ಬೆಂಗಳೂರು:
ಮಂಗಳವಾರ ನಡೆದ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಕರ್ನಾಟಕದಿಂದ ತಮಿಳುನಾಡಿಗೆ ಕಾವೇರಿ ನೀರು ನಿಯಂತ್ರಣಾ ಸಮಿತಿ (CWRC) ಹೇಳಿದಷ್ಟೇ ನೀರು ಬಿಡಬೇಕು, ಮಂಗಳವಾರದಿಂದಲೇ ತಮಿಳುನಾಡಿಗೆ ನೀರು ಬಿಡುಗಡೆ ಮಾಡಬೇಕೆಂದು ತೀರ್ಮಾನ ಮಾಡಲಾಗಿದೆ. ಇದರಿಂದ ಕರ್ನಾಟಕ ಮತ್ತೆ ಸಂಕಷ್ಟಕ್ಕೆ ಸಿಲುಕುವಂತಾಗಿದೆ.
ಈ ನಡುವೆ ಸಿಡಬ್ಲ್ಯುಆರ್‌ಸಿ ನಿರ್ದೇಶನದ ವಿರುದ್ಧ ಮಂಡ್ಯದಲ್ಲಿ ಮಂಗಳವಾರ ರೈತರು ಬೃಹತ್ ಪ್ರತಿಭಟನೆ ನಡೆಸಿದರು. ಈ ವೇಳೆ ಕೆಲಕಾಲ ಮೈಸೂರು-ಬೆಂಗಳೂರು ಹೆದ್ದಾರಿ ತಡೆಹಿಡಿದರು.
ಸಭೆ ಬಳಿಕ ಸುದ್ದಿಕಾರರೊಂದಿಗೆ ಮಾತನಾಡಿದ ಡಿ,ಕೆ.ಶಿವಕುಮಾರ್ ಅವರು, ಸುಪ್ರೀಂಕೋರ್ಟ್ ಚಾಟಿ ಬೀಸಬೇಕೆಂದು ಬಯಸುತ್ತಿದ್ದೀರಾ? ನಾನು ಅದನ್ನು ಬಯಸುವುದಿಲ್ಲ. ಮುಖ್ಯಮಂತ್ರಿ ಹಾಗೂ ಕಾನೂನು ತಂಡದೊಂದಿಗೆ ಚರ್ಚೆ ನಡೆಸುತ್ತಿದ್ದೇವೆಂದು ಹೇಳಿದರು.
ಕಾವೇರಿ ನದಿ ನೀರು ವಿಚಾರ ಕುರಿತ ನಿರ್ಧಾರ ಕೇಂದ್ರ ಸರ್ಕಾರದ ಬಳಿ ಇದೆ. ಈಗಾಗಲೇ ನಾವು ಅಡ್ವೊಕೇಟ್ ಜನರಲ್ ಅವರಿಂದ ಸಲಹೆಯನ್ನು ತೆಗೆದುಕೊಳ್ಳುತ್ತಿದ್ದೇವೆ. ನಮ್ಮ ವಕೀಲರು ಮತ್ತು ಅಧಿಕಾರಿಗಳು ಪ್ರಬಲವಾಗಿ ವಾದ ಮಂಡಿಸುತ್ತಿದ್ದಾರೆ. ರೈತರಿಗೂ ವಾಸ್ತವತೆ ಗೊತ್ತಿದೆ. ಮಂಗಳವಾರ ರಾತ್ರಿಯಿಂದಲೇ ನೀರು ಬಿಡುವಂತೆ ಸಿಡಬ್ಲ್ಯುಎಂಎ ಆದೇಶ ನೀಡಿದೆ. ಆದರೆ, ನಾವು ಇದರ ಸಾಧಕ-ಬಾಧಕಗಳನ್ನು ಪರಿಶೀಲಿಸಬೇಕಾಗಿದೆ ಎಂದು ತಿಳಿಸಿದರು.
ತಮಿಳುನಾಡು ದಿನಕ್ಕೆ 24,000 ಕ್ಯೂಸೆಕ್ ನೀರು ಬಿಡುಗಡೆ ಮಾಡುವಂತೆ ಆಗ್ರಹಿಸಿದೆ. ಆದರೆ, ಕರ್ನಾಟಕದ ಅಣೆಕಟ್ಟುಗಳಿಗೆ ಒಳಹರಿವು ದುರ್ಬಲವಾಗಿರುವುದರಿಂದ ಅಷ್ಟು ಪ್ರಮಾಣದ ನೀರು ಬಿಡುಗಡೆ ಮಾಡಲು ಸಾಧ್ಯವಿಲ್ಲ ಎಂದು ರಾಜ್ಯದ ತಾಂತ್ರಿಕ ಮತ್ತು ಕಾನೂನು ತಂಡ ವಾದಿಸಿದೆ. ಪ್ರಸ್ತುತ, ಕೆಆರ್‌ಎಸ್ ಜಲಾಶಯದಲ್ಲಿ 15 ಟಿಎಂಸಿಯಷ್ಟು ನೀರಿದ್ದು, ಕಬಿನಿಯಲ್ಲಿ ಕೇವಲ 3 ಟಿಎಂಸಿ ನೀರಿದೆ ಎಂದು ಹೇಳಿದ್ದಾರೆ.
ಈ ನಡುವೆ ತಮಿಳುನಾಡಿಗೆ ನೀರು ಬಿಡುಗಡೆ ಮಾಡಲು ನೀರಾವರಿ ಅಧಿಕಾರಿಗಳು ಸಿದ್ಧತೆ ನಡೆಸುತ್ತಿದ್ದು, ಈ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಖಚಿತಪಡಿಸಿಕೊಳ್ಳಲು, ಕೆಆರ್‌ಎಸ್ ಮತ್ತು ಸುತ್ತಮುತ್ತ ಮತ್ತು ಮೈಸೂರು ಮತ್ತು ಮಂಡ್ಯ ಜಿಲ್ಲೆಗಳಲ್ಲಿ ಪೊಲೀಸ್ ಭದ್ರತೆಯನ್ನು ಬಿಗಿಗೊಳಿಸಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ