ಶಿವಮೊಗ್ಗ:
ನಟ ರಿಷಬ್ ಶೆಟ್ಟಿ ನಟನೆ, ನಿರ್ದೇಶನದ ಬಹುನಿರೀಕ್ಷೆಯ ಕನ್ನಡದ ʼಕಾಂತಾರ ಚಾಪ್ಟರ್ 1′ ಪ್ಯಾನ್ ಇಂಡಿಯಾ ಚಲನಚಿತ್ರಕ್ಕೆ ನಾನಾ ಅಡೆತಡೆಗಳು ಎದುರಾಗುತ್ತಲೇ ಇವೆ. ಇದೀಗ ಕಾಂತಾರ ಚಲನಚಿತ್ರದ ಕಲಾವಿದರೊಬ್ಬರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಕಾಂತಾರ ಚಿತ್ರದ ಶೂಟಿಂಗ್‌ಗಾಗಿ ಕೇರಳದಿಂದ ಆಗಮಿಸಿದ ಕಲಾವಿದರೊಬ್ಬರು ತೀರ್ಥಹಳ್ಳಿ ತಾಲೂಕಿನ ಆಗುಂಬೆಯಲ್ಲಿರುವ ಹೋಂ ಸ್ಟೇಯಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ವಿಜು ವಿ. ಕೆ ಎಂಬ ಕೇರಳದ ತ್ರಿಶೂರ್ ಮೂಲದ ಮಿಮಿಕ್ರಿ ಕಲಾವಿದ ಕಾಂತಾರ ಚಲನಚಿತ್ರದ ಶೂಟಿಂಗ್‌ಗಾಗಿ ಆಗಮಿಸಿದ್ದು, ಆಗುಂಬೆ ಸಮೀಪದ ಹೋಂ ಸ್ಟೇ ಒಂದರಲ್ಲಿ ತಂಗಿದ್ದರು. ನಿನ್ನೆ ರಾತ್ರಿ ಏಕಾಏಕಿ ಎದೆ ನೋವು ಕಾಣಿಸಿಕೊಂಡಿತ್ತು. ತಕ್ಷಣವೇ ಅವರನ್ನು ತೀರ್ಥಹಳ್ಳಿಯ ಆಸ್ಪತ್ರೆಗೆ ರವಾನಿಸುವಾಗ ಮಾರ್ಗ ಮಧ್ಯೆ ಸಾವಿಗೀಡಾಗಿದ್ದಾರೆ. ತೀರ್ಥಹಳ್ಳಿಯ ಜೆ.ಸಿ ಆಸ್ಪತ್ರೆಯಲ್ಲಿ ಮೃತ ದೇಹ ಇರಿಸಲಾಗಿದೆ. ಆಗುಂಬೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಕೇರಳದಿಂದ ಕುಟುಂಬಸ್ಥರು ಬಂದ ಬಳಿಕ ಮುಂದಿನ ಪ್ರಕ್ರಿಯೆ ನೆರವೇರಿಸಲಾಗುವುದು ಎಂದು ತಿಳಿಸಿದ್ದಾರೆ.
ಶೂಟಿಂಗ್ ಆರಂಭದಿಂದಲೇ ಕಾಂತಾರ ಸಿನಿಮಾ ಒಂದಲ್ಲ ಒಂದು ವಿಘ್ನ ಎದುರಿಸುತ್ತಲೇ ಬಂದಿದೆ. ಸಿನಿಮಾದಲ್ಲಿ ನಟಿಸುತ್ತಿದ್ದ ಕೇರಳದ ಜೂನಿಯರ್ ಆರ್ಟಿಸ್ಟ್ ಕಪಿಲ್ ಎಂಬವರು ಸಮೀಪದ ಸೌಪರ್ಣಿಕ ನದಿಗೆ ಈಜಲು ತೆರಳಿ ಮುಳುಗಿ ಮೃತಪಟ್ಟಿದ್ದರು. ಉಡುಪಿ ಜಿಲ್ಲೆಯ ಬೈಂದೂರಿನ ಕೊಲ್ಲೂರಿನಲ್ಲಿ ಈ ದುರಂತ ಸಂಭವಿಸಿತ್ತು. ಚಿತ್ರೀಕರಣದ ಬಿಡುವಿನ ವೇಳೆ ಚಿತ್ರತಂಡದ ಹಲವರು ಕೊಲ್ಲೂರಿನ ಸೌಪರ್ಣಿಕಾ ನದಿಗೆ ಈಜಲು ತೆರಳಿದ್ದು, ತಂಡದಲ್ಲಿ ಕಪಿಲ್ ಇದ್ದರು.
ಇದಾದ ಬಳಿಕ, ಕಾಂತಾರದಲ್ಲಿ ನಟಿಸುತ್ತಿದ್ದ ‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ನಟ ರಾಕೇಶ್ ಪೂಜಾರಿ ನಿಧನರಾಗಿದ್ದರು. ಬೆಳಿಗ್ಗೆ ಕಾಂತಾರ ಸಿನಿಮಾ ಶೂಟ್ ಮುಗಿಸಿ ಸಂಜೆ ಗೆಳೆಯರ ಮದುವೆ ಫಂಕ್ಷನ್ಗೆ ಹೋಗಿದ್ದ ರಾಕೇಶ್‌ಗೆ ಮಧ್ಯರಾತ್ರಿ ಹಾರ್ಟ್ ಅಟ್ಯಾಕ್ ಆಗಿತ್ತು. ನಂತರ ರಿಷಬ್ ಶೆಟ್ಟಿ ರಾಕೇಶ್ ಮನೆಗೆ ತೆರಳಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದರು.ಇದಕ್ಕೂ ಮೊದಲು ಚಿತ್ರತಂಡದ ಕಲಾವಿದರು ಇದ್ದ ಮಿನಿ ಬಸ್ ಅಪಘಾತಕ್ಕೀಡಾಗಿತ್ತು. ಕಲಾವಿದರಿದ್ದ ಬಸ್ ಕೊಲ್ಲೂರು ವ್ಯಾಪ್ತಿಯಲ್ಲಿ ನ. 24ರಂದು ಪಲ್ಟಿಯಾಗಿ ಹಲವರು ಗಾಯಗೊಂಡಿದ್ದರು. ಅದಕ್ಕೂ ಮೊದಲು ದೈವ ನರ್ತಕರು ಚಿತ್ರಕ್ಕೆ ವಿರೋಧ ವ್ಯಕ್ತಪಡಿಸಿದ್ದರು.
ಸಿನಿಮಾ ತಂಡ ಈ ವರ್ಷಾರಂಭದಲ್ಲಿ ಹಾಸನದಲ್ಲಿ ಶೂಟಿಂಗ್ ಶುರು ಮಾಡಿತ್ತು. ಶೂಟಿಂಗ್ ಸಮಯದಲ್ಲಿ ಪರಿಸರಕ್ಕೆ ಹಾನಿ ಮಾಡಿದ ಆರೋಪ ಕೇಳಿ ಬಂದಿತ್ತು. ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಹೇರೂರು ಗ್ರಾಮದ ಸಮೀಪ ಇರುವ ಗವಿಗುಡ್ಡ ಪ್ರದೇಶದ ಡೀಮ್ಡ್ ಅರಣ್ಯ ಹಾಗೂ ಗೋಮಾಳ ಜಮೀನಿನಲ್ಲಿ ಚಿತ್ರೀಕರಣ ನಡೆಸಲು ʼಕಾಂತಾರ: ಚಾಪ್ಟರ್ 1ʼ ತಂಡ ಅನುಮತಿ ಪಡೆದುಕೊಂಡಿತ್ತು. ಅಲ್ಲಿ ಬೀಡು ಬಿಟ್ಟ ತಂಡದವರು ಅಕ್ರಮವಾಗಿ ಮರ ಕಡಿದು, ಸ್ಫೋಟಕ ಬಳಸಿ, ನಿಯಮ ಉಲ್ಲಂಘನೆ ಮಾಡಿದ್ದಾರೆ ಎಂದು ಕೆಲ ಸ್ಥಳೀಯರು ಆರೋಪಿಸಿದ್ದರು. ಇದರಿಂದ ಚಿತ್ರೀಕರಣ ಸ್ಥಗಿತಗೊಳ್ಳುವ ಭೀತಿ ಎದುರಾಗಿತ್ತು. ತನಿಖೆ ಕೈಗೊಂಡ ಅಧಿಕಾರಿಗಳು ಕ್ಲೀನ್‌ಚಿಟ್ ನೀಡಿದ್ದರು.
ಹೀಗೆ ಒಂದಲ್ಲ ಒಂದು ವಿಘ್ನ ಎದುರಿಸುತ್ತಲೇ ಬಂದ ಚಿತ್ರತಂಡ ಇದೀಗ ಕೊನೆಯ ಹಂತದ ತಯಾರಿಯಲ್ಲಿ ತೊಡಗಿಸಿಕೊಂಡಿದೆ. ಸಿನಿಮಾ ಈ ವರ್ಷದ ಅ. 2ರಂದು ಸಿನಿಮಾ ತೆರೆಗೆ ಬರಲಿದೆ ಎಂದು ಚಿತ್ರತಂಡ ಈಗಾಗಲೇ ತಿಳಿಸಿದೆ.








