ನಾಳೆ ರಾಜ್ಯ ಬಜೆಟ್: ಚುನಾವಣೆ ಬಂಪರ್ ಕೊಡುಗೆ ನಿರೀಕ್ಷೆ

 ಗಗನ ಕುಸುಮವಾದ ಸರ್ಕಾರಿ ಮೆಡಿಕಲ್ ಕಾಲೇಜು, ಏರ್‌ಪೋರ್ಟ್ ಬೇಡಿಕೆ ಈಡೇರುವುದೇ?

 ತುಮಕೂರು

ಎಸ್.ಹರೀಶ್ ಆಚಾರ್ಯ

     ನಾಳೆ ಮಂಡನೆಯಾಗಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅವಧಿಯ ಕಡೇ ಬಜೆಟ್ ಮುಂಬರುವ ವಿಧಾನಸಭೆ ಚುನಾವಣೆ ದೃಷ್ಟಿಯಿಂದ ಮಹತ್ವ ಪಡೆದಿದ್ದು, ತುಮಕೂರು ಜಿಲ್ಲೆಗೆ ಈ ಬಾರಿಯ ಬಜೆಟ್‌ನಲ್ಲಿ ಬಂಪರ್ ಕೊಡುಗೆ ಸಿಗುವ ನಿರೀಕ್ಷೆ ಹೆಚ್ಚು ಗರಿಗೆದರಿದೆ.

    ಕಳೆದ ವರ್ಷದ ಬಜೆಟ್‌ನಲ್ಲಿ 20 ಕೋಟಿ ವೆಚ್ಚದ ಟ್ರೋಮ್ ಕೇರ್ ಸೆಂಟರ್ ಜಿಲ್ಲಾಕೇಂದ್ರಕ್ಕೆ ಘೋಷಿಸಲಾಗಿತ್ತಾದರೂ ಅದನ್ನು ಸ್ಮಾರ್ಟ್ಸಿಟಿ ಅನುದಾನದಡಿ ಸ್ಥಾಪಿಸಿದ್ದರಿಂದ ಈ ಅನುದಾನವನ್ನು ನರ್ಸಿಂಗ್ ಕಾಲೇಜು ಕಟ್ಟಡಕ್ಕೆ ವರ್ಗಾಯಿಸಲಾಗಿದೆ ಎಂಬ ಮಾಹಿತಿ ಶಾಸಕರಿಂದ ಲಭ್ಯವಾಗಿದೆ. ಇನ್ನೂ ಬಜೆಟ್‌ನಲ್ಲಿ ಘೋಷಿತವಾದ ಉಪ ಕ್ಯಾನ್ಸರ್ ಕೇಂದ್ರ, ತಾಯಿ-ಮಗು ಆಸ್ಪತ್ರೆ, ಹೃದ್ರೋಗ ಚಿಕಿತ್ಸಾ ಕೇಂದ್ರ ಅನುಷ್ಟಾನ ಹಂತದಲ್ಲಿದ್ದು, ಪ್ರಮುಖವಾಗಿ ವೈದ್ಯಕೀಯ ವಿದ್ಯಾರ್ಥಿಗಳ ಪಿಜೆ ಸೆಂಟರ್ ಅನ್ನು ಜಿಲ್ಲಾಸ್ಪತ್ರೆಯಲ್ಲಿ ಸ್ಥಾಪಿಸುವುದಾಗಿ ಮಾಡಿದ್ದ ಘೋಷಣೆ,

   ಸಕ್ಷಮ ಪ್ರಾಧಿಕಾರದ ಅನುಮತಿ ಸಿಗದೆ ಸರ್ಕಾರಿ ವೈದ್ಯಕೀಯ ಪಿಜಿಸೆಂಟರ್ ಸಹ ಜಿಲ್ಲೆಗೆ ಮರೀಚಿಕೆ ಯಾಗಿದೆ.

   ಇನ್ನೂ ಹಿಂದೆ ಮಂಜೂರಾಗಿದ್ದ ಸರ್ಕಾರಿ ಮೆಡಿಕಲ್ ಕಾಲೇಜು ಸ್ಥಾಪನೆ ಬೇಡಿಕೆ ಬರೀ ಬೇಡಿಕೆಯಾಗಿಯೇ ಉಳಿದಿದ್ದು, ಜಿಲ್ಲಾ ಕೇಂದ್ರದಲ್ಲಿ ಈಗಾಗಲೇ ಮೂರು ಖಾಸಗಿ ಮೆಡಿಕಲ್ ಕಾಲೇಜುಗಳು ಇರುವುದರಿಂದ ಸರ್ಕಾರಿ ಮೆಡಿಕಲ್ ಕಾಲೇಜು ಈ ಬಾರಿಯೂ ಜಿಲ್ಲೆಗೆ ಸಿಗುವುದೇ ಅನುಮಾನ ಎನ್ನುವ ಮಾತುಗಳೇ ಹೆಚ್ಚಾಗಿ ಕೇಳಿಬರುತ್ತದೆ.

   ಇನ್ನೂ ಜಿಲ್ಲೆಯ ಪಾಲಿಗೆ ಮಹತ್ವಕಾಂಕ್ಷೆಯ ಯೋಜನೆಗಳೆನಿಸಿದ ಎತ್ತಿನಹೊಳೆ ಯೋಜನೆ, ತುಮಕೂರು ರಾಯದುರ್ಗ, ತುಮಕೂರು ದಾವಣಗೆರೆ ರೈಲು ಮಾರ್ಗ ಯೋಜನೆಗಳಿಗೂ ನಿರೀಕ್ಷಿತ ಅನುದಾನ ಲಭ್ಯವಾಗದೆ ಯೋಜನೆಗಳು ಕುಂಟುತ್ತಾ ಸಾಗಿವೆ. ಸರ್ಕಾರ ಪ್ರಸ್ತುತ ಎತ್ತಿನ ಹೊಳೆ ಯೋಜನೆ ವೆಚ್ಚವನ್ನು 23,500 ಕೋಟಿಗೆ ಹೆಚ್ಚಳ ಮಾಡಿದ್ದು, ಫೆ.14ರಂದು ಸದನದಲ್ಲಿ ಸರ್ಕಾರದ ಪರವಾಗಿ ಸಚಿವ ಮಾಧುಸ್ವಾಮಿ ಅವರೇ ಇನ್ನೆರೆಡು ತಿಂಗಳಲ್ಲಿ ಎತ್ತಿನಹೊಳೆ ಭೂಸ್ವಾಧೀನ ಅವಾರ್ಡ್ ಪ್ರಕ್ರಿಯೆ ಪೂರ್ಣಗೊಳಿಸುವುದಾಗಿ ಘೋಷಿಸಿದ್ದಾರೆ.

   ಇದರ ಆಧಾರದಲ್ಲಿ ಬಜೆಟ್‌ನಲ್ಲಿ ಯೋಜನೆಗೆ ಹೆಚ್ಚಿನ ಅನುದಾನದ ನಿರೀಕ್ಷೆ ಹುಟ್ಟಿಹಾಕಿದೆ.ಈಗಾಗಲೇ ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರದ 5300 ಕೋಟಿ ಅನುದಾನ ಬಜೆಟ್‌ನಲ್ಲಿ ಒದಗಿಸಿದ್ದು, ಎತ್ತಿನಹೊಳೆ ಯೋಜನೆಗೂ ಇದೇ ರೀತಿ ಕೇಂದ್ರದ ಅನುದಾನಕ್ಕೆ ಮೊರೆಹೋಗಲಾಗುವುದೇ, ಅಥವಾ ತನ್ನ ಬಜೆಟ್‌ನಲ್ಲೆ ಅನುದಾನ ಒದಗಿಸುವುದೇ ನಾಳಿನ ಬಜೆಟ್‌ನಲ್ಲಿ ತಿಳಿಯಲಿದೆ.

   ಮಿನಿ ಆಹಾರಪಾರ್ಕ್ ಎಲ್ಲಿ?: ಎಲ್ಲಾ ಜಿಲ್ಲೆಗಳಿಗೆ ಮಿನಿ ಆಹಾರ ಪಾರ್ಕ್ ಅನ್ನು ಸ್ಥಾಪಿಸುವುದಾಗಿ ಕಳೆದ ಬಜೆಟ್‌ನಲ್ಲಿ ಘೋಷಿಸಿದ್ದ ರಾಜ್ಯ ಸರ್ಕಾರದ ಯೋಜನೆ, ತುಮಕೂರು ಜಿಲ್ಲೆಯಲ್ಲಿ ಎಲ್ಲಿ ಅನುಷ್ಟಾನಗೊಂಡಿದೆ ಎಂಬ ಮಾಹಿತಿ ಇಲ್ಲ. ಹಿಂದೆ ವಸಂತಾ ನರಸಾಪುರದಲ್ಲಿ ಕೇಂದ್ರ ಸರ್ಕಾರದ ನೆರವಿನೊಂದಿಗೆ ಪ್ರಧಾನಿಯವರಿಂದಲೇ ಲೋಕಾರ್ಪಣೆಗೊಂಡ ಮೆಗಾ ಪುಡ್ ಪಾರ್ಕ್ ಜಿಲ್ಲೆಯ ರೈತರ ಪಾಲಿಗೆ ಒಂದಿಷ್ಟು ಪ್ರಯೋಜನವಾಗದೆ ನಿರಾಶೆ ಮೂಡಿಸಿದೆ.

    ಕಲ್ಪತರು ನಾಡೆಂದು ಕರೆಯಲ್ಪಡುವ ತುಮಕೂರು ಜಿಲ್ಲೆಯ ಪ್ರಮುಖ ಬೆಳೆಯಾದ ತೆಂಗನ್ನು ಒಂದು ಜಿಲ್ಲೆ, ಒಂದು ಉತ್ಪನ್ನದಡಿ ಬ್ರಾö್ಯಂಡ್ ಮಾಡಿದ್ದರೂ, ತೆಂಗು, ತೆಂಗಿನ ಉತ್ಪನ್ನಗಳಿಗೆ ಹೆಚ್ಚಿನ ಮೌಲ್ಯ ತಂದುಕೊಡುವ ಯೋಜನೆಗಳು ಅನುಷ್ಟಾನಗೊಂಡಿಲ್ಲ. ತೆಂಗು ಪಾರ್ಕ್ ಬೇಡಿಕೆ ಬೇಡಿಕೆಯಾಗಿಯೇ ಉಳಿದಿದ್ದು, ಇತ್ತೀಚೆಗೆ ಕೊಬ್ಬರಿ ಬೆಲೆ ಕುಸಿದು ರೈತರು ಕಂಗಾಲಾಗಿದ್ದಾರೆ.

   ಬೆಲೆ ತೀವ್ರ ಇಳಿಮುಖವಾಗುವ ಸಂದರ್ಭದಲ್ಲಿ ಮಾತ್ರ ಬೆಂಬಲ ಬೆಲೆಯಡಿ ಕೊಬ್ಬರಿ ಖರೀದಿಗೆ ಮುಂದಾಗುವ ಸರ್ಕಾರ, ಬಜೆಟ್‌ನಲ್ಲಿ ನಿಗದಿತ ಸಹಾಯಧನ ಎತ್ತಿಟ್ಟು ಕೊಬ್ಬರಿ ಬೆಳೆಗಾರರ ನೆರವಿಗೆ ನಿರಂತರವಾಗಿ ನಿಲ್ಲುವ ಅಗತ್ಯವಿದೆ. ಇನ್ನೂ ಜಿಲ್ಲೆಯನ್ನು ಹುಣಸೆಯನ್ನು ಅಧಿಕ ಪ್ರಮಾಣದಲ್ಲಿ ಬೆಳೆಯುತ್ತಿದ್ದು, ಈ ಬಾರಿ ಉತ್ತಮ ಫಸಲು ಬಂದರೂ ಮಾರುಕಟ್ಟೆಯಲ್ಲಿ ಬೆಲೆಯಿಲ್ಲದೆ ರೈತರು ಕಂಗಾಲಾಗಿದ್ದಾರೆ. ಅಡಿಕೆ ಬೆಳೆಗಾರರ ಸ್ಥಿತಿಯೂ ಇದೇ ಆಗಿದೆ. ಸಿರಿಧಾನ್ಯಕ್ಕೆ ಉತ್ತೇಜಿಸುತ್ತೇವೆನ್ನುವ ಸರ್ಕಾರ ಪ್ರಮುಖ ಸಿರಿಧಾನ್ಯವಾದ ರಾಗಿ ಬೆಳೆಗಾರರಿಗೆ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಗಮನ ಹರಿಸುತ್ತಿಲ್ಲ.

   ಜಲಾನಯನ ಯೋಜನೆ, ಸಹಜ ಕೃಷಿಗೆ ಬಜೆಟ್‌ನಲ್ಲಿ ಆದ್ಯತೆ ಸಿಗಬೇಕು, ಹವಾಮಾನ ವೈಪರಿತ್ಯಕ್ಕೆ ಗಮನಹರಿಸಬೇಕು ಎಂಬ ನಿರೀಕ್ಷೆಯನ್ನು ಇಟ್ಟುಕೊಂಡಿರುವುದಾಗಿ ಸಹಜ ಕೃಷಿ ಚಿಂತಕ ಸಿ.ಯತಿರಾಜು ತಿಳಿಸುತ್ತಾರೆ.

   ಹಳೇ ಮೈಸೂರು ಭಾಗದಲ್ಲಿ ಪಕ್ಷವನ್ನು ಅತ್ಯಧಿಕ ಸ್ಥಾನದಲ್ಲಿ ಗೆಲ್ಲಬೇಕೆಂಬ ಗುರಿ ಹಾಕಿಕೊಂಡಿರುವ ರಾಜ್ಯ ಬಿಜೆಪಿ ಸರ್ಕಾರ, ಜಿಲ್ಲೆಯಲ್ಲಿರುವ ಹಾಲಿ ಐವರು ಬಿಜೆಪಿ ಶಾಸಕರ ಜೊತೆಗೆ ಉಳಿಕೆ ಕ್ಷೇತ್ರ ಗಳಲ್ಲೂ ಕಮಲ ಅರಳಿಸಲು ಈ ಬಜೆಟ್ ಕೊಡುಗೆಗಳು ಪೂರಕವಾಗುವಂತೆ ಪ್ಲಾನ್ ಮಾಡಿದೆ ಎಂಬ ಚರ್ಚೆಗಳು ಕಮಲ ಪಾಳಯದಲ್ಲಿ ಸಾಗಿದೆ. ಆದರೆ ವಿಪಕ್ಷ ಕಾಂಗ್ರೆಸ್, ಜೆಡಿಎಸ್‌ನಾಯಕರು ಮಾತ್ರ ಬಜೆಟ್ ಕೊಡುಗೆಗಳ ಬಗ್ಗೆ ವ್ಯಂಗ್ಯವಾಡಿದ್ದು, ಹಿಂದಿನ ಬಜೆಟ್‌ನಲ್ಲಿ ಮಾಡಿದ ಘೋಷಣೆಗಳೇ ಘೋಷಣೆಗಳಾಗಿ ಉಳಿದಿವೆ.

   ಪ್ರಸ್ತುತ ಮಂಡಿಸುತ್ತಿರುವ ಆಯವ್ಯಯವನ್ನು ಬಜೆಟ್ ಎಂದು ಕರೆಯಲು ಸಾಧ್ಯವಿಲ್ಲ. ಇನ್ನೆರೆಡು ತಿಂಗಳಲ್ಲಿ ಈ ಸರ್ಕಾರವೇ ಇರುವುದಿಲ್ಲ. ಹೊಸ ಸರ್ಕಾರ ಚುಕ್ಕಾಣಿ ಹಿಡಿದವರು ಮತ್ತೆ ಬಜೆಟ್ ಮಂಡಿಸಲಿದ್ದು, ಅದು ಸಾಕಾರಕ್ಕೆ ಬರುವ ಬಜೆಟ್ ಆಗಲಿದೆ. ಕೊಡುಗೆ ಘೋಷಣೆಗಳೆಲ್ಲ ಬರೀ ಚುನಾವಣೆ ಗಿಮಿಕ್ ಆಗಲಿದೆ ಎಂದು ಅಭಿಪ್ರಾಯಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap