ಬೆಂಗಳೂರು:
ಸದ್ಯ ಸಿನಿಪ್ರಿಯರ ಕುತೂಹಲ ಕೆರಳಿಸಿರುವ ಸ್ಯಾಂಡಲ್ವುಡ್ನ ʼಕಾಂತಾರ: ಚಾಪ್ಟರ್ 1ʼ ಹೊಸದೊಂದು ದಾಖಲೆ ಬರೆಯುವ ಎಲ್ಲ ಲಕ್ಷಣಗಳು ಕಂಡುಬರುತ್ತಿವೆ. ಹೊಂಬಾಳೆ ಫಿಲ್ಮ್ಸ್ ಅದ್ಧೂರಿಯಾಗಿ ನಿರ್ಮಿಸುತ್ತಿರುವ ಈ ಚಿತ್ರವನ್ನು ನಿರ್ದೇಶಿಸುವ ಜತೆಗೆ ನಾಯಕನಾಗಿಯೂ ರಿಷಬ್ ಶೆಟ್ಟಿ ಕಾಣಿಸಿಕೊಳ್ಳುತ್ತಿದ್ದಾರೆ. ಇದು ಅಕ್ಟೋಬರ್ 2ರಂದು ಸುಮಾರು 30 ದೇಶಗಳಲ್ಲಿ, 7 ಭಾಷೆಗಳಲ್ಲಿ ತೆರೆ ಕಾಣಲಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸ ಭರದಿಂದ ಸಾಗುತ್ತಿದೆ. ಈ ಮಧ್ಯೆ ಚಿತ್ರದಲ್ಲಿ ಕೆಲಸ ಮಾಡಿರುವ ಹಾಲಿವುಡ್ ತಂತ್ರಜ್ಞ ಟೋಡರ್ ಲಝರೋವ್ ಸಿನಿಮಾದ ಬಗ್ಗೆ ಮೆಚ್ಚುಗೆ ಸೂಚಿಸಿದ್ದು, ಈಗಾಗಲೇ ಬ್ಲಾಕ್ ಬಸ್ಟರ್ ಎನಿಸಿಕೊಂಡಿದೆ ಎಂದಿದ್ದಾರೆ. ಆ ಮೂಲಕ ನಿರೀಕ್ಷೆಯನ್ನು ಇನ್ನಷ್ಟು ಹೆಚ್ಚಿಸಿದ್ದಾರೆ.
ಜುಜಿ ಎಂದು ಕರೆಯಲ್ಪಡುವ ಸ್ಟಂಟ್ ಡೈರಕ್ಟರ್ ಟೋಡರ್ ಲಝರೋವ್ ದಶಕಗಳಿಂದ ಹಾಲಿವುಡ್ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹಾಲಿವುಡ್ನ ʼಎಕ್ಸ್ಪೆಂಡೆಬಲ್ಸ್ 2ʼ, ಆಸ್ಕರ್ ಪ್ರಶಸ್ತಿ ವಿಜೇತ ʼಝೀರೋ ಡಾರ್ಕ್ ಥರ್ಟಿʼ, ಬ್ರಾಡ್ ಪಿಟ್ ಅವರ ʼಟ್ರಾಯ್ʼ ಮತ್ತಿತರ ಚಿತ್ರಗಳಿಗೆ ಆ್ಯಕ್ಷನ್ ಕೊರಿಯಾಗ್ರಾಫರ್ ಆಗಿ ದುಡಿದಿದ್ದಾರೆ. ಜಾಗತಿಕ ಮಟ್ಟದಲ್ಲಿ ಜನಪ್ರಿಯತೆ ಗಳಿಸಿರುವ ಅವರು ಇದೀಗ ʼಕಾಂತಾರ” ಚಾಪ್ಟರ್ 1ʼ ಚಿತ್ರದಲ್ಲಿ ಕಾರ್ಯ ನಿರ್ವಹಿಸಿರುವ ಬಗ್ಗೆ ಹೆಮ್ಮೆಯಿಂದ ಮಾತನಾಡಿದ್ದಾರೆ. ಟೋಡರ್ ಲಝರೋವ್ ಈ ಹಿಂದೆಯೂ ಭಾರತೀಯ ಚಿತ್ರರಂಗದಲ್ಲಿ ಕೆಲಸ ಮಾಡಿದ್ದಾರೆ. ಎಸ್.ಎಸ್. ರಾಜಮೌಳಿ ಅವರ ʼಆರ್ಆರ್ಆರ್ʼ, ಕಂಗನಾ ರಾಣಾವತ್ ಅವರ ʼಮಣಿಕರ್ಣಿಕಾʼ ಮುಂತಾದ ಚಿತ್ರಗಳ ಸಾಹಸ ದೃಶ್ಯ ಸಂಯೋಜಿಸಿದ್ದಾರೆ.
ʼ2017ರಲ್ಲಿ ಭಾರತೀಯ ಚಲನಚಿತ್ರದಲ್ಲಿ ಕೆಲಸ ಮಾಡಲು ಆರಂಭಿಸಿದ ಬಳಿಕ ಅನೇಕ ಉತ್ತಮ ಸಿನಿಮಾಗಳ ಭಾಗವಾಗಿದ್ದೇನೆ. ನನ್ನ ಮೊದಲ ಭಾರತೀಯ ಚಿತ್ರ ʼಮಣಿಕರ್ಣಿಕಾʼ. ರಾಜಮೌಳಿ ಅವರೊಂದಿಗಿನ ʼಆರ್ಆರ್ಆರ್ʼ ನನ್ನ ಪಾಲಿನ ವಿಶೇಷ ಚಿತ್ರ. ಇದರಲ್ಲಿ ಸ್ಟಂಟ್ ನಿರ್ದೇಶನ ಮಾತ್ರವಲ್ಲ ಕ್ಯಾಮರಾ ಕೆಲಸವನ್ನು ನಿರ್ವಹಿಸಿದ್ದೇನೆ. ಬಲ್ಗೇರಿಯಾದಲ್ಲಿ ಚಿತ್ರೀಕರಣ ನಡೆಸಿದ ಅನುಭವ ಮರೆಯಲು ಸಾಧ್ಯವಿಲ್ಲ. ಇದುವರೆಗೆ ಭಾರತದ 10 ಚಿತ್ರಗಳಲ್ಲಿ ಕಾರ್ಯ ನಿರ್ವಹಿಸಿದ್ದೇನೆ. ಇದರ ಅನುಭವ ಜೀವನಕ್ಕಿಂತಲೂ ದೊಡ್ಡದುʼʼ ಎಂದು ತಿಳಿಸಿದ್ದಾರೆ.
ಇನ್ನು ʼಕಾಂತಾರ ಚಾಪ್ಟರ್ 1ʼ ಸಿನಿಮಾದ ಬಗ್ಗೆ ಅವರು ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ʼಕಾಂತಾರ: ಚಾಪ್ಟರ್ 1ʼ ಚಿತ್ರದ ಕ್ಲೈಮ್ಯಾಕ್ಸ್ ಮತ್ತು 2 ಮುಖ್ಯ ಆ್ಯಕ್ಷನ್ ಭಾಗಗಳನ್ನು ಟೋಡರ್ ನಿರ್ದೇಶಿಸಿದ್ದಾರೆ. ರಿಷಬ್ ಶೆಟ್ಟಿ ಜತೆಗೆ ಕೆಲ ಮಾಡಿದ ಅನುಭವವನ್ನು ತೆರೆದಿಟ್ಟಿದ್ದಾರೆ. ʼʼಫೋನ್ ಕಾಲ್ ಮೂಲಕ ಈ ʼಕಾಂತಾರʼ ಜತೆಗಿನ ಪ್ರಯಾಣ ಆರಂಭವಾಯ್ತು. ರಿಷಬ್ ಕಡೆಯಿಂದ ಕರೆ ಬಂದಾಗ ನಾನು ಹೈದರಾಬಾದ್ನಲ್ಲಿದ್ದೆ. ಕುಂದಾಪುರಕ್ಕೆ ತೆರಳಿದಾಗ ಅದಾಗಲೇ ಶೂಟಿಂಗ್ ಆರಂಭವಾಗಿತ್ತು. ರಿಷಬ್ ಪರಿಶುದ್ಧ ಹೃದಯದ ವ್ಯಕ್ತಿ ಎನ್ನುವುದು ಅವರನ್ನು ನೋಡಿದಾಗಲೇ ಗೊತ್ತಾಯ್ತು.
ಕ್ಲೈಮ್ಯಾಕ್ಸ್ ಅನ್ನು ಅವರು ವಿವರಿಸಿದಾಗ ಅವರ ಕಲ್ಪನೆಯ ಬಗ್ಗೆ ತಿಳಿದು ಬೆರಗಾದೆ. ಅವರ ನಿರ್ದೇಶಕನಾಗಿ ಮಾತ್ರವಲ್ಲ ನಟನಾಗಿ ಪಾತ್ರದಲ್ಲಿ ಜೀವಿಸಿದ್ದಾರೆ. ಹೀಗಾಗಿ ಈ ಪ್ರಾಜೆಕ್ಟ್ ಮಾಡಲೇ ಬೇಕೆಂದು ನಿರ್ಧರಿಸಿದೆ. ಇದಕ್ಕಾಗಿ ಮೊದಲೇ ಒಪ್ಪಿಕೊಂಡ 2 ಚಿತ್ರಗಳನ್ನು ಕೈಬಿಟ್ಟೆ. ರಿಷಬ್ಗಾಗಿ ಇದನ್ನು ಮಾಡಲು ನಿರ್ಧರಿಸಿದೆ. ಮೊದಲ ನೋಟದಲ್ಲೇ ನನ್ನ ಕುಟುಂಬವನ್ನು ಭೇಟಿಯಾದ ಭಾವನೆ ಮೂಡಿತ್ತು. ಆರ್ಆರ್ಆರ್ ಚಿತ್ರದಲ್ಲಿ ಕೆಲಸ ಮಾಡಿದಂತಹ ಅನುಭವವಾಯ್ತುʼʼ ಎಂದು ವಿವರಿಸಿದ್ದಾರೆ.
ಚಿತ್ರದಲ್ಲಿನ ಆ್ಯಕ್ಷನ್ ದೃಶ್ಯಗಳು ಅತ್ಯದ್ಭುತವಾಗಿ ಮೂಡಿ ಬಂದಿದ್ದು, ಚಿತ್ರದಲ್ಲಿ ಹೈಲೈಟ್ ಆಗಿಲಿದೆ. ಕ್ಲೈಮ್ಯಾಕ್ಸ್ ವಿಭಿನ್ನವಾಗಿದೆ. ಪಾತ್ರಗಳನ್ನು ತೋರಿಸಿರುವ ರೀತಿ ಬೆರಗುಗೊಳಿಸುವಂತಿದೆ. ಆ್ಯಕ್ಷನ್ ಜತೆ ಜತೆಗೆ ಕಥೆಯೂ ಸಾಗುತ್ತದೆ. ರಿಷಬ್ ಅವರ ಕನಸನ್ನು ನನಸಾಗಿಸಲು ನಾನು ಜಾಗತಿಕ ಮಟ್ಟದ ಸ್ಟಂಟ್ ಮಾಸ್ಟರ್ಗಳನ್ನು ಕರೆಯಸಿಕೊಂಡಿದ್ದೆ. ಅಲ್ಲದೆ ಭಾರತದ ನೂರಾರು ಸ್ಟಂಟ್ ಮ್ಯಾನ್ಗಳೂ ಕೈಜೋಡಿಸಿದ್ದಾರೆ. ಕ್ಲೈಮ್ಯಾಕ್ಸ್ ದೃಶ್ಯವನ್ನೇ 28 ದಿನಗಳ ಕಾಲ ಚಿತ್ರೀಕರಿಸಿದ್ದೇವೆʼʼ ಎಂದು ತಿಳಿಸಿದ್ದಾರೆ.
ʼʼಕಾಂತಾರ: ಚಾಪ್ಟರ್ 1ʼ ಭಾರತೀಯ ಚಿತ್ರರಂಗದ ಗಡಿಯನ್ನು ಇನ್ನಷ್ಟು ವಿಸ್ತರಿಸಲಿದೆ. ನನ್ನ ಪ್ರಕಾರ ಇದು ಈಗಾಗಲೇ ಬ್ಲಾಕ್ ಬಸ್ಟರ್ ಎನಿಸಿಕೊಂಡಿದೆ. ಆ್ಯಕ್ಷನ್ ದೃಶ್ಯಗಳಿಂದ ಮಾತ್ರವಲ್ಲ ಇದರ ಕಥೆ, ಆಳದಿಂದ ಗಮನ ಸೆಳೆಯಲಿದೆ. ಇದು ಜಾಗತಿಕ ಪ್ರೇಕ್ಷಕರಿಗಾಗಿ ನಿರ್ಮಾಣಗೊಂಡಿದೆ. ಚಿತ್ರ ಜಾಗತಿಕ ಗುಣಮಟ್ಟದಲ್ಲಿದೆʼʼ ಎಂದು ಟೋಡರ್ ಲಝರೋವ್ ವಿವರಿಸಿದ್ದಾರೆ.
