಲು ಇನ್ನೂ ಕೆಲವು ದಿನಗಳು ಬೇಕು. ಕಳೆದ ವರ್ಷವೂ ಕಾವೇರಿ ನದಿ ಪಾತ್ರದ ಜಲಾಶಯಗಳು ತುಂಬಿ ಹರಿದಿದ್ದವು. ಈ ಬಾರಿಯೂ ಹೆಚ್ಚು ನೀರು ಸಂಗ್ರಹವಾಗುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಕುಡಿಯುವ ನೀರು ಒದಗಿಸುವ ಯೋಜನೆಗಳಿಗೆ ತೊಂದರೆ ಬರಲಾರದು ಎಂಬ ಆಶಾಭಾವನೆ ಚಿಗುರೊಡೆದಿದೆ.

    ಹೇಮಾವತಿ ಜಲಾಶಯದಿಂದ ಮುಂದಿನ ೨೫ ದಿನಗಳವರೆಗೆ ೧೪.೫೩ ಟಿಎಂಸಿ ನೀರು ಹರಿಸಿ ಆ ಮೂಲಕ ಹೇಮಾವತಿ ನಾಲಾ ಯೋಜನೆ ವ್ಯಾಪ್ತಿಗೆ ಒಳಪಡುವ ಹಾಸನ, ಮಂಡ್ಯ, ತುಮಕೂರು ಜಿಲ್ಲೆಗಳ ಕೆರೆಗಳು ಮತ್ತು ಅಣೆಕಟ್ಟುಗಳನ್ನು ತುಂಬಿಸಲು ಸರ್ಕಾರ ಅನುಮತಿ ನೀಡಿತ್ತು. ಇದೀಗ ಮಳೆಯ ಪ್ರಮಾಣವನ್ನು ಗಮನಿಸಿದರೆ ನಿಗದಿತ ದಿನಾಂಕ ಮತ್ತಷ್ಟು ವಿಸ್ತಾರವಾಗುವ ಸಾಧ್ಯತೆಗಳಿವೆ.

  ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap