ಉತ್ತರ ಪ್ರದೇಶ
ಸರ್ಗಂಜ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕರಣ್ ಭೂಷಣ್ ಸಿಂಗ್ ಅವರ ಬೆಂಗಾವಲು ವಾಹನವು ಢಿಕ್ಕಿ ಹೊಡೆದ ಪರಿಣಾಮ, ಇಬ್ಬರು ಬಾಲಕರು ಮೃತಪಟ್ಟು, ಓರ್ವ ವ್ಯಕ್ತಿ ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದ ಗೊಂಡಾ ಜಿಲ್ಲೆಯ ಕರ್ನಲ್ ಗಂಜ್-ಹುಝೂರ್ ಪುರ್ ರಸ್ತೆಯಲ್ಲಿ ನಡೆದಿದೆ.
ಘಟನೆ ನಡೆದ ಕೂಡಲೇ ಸ್ಥಳದಲ್ಲಿ ದೊಡ್ಡ ಸಂಖ್ಯೆಯ ಜನಸಂದಣಿ ಜಮಾವಣೆಗೊಂಡಿದ್ದು, ಪೊಲೀಸರು ಅಪಘಾತವೆಸಗಿದ ಕಾರನ್ನು ವಶಪಡಿಸಿಕೊಂಡಿದ್ದಾರೆ. ಪೊಲೀಸ್ ಮೂಲಗಳ ಪ್ರಕಾರ, ಅಪಘಾತವೆಸಗಿದ ಕಾರು ಬಿಜೆಪಿ ಅಭ್ಯರ್ಥಿ ಕರಣ್ ಸಿಂಗ್ ಭೂಷಣ್ ಅವರ ಬೆಂಗಾವಲು ಪಡೆಗೆ ಸೇರಿದೆ.ಅಪಘಾತ ನಡೆದ ಸಂದರ್ಭದಲ್ಲಿ ಕರಣ್ ಭೂಷಣ್ ಸಿಂಗ್ ಅವರು ಕಾರಿನಲ್ಲಿದ್ದರೆ ಎಂಬ ಕುರಿತು ಸದ್ಯ ತನಿಖೆ ನಡೆಯುತ್ತಿದೆ. ಎಫ್ ಐ ಆರ್ ನಲ್ಲಿ ಅವರ ಹೆಸರನ್ನು ಸೇರಿಸಲಾಗಿಲ್ಲ ಎಂದು ಹೇಳಲಾಗಿದೆ.
ಈ ಕುರಿತು ದಾಖಲಾಗಿರುವ ದೂರನ್ನು ಆಧರಿಸಿ ಕರ್ನಲ್ ಗಂಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದರ ಬೆನ್ನಿಗೇ ಕ್ರಮ ಕೈಗೊಂಡಿರುವ ಪೊಲೀಸರು, ಕಾರು ಹಾಗೂ ಚಾಲಕನನ್ನು ತಮ್ಮ ವಶಕ್ಕೆ ಪಡೆದಿದ್ದಾರೆ.
ಘಟನೆಯಿಂದ ಆಕ್ರೋಶಗೊಂಡ ಸ್ಥಳೀಯರು ಹಾಗೂ ಸಂತ್ರಸ್ತರ ಕುಟುಂಬ ಸದಸ್ಯರೊಂದಿಗೆ ರಸ್ತೆ ತಡೆ ನಡೆಸಿ ಅಪಘಾತಕ್ಕೆ ಕಾರಣರಾದವರನ್ನು ಬಂಧಿಸುವಂತೆ ಒತ್ತಾಯಿಸಿದರು.ಹಿರಿಯ ಪೊಲೀಸ್ ಅಧಿಕಾರಿಗಳು ಪ್ರತಿಭಟನಾಕಾರರನ್ನು ಸಮಾಧಾನಪಡಿಸಿ, ಶೀಘ್ರ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳದಲ್ಲಿ ಪೊಲೀಸ್ ಪಡೆಯನ್ನು ನಿಯೋಜಿಸಲಾಗಿದ್ದು, ಸದ್ಯ ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿಯು ನಿಯಂತ್ರಣದಲ್ಲಿದೆ ಎಂದು ಹೇಳಲಾಗಿದೆ.