ಮುಡಾ ಹಗರಣ : ಖರ್ಗೆ ಭೇಟಿ ಮಾಡಿದ ಕರ್ನಾಟಕದ ನೀಯೋಗ..!

ಬೆಂಗಳೂರು:

   ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಹಲವು ಸಂಕಷ್ಟಗಳು ಎದುರಾಗಿದೆ. ಮುಡಾ ಹಾಗೂ ವಾಲ್ಮೀಕಿ ಹಗರಣಗಳು ಸರ್ಕಾರಕ್ಕೆ ಕಂಟಕವನ್ನ ತಂದಿದ್ದು, ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ವಿಪಕ್ಷಗಳು ಆಗ್ರಹಿಸುತ್ತಿವೆ. ಈ ನಡುವಲ್ಲೇ ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಂಪುಟ ಸಹೋದ್ಯೋಗಿಗಳು ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ್‌ ಖರ್ಗೆ ಅವರನ್ನು ಭೇಟಿ ಮಾಡಿ, ಮಾತುಕತೆ ನಡೆಸಿದ್ದಾರೆಂದು ತಿಳಿದುಬಂದಿದೆ.

   ಕಾಂಗ್ರೆಸ್ ನಾಯಕರು ಭಾನುವಾರ ರಾತ್ರಿ ಮಲ್ಲಿಕಾರ್ಜುನ ಖರ್ಗೆಯವರನ್ನು ಭೇಟಿ ಮಾಡಿದ್ದು, 2 ಗಂಟೆಗಳ ಕಾಲ ಸಭೆ ನಡೆಸಿ ಮಾತುಕತೆ ನಡೆಸಿದ್ದಾರೆ. ಮಾತುಕತೆ ವೇಳೆ ಸರ್ಕಾರಕ್ಕೆ ಯಾವುದೇ ಸಮಸ್ಯೆಯಾಗದಂತೆ ಮಾರ್ಗಗಳು, ನ್ಯಾಯಾಲಯಗ ತೀರ್ಪಿನ ಸಾಧಕ-ಬಾಧಕಗಳು, ಪರಿಣಾಮ ಮತ್ತು ಪಕ್ಷದ ನಿಲುವು ಕುರಿತು ಚರ್ಚೆ ನಡೆಸಿದ್ದಾರೆಂದು ಮೂಲಗಳು ತಿಳಿಸಿವೆ.

   ಪ್ರತಿಪಕ್ಷ ಬಿಜೆಪಿ ಮತ್ತು ಜೆಡಿಎಸ್ ಪರಿಸ್ಥಿತಿಯ ಲಾಭ ಪಡೆಯದಂತೆ ಸರ್ಕಾರ ಮತ್ತು ಪಕ್ಷವನ್ನು ರಕ್ಷಿಸುವ ಬಗ್ಗೆಯೂ ಚರ್ಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

   ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯ ಅವರನ್ನು ವಿಚಾರಣೆಗೆ ಒಳಪಡಿಸಲು ರಾಜ್ಯಪಾಲ ತಾವರಚಂದ್ ಗೆಹ್ಲೋಟ್ ಅನುಮತಿ ನೀಡಿದ ಹಿನ್ನೆಲೆಯಲ್ಲಿ ಖರ್ಗೆ ಶನಿವಾರ ಬೆಂಗಳೂರಿಗೆ ಆಗಮಿಸಿದ್ದರು. ಈ ವೇಳೆ ಶಾಸಕರು, ಸಚಿವರು ಸೇರಿದಂತೆ ಹಲವು ಮುಖಂಡರು ಭೇಟಿ ಮಾಡಿ, ಮಾತುಕತೆ ನಡೆಸಿದರು ಎಂದು ತಿಳಿದುಬಂದಿದೆ.

   ವಿಧಾನಸೌಧದಲ್ಲಿ ಗುರುವಾರ ಸಂಜೆ 4 ಗಂಟೆಗೆ ಸಿದ್ದರಾಮಯ್ಯ ನೇತೃತ್ವದಲ್ಲಿ ಸಿಎಲ್‌ಪಿ ಸಭೆ ನಡೆಯಲ್ಲಿದ್ದು, ಸಿಎಂ ಸೇರಿದಂತೆ ಶಾಸಕರು ಯಾವುದೇ ಸಂದರ್ಭದಲ್ಲೂ ಪಕ್ಷದ ಹೈಕಮಾಂಡ್ ನಿರ್ಧಾರಕ್ಕೆ ಬದ್ಧರಾಗುವ ನಿರ್ಣಯವನ್ನು ಅಂಗೀಕರಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

  ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಅವರ ಸಲಹೆ ಹಾಗೂ ಸೂಚನೆಯಂತೆ ರಾಜ್ಯಕ್ಕೆ ಬಂದ ಖರ್ಗೆಯವರು, ನಾಯಕತ್ವ ಬದಲಾವಣೆಯ ಬಗ್ಗೆ ಯಾವುದೇ ಮಾತುಗಳನ್ನೂ ಆಡದೆ ಮರಳಿ ಸೋಮವಾರ ದೆಹಲಿಗೆ ವಾಪಸ್ಸಾದರು.ದೆಹಲಿಗೆ ತೆರಳಿರುವ ಖರ್ಗೆಯವರು, ರಾಜ್ಯ ರಾಜಕೀಯ ಪರಿಸ್ಥಿತಿಯ ಕುರಿತು ಅವರೊಂದಿಗೆ ಚರ್ಚಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

   ರಾಜ್ಯಕ್ಕೆ ಭೇಟಿ ನೀಡಿದ್ದ ಖರ್ಗೆಯವರು ಬಿಜೆಪಿಯೇತರ ಆಡಳಿತವಿರುವ ರಾಜ್ಯಗಳಲ್ಲಿ ಬಿಜೆಪಿ ರಾಜ್ಯಪಾಲರನ್ನು ದುರುಪಯೋಗ ಪಡಿಸಿಕೊಳ್ಳುತ್ತಿದೆ ಎಂದು ಹೇಳಿಕೆ ನೀಡಿದ್ದು ಬಿಟ್ಟರೆ, ಜಾಣತನದಿಂದಲೇ ಮಾಧ್ಯಮಗಳಿಂದ ಅಂತರ ಕಾಯ್ದುಕೊಂಡಿದ್ದು ಕಂಡು ಬಂದಿತು.ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಖರ್ಗೆಯವರನ್ನು ಭೇಟಿ ಮಾಡಿ ಮಾತುಕತೆ ನಡೆಸಲಾಗಿದೆ. ಆಗಸ್ಟ್ 23ರಂದು ದೆಹಲಿಗೆ ಭೇಟಿ ನೀಡುತ್ತೇನೆಂದು ತಿಳಿಸಿದರು.

Recent Articles

spot_img

Related Stories

Share via
Copy link
Powered by Social Snap