ಗದಗ:
ಕಪ್ಪತಗುಡ್ಡದಲ್ಲಿನ ಎಲ್ಲಾ 28 ಗಣಿಗಾರಿಕೆ ಪ್ರಸ್ತಾವನೆಗಳನ್ನು ತಿರಸ್ಕರಿಸಬೇಕು ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ಒತ್ತಾರಿಯಿದ್ದಾರೆ. ಇತ್ತೀಚೇಗೆ ಮುಖ್ಯಮಂತ್ರಿ ಸಿಎಂ ಸಿದ್ದರಾಮಯ್ಯ ಸಭೆ ನಡೆಸಿ ಗಣಿಗಾರಿಕೆ ಪ್ರಸ್ತಾವನೆಗಳನ್ನು ಮುಂದೂಡಿದ್ದರು.
ಇದೀಗ ಬಸವರಾಜ ಹೊರಟ್ಟಿ ಸಿಎಂಗೆ ಪತ್ರ ಬರೆದು ಕಟ್ಟುನಿಟ್ಟಿನ ಕ್ರಮ ಕೈಗೊಂಡು ಗಣಿಗಾರಿಕೆ ಪ್ರಸ್ತಾವನೆಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸಿದ್ದಾರೆ. ಈ ವಾರ ತೋಂಟದಾರ್ಯ ಮಠಾಧೀಶರು, ಸಾಮಾಜಿಕ ಕಾರ್ಯಕರ್ತರು, ಪರಿಸರವಾದಿಗಳು ಡಿಸಿ ಮೂಲಕ ಸಿಎಂಗೆ ಮನವಿ ಪತ್ರ ಸಲ್ಲಿಸಿ ಗಣಿಗಾರಿಕೆ ಪ್ರಸ್ತಾವ ರದ್ದುಗೊಳಿಸುವಂತೆ ಮನವಿ ಮಾಡಿದ್ದಾರೆ. ಕಪ್ಪತಗುಡ್ಡದಲ್ಲಿ ಗಣಿಗಾರಿಕೆ ನಡೆಸಬಾರದು ಎಂದು ಗದಗ ಮತ್ತು ಸುತ್ತಮುತ್ತಲಿನ ಅನೇಕ ಸಾಮಾಜಿಕ ಕಾರ್ಯಕರ್ತರು, ನ್ಯಾಯಮೂರ್ತಿಗಳು ಮತ್ತು ಪರಿಸರವಾದಿಗಳು ಒತ್ತಾಯಿಸುತ್ತಿದ್ದಾರೆ ಎಂದು ಪತ್ರದಲ್ಲಿ ಹೇಳಲಾಗಿದೆ. ಆದರೂ ಉದ್ಯಮಿಗಳು ಗಣಿಗಾರಿಕೆಯ ಪ್ರಯತ್ನ ಕೈ ಬಿಟ್ಟಿಲ್ಲ. ಈ ನಿಟ್ಟಿನಲ್ಲಿ ಗಣಿಗಾರಿಕೆ ಆರಂಭಿಸಲು 28 ಪ್ರಸ್ತಾವನೆಗಳು ಸರಕಾರದ ಮುಂದೆ ಬಂದಿವೆ.
ವನ್ಯಜೀವಿ ಅಭಯಾರಣ್ಯ ಎಂದು ಘೋಷಣೆಯಾಗಿರುವ ಕಪ್ಪತ್ತಗುಡ್ಡದಿಂದ 10 ಕಿ.ಮೀ ವ್ಯಾಪ್ತಿಯಲ್ಲಿ ಗಣಿಗಾರಿಕೆ ಆರಂಭಿಸುವ ಪ್ರಸ್ತಾವನೆಯನ್ನು ಸಿಎಂ ಸಿದ್ದರಾಮಯ್ಯ ಮುಂದೂಡಿರುವುದು ಸ್ವಾಗತಾರ್ಹ, ಇದು ಕೊಂಚ ಸಮಾಧಾನ ತಂದಿದೆ ಎಂದು ಸಿಎಂಗೆ ಬರೆದ ಪತ್ರದಲ್ಲಿ ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದ್ದಾರೆ. ಆದರೆ ಈ ಎಲ್ಲ ಪ್ರಸ್ತಾವನೆಗಳನ್ನು ತಿರಸ್ಕರಿಸಿ, ಈ ಭಾಗದಲ್ಲಿ ಗಣಿಗಾರಿಕೆ ಅಥವಾ ಇತರೆ ಯಾವುದೇ ಕೈಗಾರಿಕೆ ತೆರೆಯಲು ಅವಕಾಶ ನೀಡುವುದಿಲ್ಲ ಎಂದು ಆದೇಶ ಹೊರಡಿಸಬೇಕು.
ಕೆಲವೇ ಕೆಲವು ಪ್ರಸ್ತಾವನೆಗಳನ್ನು ಮುಂದಿಟ್ಟುಕೊಂಡು ಕರ್ನಾಟಕದ ಜನತೆಗೆ ಹಾಗೂ ಪರಿಸರ ಹೋರಾಟಗಾರರಿಗೆ ಸರಕಾರದ ಮೇಲೆ ನಂಬಿಕೆ ಇಲ್ಲದೇ ಅನುಮಾನ ಮೂಡಿಸಿರುವುದು ವಿಷಾದನೀಯ. ಈ ಭಾಗದ ಏಕೈಕ ಗುಡ್ಡಗಾಡು ಕಪ್ಪತ್ತಗುಡ್ಡವನ್ನು ಉಳಿಸುವ ನಿಟ್ಟಿನಲ್ಲಿ ಸಿಎಂ ದಿಟ್ಟ ಹೆಜ್ಜೆಯನ್ನಿಟ್ಟು ಕಪ್ಪತ್ತಗುಡ್ಡ ಸಂರಕ್ಷಣೆಗೆ ಎಲ್ಲ ಪ್ರಸ್ತಾವನೆಗಳನ್ನು ರದ್ದುಗೊಳಿಸಿ ಸ್ಪಷ್ಟ ಆದೇಶ ನೀಡಬೇಕು. ಸಿಎಂ ಸಿದ್ದರಾಮಯ್ಯ ದಿಟ್ಟ ಹೆಜ್ಜೆ ಇಟ್ಟ ನಂತರ ಉತ್ತರ ಕರ್ನಾಟಕದ ಜನರಿಂದ ವಿಶೇಷ ಪ್ರೀತಿ, ಗೌರವ ಗಳಿಸಲಿದ್ದಾರೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಕಪ್ಪತಗುಡ್ಡವನ್ನು ಸೂಕ್ಷ್ಮ ವಲಯ ಎಂದು ಸರ್ಕಾರ ಯಾವಾಗಲೂ ಪ್ರತಿಪಾದಿಸುತ್ತಿದೆ, ಆದ್ದರಿಂದ ಆ ಪ್ರದೇಶದಲ್ಲಿ ಯಾವುದೇ ಗಣಿಗಾರಿಕೆ ನಡೆಸದಂತೆ ಸ್ಪಷ್ಟ ಆದೇಶ ನೀಡಬೇಕು. ಕೇವಲ ಪ್ರಸ್ತಾಪಗಳನ್ನು ತಿರಸ್ಕರಿಸುವುದು ಜನಸಾಮಾನ್ಯರಲ್ಲಿ ಆತಂಕ ಮತ್ತು ಅನುಮಾನಗಳನ್ನು ಉಂಟುಮಾಡುತ್ತದೆ. ಕಪ್ಪತಗುಡ್ಡ ಶ್ರೀಮಂತ ಜೀವವೈವಿಧ್ಯವನ್ನು ಹೊಂದಿದ್ದು, ದೇಶದ ಅಮೂಲ್ಯ ಆಸ್ತಿಯಾಗಿದೆ ಎಂದು ಹೊರಟ್ಟಿ ಪತ್ರದಲ್ಲಿ ಬರೆದಿದ್ದಾರೆ.
