ಲಖನೌ:
ಬಿಜೆಪಿ ವಿರುದ್ಧ ಶುಕ್ರವಾರ ತೀವ್ರ ವಾಗ್ದಾಳಿ ನಡೆಸಿದ ಬಿಎಸ್ ಪಿ ನಾಯಕಿ ಮಾಯಾವತಿ ಅವರು, ತಮ್ಮ ಪಕ್ಷದ ಸಂಸ್ಥಾಪಕ ಕಾನ್ಶಿರಾಮ್‌ಗೆ ತಕ್ಷಣ ಭಾರತ ರತ್ನ ನೀಡಬೇಕು, ಇಲ್ಲವೇ ದಲಿತರ ದಾರಿ “ತಪ್ಪಿಸುವುದನ್ನು” ನಿಲ್ಲಿಸಬೇಕು ಎಂದು ಹೇಳಿದ್ದಾರೆ.
ಶಹಜಹಾನ್‌ಪುರ ಬಿಜೆಪಿ ಸಂಸದ ಅರುಣ್ ಕುಮಾರ್ ಸಾಗರ್ ಅವರು ಗುರುವಾರ ಲೋಕಸಭೆಯಲ್ಲಿ ಕಾನ್ಶಿರಾಮ್‌ಗೆ ಭಾರತ ರತ್ನ ನೀಡಬೇಕೆಂದು ಒತ್ತಾಯಿಸಿದರು. ಕಾನ್ಶಿರಾಮ್ ಅವರನ್ನು ‘ಬಹುಜನ ನಾಯಕ’ ಎಂದು ಶ್ಲಾಘಿಸಿದ ಸಾಗರ್, ಬಹುಜನ ಸಮಾಜ ಪಕ್ಷ(ಬಿಎಸ್‌ಪಿ) ಸಂಸ್ಥಾಪಕರು ಒಬ್ಬ ಧೀಮಂತ ರಾಜಕಾರಣಿ ಮತ್ತು ಸಮಾಜ ಸುಧಾರಕರಾಗಿದ್ದರು. ಅವರು ತಮ್ಮ ಇಡೀ ಜೀವನವನ್ನು ದೀನದಲಿತರ ಕಲ್ಯಾಣಕ್ಕಾಗಿ ಮುಡಿಪಾಗಿಟ್ಟರು ಎಂದು ಹೇಳಿದ್ದರು.
ಬಿಜೆಪಿ ಸಂಸದನ ಈ ಹೇಳಿಕೆಗೆ ಕಿಡಿಕಾರಿದ ಬಿಎಸ್‌ಪಿ ಮುಖ್ಯಸ್ಥೆ ಮತ್ತು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮಾಯಾವತಿ ಅವರು, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಕಾನ್ಶಿರಾಮ್‌ಗೆ ಭಾರತ ರತ್ನ ನೀಡಿದರೆ, ಪಕ್ಷ ಅದನ್ನು ಪೂರ್ಣ ಹೃದಯದಿಂದ ಸ್ವಾಗತಿಸುತ್ತದೆ ಎಂದು ಹಿಂದಿಯಲ್ಲಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಯುಪಿಯ ಬಿಜೆಪಿಯ ದಲಿತ ಸಂಸದರೊಬ್ಬರು ಬಿಎಸ್‌ಪಿ ಸಂಸ್ಥಾಪಕ ಶ್ರೀ ಕಾನ್ಶಿರಾಮ್ ಜಿ ಅವರಿಗೆ ಭಾರತ ರತ್ನ ನೀಡಬೇಕೆಂದು ಒತ್ತಾಯಿಸುವ ಬದಲು, ಕೇಂದ್ರದಲ್ಲಿ ತಮ್ಮದೇ ಸರ್ಕಾರ ಅಧಿಕಾರದಲ್ಲಿರುವುದರಿಂದ ಅದನ್ನು ತಕ್ಷಣವೇ ಮಾಡಬೇಕು ಮತ್ತು ಬಿಎಸ್‌ಪಿ ಅದನ್ನು ತುಂಬು ಹೃದಯದಿಂದ ಸ್ವಾಗತಿಸುತ್ತದೆ. ದಲಿತರನ್ನು ದಾರಿತಪ್ಪಿಸುವುದನ್ನು ಬಿಜೆಪಿ ನಿಲ್ಲಿಸಬೇಕು ಎಂದು ಮಾಯಾವತಿ ಹೇಳಿದ್ದಾರೆ.
ಬೃಹತ್ ಜನಸಂಖ್ಯೆ ಹೊಂದಿರುವ ಉತ್ತರ ಪ್ರದೇಶದಂತಹ ಬಡ ಮತ್ತು ಹಿಂದುಳಿದ ರಾಜ್ಯಕ್ಕೆ ಕೇಂದ್ರ ಬಜೆಟ್ ನಲ್ಲಿ ಕಡೆಗಣಿಸಲಾಗಿದೆ ಎಂದು ಮಾಯಾವತಿ ಆರೋಪಿಸಿದ್ದಾರೆ.