ಬೆಂಗಳೂರು
ನೇಮಕಾತಿ ಸಂಬಂಧ ಸರ್ಕಾರ ನಡೆಸುವ ಬಹುತೇಕ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಇತ್ತೀಚೆಗೆ ಒಂದಲ್ಲ ಒಂದು ಎಡವಟ್ಟುಗಳು ನಡೆಯುತ್ತಲೇ ಇವೆ. ಎಷ್ಟೇ ನಿಗಾವಹಿಸಿ ಪರೀಕ್ಷೆ ನಡೆಸಿದರೂ ತಪ್ಪುಗಳು ಕಂಡು ಬರುತ್ತಿವೆ. ಆದರೆ, ಈ ತಪ್ಪುಗಳಲ್ಲಿಯೂ ಸರ್ಕಾರ ಬೊಕ್ಕಸ ತುಂಬಿಸಿಕೊಳ್ಳಲು ಮುಂದಾಗಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ಎಡವಟ್ಟುಗಳಿಗೂ ಅಭ್ಯರ್ಥಿಗಳೇ ದಂಡ ತೆರಬೇಕಾಗಿ ಬಂದಿರುವುದು ಅಭ್ಯರ್ಥಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಈಗಾಗಲೇ ಸ್ಪರ್ಧಾತ್ಮಕ ನೇಮಕಾತಿ ಪರೀಕ್ಷೆಗಳ ಶುಲ್ಕವನ್ನು ಏರಿಕೆ ಮಾಡಲಾಗಿದೆ. ಇದು ಸಾಲದು ಎಂಬಂತೆ, ಕೆಇಎ ತಾನು ಪರೀಕ್ಷೆಗಳಲ್ಲಿ ಎಡವಟ್ಟು ಮಾಡಿ ಹಾಗೂ ತಪ್ಪಾದ ಪ್ರಶ್ನೆಗಳನ್ನು ನೀಡಿ ಸುಲಿಗೆಗೆ ಮುಂದಾಗಿದೆ! ಅಕ್ಷೇಪಣೆಯ ಹೆಸರಲ್ಲಿ ಕೋಟ್ಯಂತಂ ರೂಪಾಯಿ ಹಣ ವಸೂಲಿ ಮಾಡಲಾಗುತ್ತಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಕಳೆದ ವಾರ 402 ಪಿಎಸ್ಐ ಹುದ್ದೆಗಳ ನೇಮಕಾತಿ ಪರೀಕ್ಷೆಯಲ್ಲಿ 10ಕ್ಕೂ ಹೆಚ್ಚು ತಪ್ಪಾದ ಪ್ರಶ್ನೆಗಳನ್ನು ಕೇಳಿದೆ. ಈ ಪ್ರಶ್ನೆಗಳಿಗೆ ಅಭ್ಯರ್ಥಿಗಳು ಆಕ್ಷೆಪಣೆಗಳಿದ್ದರೆ ಸಲ್ಲಿಸುವಂತೆ ಕೋರಿದೆ. ಆದರೆ, ಆಕ್ಷೆಪಣೆ ಸಲ್ಲಿಸುವ ಪ್ರತಿ ಒಂದು ಪ್ರಶ್ನೆಗೂ ನೂರು ರೂಪಾಯಿ ಶುಲ್ಕ ವಿಧಿಸಿದೆ.
ಪ್ರತಿಯೊಂದು ತಪ್ಪಾದ ಪ್ರಶ್ನೆಗೆ ಆಕ್ಷೇಪಣೆ ಸಲ್ಲಿಸಲು 100 ರೂಪಾಯಿ ಹಣ ಕಟ್ಟಬೇಕು. ಅಂದರೆ, 10 ತಪ್ಪಾದ ಪ್ರಶ್ನೆಗಳಿಗೆ, ಪರೀಕ್ಷೆ ಬರೆದ ಲಕ್ಷಂತಾರ ಅಭ್ಯರ್ಥಿಗಳು 1,000 ರೂ.ನಷ್ಟು ಹೆಚ್ಚು ಹಣ ಪಾವತಿಸಿ ಆಕ್ಷೇಪಣೆ ಸಲ್ಲಿಸಬೇಕಾದ ದುಸ್ಥಿತಿ ನಿರ್ಮಾಣವಾಗಿದೆ.