ವಿದ್ಯುತ್‌ ಸ್ವಾವಲಂಭನೆಯತ್ತ ಕಂಠೀರವ ಸ್ಟೇಡಿಯಂ..!

ಬೆಂಗಳೂರು

      ಐದೂವರೆ ಕೋಟಿ ವೆಚ್ಚದಲ್ಲಿ ಶ್ರೀ ಕಂಠೀರವ ಒಳಾಂಗಣ ಕ್ರೀಡಾಂಗಣದ ಮೇಲ್ಛಾವಣಿಗರ ವಾಟರ್ ಪ್ರೂಫಿಂಗ್ ಅಳವಡಿಸಲಾಗಿದೆ ಎಂದು ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ.ನಾರಾಯಣಗೌಡ ಅವರು ತಿಳಿಸಿದರು. ಬೆಂಗಳೂರಿನ ಶ್ರೀ ಕಂಠೀರವ ಒಳಾಂಗಣ ಕ್ರೀಡಾಂಗಣ ಮೇಲ್ಛಾವಣಿಯ ಭಾಗದಲ್ಲಿ ನೀರು ಸೋರಿಕೆಯಾಗುತ್ತಿದ್ದರಿಂದ ಬಿಎಂಎಸ್ ಎಂಜಿನಿಯರಿಂಗ್ ಕಾಲೇಜು ಅವರಿಂದ ತಾಂತ್ರಿಕ ಸಲಹೆ ಪಡೆದು ಕ್ರಮ ಕೈಗೊಳ್ಳಲಾಗಿದೆ. 5.64 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಕಾಮಗಾರಿ ಪೂರ್ಣಗೊಳಿಸಲಾಗಿದೆ.

      ಇದರ ಜೊತೆಗೆ ಕಂಠೀರವ ಹೊರಾಂಗಣ ಕ್ರೀಡಾಂಗಣದ ಮೇಲ್ಛಾವಣಿಯ ಮೇಲೆ ಸೋಲಾರ್ ಪ್ಯಾನಲ್ ಅಳವಡಿಸಲಾಗಿದೆ. ಟಾಟಾ ಸೋಲಾರ್ ಬಿ.ಪಿ ಕಂಪನಿಯ 48.60 ಕೀಲೋ ವ್ಯಾಟ್ ಸಾಮರ್ಥ್ಯದ 90 ಸೋಲಾರ್ ಪ್ಯಾನಲ್‌ಗಳನ್ನು ಜೋಡಿಸಲಾಗಿದ್ದು, ಪ್ರತಿದಿನ 192 ಯೂನಿಟ್ ವಿದ್ಯುತ್ ಉತ್ಪಾದನೆಯಾಗುವ ನಿರೀಕ್ಷೆ ಇದೆ. ಕಂಠೀರವ ಹೊರಾಂಗಣ ಕ್ರೀಡಾಂಗಣಕ್ಕಾಗಿ ಸುಮಾರು 70 ಕಿಲೋ ವ್ಯಾಟ್ ವಿದ್ಯುತ್ ಅವಶ್ಯಕತೆ ಇದೆ.

     ಸೋಲರ್‌ನಿಂದ ಉತ್ಪಾದನೆಯಾಗುವ ವಿದ್ಯುತ್ ಬಳಸಿಕೊಂಡು ಹೆಚ್ಚುವರಿ ವಿದ್ಯುತ್‌ನ್ನು 1 ಯೂನಿಟ್‌ಗೆ 3.19 ಪೈಸೆಯಂತೆ ಬೆಸ್ಕಾಂ ಕಂಪನಿ ಜೊತೆ ಒಡಂಬಡಿಕೆ ಮಾಡಿಕೊಳ್ಳಲಾಗುತ್ತಿದೆ. ಸೋಲಾರ್ ಪ್ಯಾನಲ್ ಅಳವಡಿಸಿರುವುದರಿಂದ ವಿದ್ಯುತ್ ಬಿಲ್‌ನಲ್ಲಿ ಕ್ರೀಡಾ ಇಲಾಖೆಗೆ ಐದಾರು ಲಕ್ಷ ರೂಪಾಯಿಯಷ್ಟು ಉಳಿಕೆ ಆಗಲಿದೆ.

    ಕಂಠೀರವ ಒಳಾಂಗಣ ಕ್ರೀಡಾಂಗಣದ ಮೇಲ್ಛಾವಣಿಯ ಸಮರ್ಪಕ ನಿರ್ವಹಣೆ ಇಲ್ಲದ ಕಾರಣ ಕೆಲವು ಭಾಗಗಳಲ್ಲಿ ಅರಳಿ ಗಿಡಗಳು ಹುಟ್ಟಿಕೊಂಡು ಕಟ್ಟಡಕ್ಕೆ ಧಕ್ಕೆಯಾಗುವ ಸಾಧ್ಯತೆ ಇತ್ತು. ಅಲ್ಲದೇ ಮಳೆ ಬಂದ ಸಂದರ್ಭದಲ್ಲಿ ನೀರು ಸೋರಿ ಅಸ್ತವ್ಯಸ್ತವಾಗುತ್ತಿತ್ತು. ಇದನ್ನು ಮನಗಂಡು ಕೂಡಲೇ ದುರಸ್ತಿಗೊಳಿಸುವಂತೆ ಸೂಚಿಸಲಾಗಿತ್ತು.

    ಬಿಎಂಎಸ್ ಎಂಜಿನಿಯರಿಂಗ್ ಕಾಲೇಜುರವರಿಂದ ತಾಂತ್ರಿಕ ಸಲಹೆ ಪಡೆದು ಸುಮಾರು ನೀರು ಸೋರದಂತೆ ದುರಸ್ತಿಗೊಳಿಸಲಾಗಿದೆ. ಗಿಡಗಂಟಿಗಳನ್ನು ತೆರವುಗೊಳಿಸಲಾಗಿದೆ. ಅಲ್ಲದೇ ಮುಂದಿನ ದಿನಗಳಲ್ಲಿ ಈ ರೀತಿ ಆಗದಂತೆ ಎಚ್ಚರಿಕೆವಹಿಸಿ, ಸೂಕ್ತ ನಿರ್ವಹಣೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಇದರ ಜೊತೆಗೆ ಕಂಠೀರವ ಕ್ರೀಡಾಂಗಣ ಗ್ಯಾಲರಿ ಮೇಲೆ ಸೋಲಾರ್ ಪ್ಯಾನಲ್ ಅಳವಡಿಸಲಾಗಿದೆ. ಇದರಿಂದ ವಿದ್ಯುತ್ ಬಳಕೆ ಕಡಿಮೆಯಾಗಲಿದ್ದು, ಇಲಾಖೆಗೆ ಉಳಿತಾಯವಾಗಲಿದೆ ಎಂದು ಸಚಿವ ಡಾ.ನಾರಾಯಣಗೌಡ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap