ಕೆಲಸದ ವೇಳೆ ಕುಸಿದುಬಿದ್ದು ಕಾರ್ಮಿಕ ಸಾವು….!

ಮಂಗಳೂರು:

   ತೀವ್ರ ಅಸ್ವಸ್ಥಗೊಂಡು ಕೆಲಸ ಮಾಡುತ್ತಿದ್ದ ಸ್ಥಳದಲ್ಲಿಯೇ ಕುಸಿದು ಬಿದ್ದ ಮೃತಪಟ್ಟ ಕಾರ್ಮಿಕನ ಮೃತದೇಹವನ್ನು ಪಿಕಪ್ ವಾಹನದಲ್ಲಿ ತಂದು, ಆತನ ಮನೆಯ ಸಮೀಪದ ರಸ್ತೆ ಬದಿಯಲ್ಲಿ ಇಟ್ಟುಹೋದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಚಿಕ್ಕಮುಡ್ನೂರು ಗ್ರಾಮದಲ್ಲಿ ಶನಿವಾರ ನಡೆದಿದೆ.

   ಮೃತ ವ್ಯಕ್ತಿಯನ್ನು ಸಾಲ್ಮರ ತಾರಿಗುಡ್ಡೆ ನಿವಾಸಿ ಶಿವಪ್ಪ (69) ಎಂದು ಗುರುತಿಸಲಾಗಿದ್ದು, ಇವರು ಸಾಲ್ಮರ ಕೆರೆಮೂಲೆ ನಿವಾಸಿ ವುಡ್‌ ಸಂಸ್ಥೆಯೊಂದರ ಮಾಲೀಕ ಹೆನ್ರಿ ತಾವ್ರೋ ಎಂಬುವರ ಗಿರಣಿಯಲ್ಲಿ ಕೆಲಸ ಮಾಡುತ್ತಿದ್ದರು.ಶಿವಪ್ಪ ಅವರನ್ನು ಶನಿವಾರ ಬೆಳಗ್ಗೆ ಸ್ಟಾನಿ ಎಂಬಾತ ಕರೆದುಕೊಂಡು ಹೋಗಿದ್ದಾನೆ. ಆದರೆ ಸಂಜೆ ವೇಳೆ ಶಿವಪ್ಪ ಅವರ ಮೃತದೇಹವನ್ನು ಪಿಕಪ್‌ನಲ್ಲಿ ತಂದು ಮನೆ ಮುಂಭಾಗದ ರಸ್ತೆಯಲ್ಲಿ ಬಿಟ್ಟು ತೆರಳಿದ್ದಾರೆಂದು ಮನೆ ಮಂದಿ ಹಾಗೂ ಸ್ಥಳೀಯರು ಆರೋಪಿಸಿದ್ದಾರೆ.

   ಶಿವಪ್ಪ ಅವರು ಹೆನ್ರಿಯೊಂದಿಗೆ ಪುತ್ತೂರಿನ ಹೊರಭಾಗದಲ್ಲಿ ಕೆಲಸ ಮುಗಿಸಿ ಮರಳುತ್ತಿದ್ದ ವೇಳೆ ಅಸೌಖ್ಯಕ್ಕೆ ಒಳಗಾಗಿದ್ದು, ಈ ವೇಳೆ ಮೇಸ್ತ್ರಿ ಅವರನ್ನು ನೇರವಾಗಿ ಮನೆಗೆ ಕರೆದುಕೊಂಡು ಬಂದಿದ್ದರು ಎನ್ನಲಾಗಿದೆ. ಆದರೆ ಅದಾಗಲೇ ಅವರು ಮೃತಪಟ್ಟಿದ್ದರು ಎನ್ನಲಾಗಿದೆ. ಆಸ್ಪತ್ರೆಗೆ ಕರೆದುಕೊಂಡು ಹೋಗದೆ ನೇರವಾಗಿ ಮನೆಗೆ ಕರೆದುಕೊಂಡು ಬಂದ ಹೆನ್ರಿ ವಿರುದ್ಧ ಮನೆಯವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

   ಘಟನೆ ಬೆನ್ನಲ್ಲೇ ದಲಿತ ಸಂಘಟನೆಗಳು ಪುತ್ತೂರು ಟೌನ್ ಪೊಲೀಸ್ ಠಾಣೆ ಎದುರು ಜಮಾಯಿಸಿ ತಾವ್ರೋ ಅವರ ವಿರುದ್ಧ ಪ್ರತಿಭಟನೆ ನಡೆಸಿ, ಕ್ರಮಕ್ಕೆ ಒತ್ತಾಯಿಸಿದ್ದಾರೆ.ಪ್ರತಿಭಟನೆ ಬೆನ್ನಲ್ಲೇ ದಕ್ಷಿಣ ಕನ್ನಡ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್ ಅವರು ಪಿಕಪ್ ಟ್ರಕ್ ಚಾಲಕನನ್ನು ಬಂಧಿಸಿದ್ದು, ತಲೆಮರೆಸಿಕೊಂಡಿರುವ ತಾವ್ರೋ ಗಾಗಿ ಹುಡುಕಾಟ ಆರಂಭಿಸಿದ್ದಾರೆ.

   ಕಾರ್ಮಿಕನ ಸಾವಿಗೆ ಪ್ರಮುಖ ಕಾರಣ ತಿಳಿದುಬಂದಿಲ್ಲ. ಮೇಲ್ನೋಟಕ್ಕೆ ಕಾರ್ಮಿಕರ ಕುರಿತು ನಿರ್ಲಕ್ಷ್ಯ ತೋರಿರುವುದು ಪತ್ತೆಯಾಗಿದೆ. ಗಿರಣಿ ಮಾಲೀಕ ತಾವ್ರೋ ತಲೆಮರೆಸಿಕೊಂಡಿದ್ದು, ಹುಡುಕಾಟ ಶುರುವಾಗಿದೆ. ಶಿವಪ್ಪ ಹೃದಯಾಘಾತದಿಂದ ಮೃತಪಟ್ಟಿರುವುದು ಮರಣೋತ್ತರ ಪರೀಕ್ಷೆಯಲ್ಲಿ ದೃಢಪಟ್ಟಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Recent Articles

spot_img

Related Stories

Share via
Copy link