ಬೆಂಗಳೂರು:
ಬಿಜೆಪಿಗಿಂತ ಹೆಚ್ಚಿನ ಸಂಖ್ಯೆಯನ್ನು ನಾವು ಹೊಂದಿದ್ದು, ರಾಜ್ಯದಲ್ಲಿನ ಮೈತ್ರಿ ಸರ್ಕಾರ ಸುಭದ್ರವಾಗಿ ಇರಲಿದೆ ಎಂದು ಸಾರಾ ಮಹೇಶ್ ಹೇಳಿದ್ದಾರೆ.
ಪ್ರಸ್ತುತ ರಾಜಕೀಯ ಪರಿಸ್ಥಿತಿ ಕುರಿತಂತೆ ದಿನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿದ ಅವರು, ಇದಕ್ಕೆ ಪ್ರತಿಷ್ಠೆ ಅಥವಾ ಸಂಘರ್ಷ ಕಾರಣವಲ್ಲ, ಅದು ದುರಾಸೆಯಿಂದ ನಡೆಯುತ್ತಿದೆ. ಜೆಡಿಎಸ್ ನಿಂದ ರಾಜೀನಾಮೆ ನೀಡಿರುವ ಹೆಚ್ ವಿಶ್ವನಾಥ್ ಹಾಗೂ ಕೆ ಸುಧಾಕರ್ ಅವರಿಗೆ ಹೆಚ್ಚು ಹಣ ಮಾಡಬೇಕೆಂಬ ದುರಾಸೆಯಿದೆ. ಕೊನೆಯ ಉಸಿರು ಇರುವವರೆಗೂ ಗೌರವಯುತ ಶಾಸಕನಾಗಿರಲು ಇಷ್ಟ ಪಡುತ್ತೇನೆ. ಅನೇಕ ಶಾಸಕರು ಶಾಪಿಂಗ್ ಶಾಸಕರಾಗಿದ್ದಾರೆ ಎಂದರು.
ತಮ್ಮಗೆ ಬೇಕಾದ ಅಧಿಕಾರಿಗಳನ್ನು ಪಡೆಯಲು ಸಾಧ್ಯವಾಗದಿರುವುದು ಅನೇಕ ಶಾಸಕರ ಅಸಮಾಧಾನಕ್ಕೆ ಕಾರಣವಾಗಿದೆ. ಆಡಳಿತಾತ್ಮಕ ತೊಂದರೆಯಾದರೆ ಯಾರನ್ನ ದೂಷಿಸುವುದು? ಯಾವುದೇ ಆಡಳಿತದಲ್ಲಿ ಶಾಸಕರ ಆದ್ಯತೆ ಮೇರೆಗೆ ಐಎಎಸ್, ಐಪಿಎಸ್ ಅಧಿಕಾರಿಗಳನ್ನು ಮುಖ್ಯಮಂತ್ರಿ ನಿಯೋಜಿಸುತ್ತಾರೆಯೇ ಎಂದು ಪ್ರಶ್ನಿಸಿದರು.
ಸಿದ್ದರಾಮಯ್ಯ ಹಾಗೂ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ, ಅವರ ನಡುವೆ ವೈಯಕ್ತಿಕವಾಗಿ ಉತ್ತಮ ಸಂಬಂಧವಿದೆ. ಬಿಜೆಪಿ ರಾಜ್ಯ ಉಸ್ತುವಾರಿ ಮುರಳೀಧರ್ ರಾವ್ ಮತ್ತು ಮಾಜಿ ಉಪಮುಖ್ಯಮಂತ್ರಿ ಈಶ್ವರಪ್ಪ ನಡುವಿನ ಭೇಟಿ ಒಂದು ಅವಕಾಶವಾಗಿತ್ತು. ಅದಕ್ಕಿಂತ ಹೆಚ್ಚು ಏನೂ ಇಲ್ಲ ಎಂದು ಹೇಳಿದ್ದಾರೆ.